“ಡೆಂಟಲ್ ಟ್ರಾನ್ಸ್ ಪ್ಲಾಂಟೇಷನ್”- ಡಾ. ಚೂಂತಾರು

(ನ್ಯೂಸ್ ಕಡಬ) newskadaba.com ಸೆ. 28. ಒಬ್ಬ ವ್ಯಕ್ತಿಯ ಬಾಯಿಯೊಳಗೆ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹಲ್ಲನ್ನು ಸುರಕ್ಷಿತವಾಗಿ ಸರ್ಜರಿ ಮುಖಾಂತರ ಸ್ಥಳಾಂತರಿಸುವುದನ್ನು ಡೆಂಟಲ್ ಟ್ರಾನ್ಸ್‍ಪ್ಲಾಂಟ್ ಎಂದು ಕರೆಯುತ್ತಾರೆ. ಅಟೋಜೀನಸ್ ಟ್ರಾನ್ಸ್‍ ಪ್ಲಾಂಟ್ ಅಥವಾ ಟ್ರಾನ್ಸ್‍ ಪ್ಲಾಂಟೇಶನ್ ಎಂದೂ ಕರೆಯುತ್ತಾರೆ. ಒಬ್ಬ ವ್ಯಕ್ತಿಯ ನೈಸರ್ಗಿಕ ಹಲ್ಲನ್ನು ಇನ್ನೊಂದು ವ್ಯಕ್ತಿಗೆ ಬದಲಿ ಜೋಡಣೆ ಮಾಡಲು ಸಾಧ್ಯವಿಲ್ಲ. ಆದರೆ ಒಬ್ಬ ವ್ಯಕ್ತಿಯ ಬಾಯಿಯೊಳಗೆ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹಲ್ಲನ್ನು ಸ್ಥಳಾಂತರಿಸಲು ಸಾಧ್ಯವಿದೆ. ಬಹಳ ಜಾಗರೂಕತೆಯಿಂದ  ಮಾಡಬೇಕಾದ ಸೂಕ್ಷ್ಮ ಮತೀಯ ಸರ್ಜರಿ ಇದಾಗಿದ್ದು, ಹಲ್ಲಿನ ಬೇರಿನ ಜಾಗಕ್ಕೆ ಯಾವುದೇ ರೀತಿಯ  ಘಾಸಿ ಮಾಡಬಾರದು. ಹಿಂದಿನ ಕಾಲದಲ್ಲಿ ಆಂಟಿಬಯೋಟಿಕ್ ಅಲಭ್ಯತೆಯಿಂದ ಈ ಅಟೋಟ್ರಾನ್ಸ್‍ ಪ್ಲಾಂಟೇಶನ್ ಯಶಸ್ಸಿಯಾಗಿರಲಿಲ್ಲ. ಈಗ ಸುರಕ್ಷಿತವಾದ ಆಂಟಿಬಯೋಟಿಕ್‍ ಗಳ ಲಭ್ಯತೆ, ಸರ್ವ ಸುಸಜ್ಜಿತ ಸಲಕರಣೆಗಳು ಮೂರು ಆಯಾಮದ ಕ್ಷ-ಕಿರಣದ ಲಭ್ಯತೆ ಮತ್ತು ಕೌಶಲ್ಯಭರಿತ ವ್ಯೆದ್ಯರ ಕೈ ಚಳಕದಿಂದಾಗಿ ಈ ಅಟೋಟ್ರಾನ್ಸ್‍ ಪ್ಲಾಂಟೇಶನ್ ಹೆಚ್ಚು ಸುರಕ್ಷಿತ ಮತ್ತು ಧನಾತ್ಮಕ ಫಲಿತಾಂಶ ನೀಡುತ್ತದೆ.

ಎಲ್ಲಿ ಮಾಡುತ್ತಾರೆ ?

ಸಾಮಾನ್ಯವಾಗಿ ಕೆಳಗಿನ ದವಡೆಯ ಮೊದಲನೇ ದವಡೆ ಹಲ್ಲು ಹೆಚ್ಚಾಗಿ ಹುಳುಕಾಗಿ ಬೇಗನೆ ಹಾಳಾಗುತ್ತದೆ. ಇದು ಮೊದಲು ಬರುವ ದವಡೆ ಹಲ್ಲಾಗಿದ್ದು ಸುಮಾರು 7 ರಿಂದ 8 ವರ್ಷಕ್ಕೆ  ಬಾಯಿಯೊಳಗೆ ಮೂಡುತ್ತದೆ. ಮಕ್ಕಳು ಹಲ್ಲಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸದೇ ಇರುವ ಕಾರಣದಿಂದ  ಹೆಚ್ಚಿನ  ಸಂದರ್ಭಗಳಲ್ಲಿ ದಂತ ವ್ಯೆದ್ಯರ ಬಳಿ ಬಂದಾಗ ಹಲ್ಲು ಪೂರ್ತಿಯಾಗಿ ಹಾಳಾಗಿ ಬೇರುನಾಳ ಚಿಕಿತ್ಸೆ ಮಾಡಿ ಉಳಿಸಲು ಆಗದ ಸ್ಥಿತಿಗೆ ಬಂದಿರುತ್ತದೆ. ಇಂತಹ ಸಂದರ್ಭಗಳಲ್ಲಿ ಮೂರನೆ ದವಡೆ ಹಲ್ಲನ್ನು ಪೂರ್ತಿಯಾಗಿ ಸರ್ಜರಿ ಮುಖಾಂತರ ತೆಗೆದು ಅದನ್ನು ಮೊದಲನೇ ದವಡೆ ಹಲ್ಲು ಕಿತ್ತ ಜಾಗಕ್ಕೆ ಸ್ಥಳಾಂತರ ಮಾಡಲಾಗುತ್ತದೆ. ಯಾವುದೇ ರೀತಿಯ ಸೋಂಕು ತಗಲದಂತೆ ಎಲ್ಲಾ ರೀತಿಯ ಮುಂಜಾಗರೂಕತೆ ತೆಗೆದುಕೊಂಡು ದಂತ ಕ್ಷಕಿರಣದ ಮುಖಾಂತರ ದವಡೆ ಹಲ್ಲಿನ ಬೇರಿನ ರಚನೆ, ಸಂಖ್ಯೆ, ಎಲುಬಿನ ಆಕಾರ ಗಾತ್ರಗಳನ್ನು ಪರಿಶೀಲನೆ ಮಾಡಿ ದಂತ ವ್ಯೆದ್ಯರು ಈ ಸಲಹೆಯನ್ನು ಮಾಡುತ್ತಾರೆ.

Also Read  ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ ಇಂದಿನಿಂದ ಆರಂಭ

ಯಾವಾಗ ಮಾಡುತ್ತಾರೆ?

ಸಾಮಾನ್ಯವಾಗಿ ಈ ಸರ್ಜರಿಯನ್ನು 20ರ ವಯಸ್ಸಿನಲ್ಲಿ ಮಾಡುತ್ತಾರೆ. ಮೂರನೇ ದವಡೆ ಹಲ್ಲು 17ರಿಂದ 21ರ ವಯಸ್ಸಿನಲ್ಲಿ ಬಾಯಿಯೊಳಗೆ ಮೂಡುತ್ತದೆ. 17ನೇ ವರ್ಷಕ್ಕೆ ಮೂರನೇ ದವಡೆ ಹಲ್ಲು ಸಂಪೂರ್ಣವಾಗಿ ಬೆಳೆದು ಬೇರಿನ ರಚನೆ ಸಂಪೂರ್ಣವಾಗಿರುತ್ತದೆ. ಈ ವಯಸ್ಸಿನಲ್ಲಿ ಹಾಳಾಗಿ ಹೋದ ಮೊದಲ ದವಡೆ ಹಲ್ಲನ್ನು ಸರ್ಜರಿ ಮುಖಾಂತರ ಬೇರು ಮುರಿಯದಂತೆ ಪೂರ್ತಿಯಾಗಿ ಕಿತ್ತು ತೆಗೆಯಲಾಗುತ್ತದೆ. ಈ ಹಲ್ಲಿನ  ಬೇರಿನ ಸುತ್ತಲಿನ ಎಲುಬಿಗೆ ಫಾಸಿಯಾಗದಂತೆ ನಿಗಾ ವಹಿಸಲಾಗುತ್ತದೆ. ಅದೇ ಸಮಯದಲ್ಲಿ ಅದೇ ದವಡೆಯ ಅದೇ ಭಾಗದ ಮೂರನೇ ದವಡೆ ಹಲ್ಲನ್ನು ಪೂರ್ತಿಯಾಗಿ ಕಿತ್ತು ಮೊದಲನೆ ದವಡೆ ಹಲ್ಲನ್ನು ಕಿತ್ತ ಭಾಗಕ್ಕೆ ಕೂರಿಸಿ ಜೋಡಿಸಲಾಗುತ್ತದೆ. ಮೂರನೇ ದವಡೆ ಹಲ್ಲು ಕಿತ್ತ ಜಾಗಕ್ಕೆ ಹೊಲಿಗೆ ಹಾಕಲಾಗುತ್ತದೆ. ಅದೇ ರೀತಿ ಮೊದಲಿನ ದವಡೆ ಹಲ್ಲಿನ ಜಾಗದಲ್ಲಿ ಮೂರನೇ ದವಡೆ ಹಲ್ಲನ್ನು ಸರಿಯಾಗಿ ಕೂರಿಸಿ, ಮೇಲುಗಡೆ ದವಡೆ ಹಲ್ಲಿನಿಂದ ಹೆಚ್ಚಿನ ಒತ್ತಡ ಬೀಳದಂತೆ ಜೋಡಿಸಲಾಗುತ್ತದೆ. ಹಲ್ಲಿನ ಸುತ್ತ ವಸಡನ್ನು ಬಿಗಿಯಾಗಿ ಹಲ್ಲಿಗೆ ಹೊಲಿಗೆ ಹಾಕಿ ಹಲ್ಲನ್ನು ಅಲುಗಾಡದಂತೆ ಬಿಗಿದಿಡಲಾಗುತ್ತದೆ.  ಎಲ್ಲಾ ಸರ್ಜರಿಯನ್ನು ಸ್ಥಳೀಯ ಅರಿವಳಿಕೆ ಇಂಜೆಕ್ಷನ್ ಕೊಟ್ಟು ಮಾಡಲಾಗುತ್ತದೆ. ಈ ಸರ್ಜರಿ ನಡೆಸಿದ ಬಳಿಕ ಎರಡು ವಾರಗಳ ಕಾಲ ಆ ಜಾಗದಲ್ಲಿ ಗಟ್ಟಿಯಾದ ಆಹಾರ ಅಗಿಯದಂತೆ ನಿರ್ದೇಶನ ನೀಡಲಾಗುತ್ತದೆ. ಸೋಂಕು ತಗಲಬಾರದೆಂಬ ದೃಷ್ಟಿಯಿಂದ ಆಂಟಿಬಯೋಟಿಕ್ ಔಷಧಿ ಹಾಗೂ ನೋವು ನಿವಾರಣೆಗೆ ನೋವು ನಿವಾರಕ ಔಷಧಿ ನೀಡುತ್ತಾರೆ.

Also Read  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾವತಿಯಿಂದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಗಳ ಸೇರ್ಪಡೆಗೆ ಅರ್ಜಿ ಆಹ್ವಾನ

ನುರಿತ ದಂತ ವೈದ್ಯರು ಅಥವಾ ಬಾಯಿ ಮುಖ ದವಡೆ ಶಸ್ತ್ರಚಿಕಿತ್ಸಕರು ಈ ಆಪರೇಷನ್ ಮಾಡುತ್ತಾರೆ. ಕೆಲವೊಂದು ಸಂದರ್ಭಗಳಲ್ಲಿ ಎರಡನೇ ದವಡೆ ಹಲ್ಲು ಹಾಳಾಗಿ ಹೋಗಿದ್ದಲ್ಲಿ, ಅದನ್ನು ಕಿತ್ತು ಅದರ ಜಾಗಕ್ಕೆ ಮೂರನೇ ದವಡೆ ಹಲ್ಲನ್ನು ಸ್ಥಳಾಂತರಿಸಲಾಗುತ್ತದೆ. ಒಟ್ಟಿನಲ್ಲಿ ಇದೊಂದು ಅತ್ಯಂತ ಸುರಕ್ಷಿತ ಮತ್ತು ನೋವು ರಹಿತ ಸರ್ಜರಿಯಾಗಿರುತ್ತದೆ. ಈಗಿನ ಕಾಲದಲ್ಲಿ ಯುವಜನರ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ 90 ಶೇಕಡಾ ಜನರಿಗೆ ಮೂರನೇ ದವಡೆ ಹಲ್ಲು ಸೃಷ್ಟಿಯಾದರೂ ಬಾಯಿಯೊಳಗೆ ಮೂಡುವುದೇ ಇಲ್ಲ. ಈ ದವಡೆ ಹಲ್ಲು ಹೊರಬರಲು ಬೇಕಾದಷ್ಟು ಜಾಗ ಸಿಗದೆ ಅದು ದವಡೆ ಒಳಗೆ ಸೇರಿಕೊಂಡು ಮುಂದೆ ಹಲವಾರು ತೊಂದರೆ ಸೃಷ್ಟಿಸುವ ಸಾಧ್ಯತೆ ಇರುತ್ತದೆ. ಹೀಗೆ ದವಡೆ ಒಳಗೆ ಸಿಕ್ಕಿ ಹಾಕಿಕೊಳ್ಳುವ ಮೂರನೇ ದವಡೆ ಹಲ್ಲನ್ನು ಸರ್ಜರಿ ಮುಖಾಂತರ ಪೂರ್ತಿಯಾಗಿ ಕಿತ್ತು, ಹಾಳಾಗಿ ಹೋದ ಹಲ್ಲು ಕಿತ್ತ ಜಾಗಕ್ಕೆ ಸ್ಥಳಾಂತರಿಸುವುದನ್ನೇ ಡೆಂಟಲ್ ಟ್ರಾನ್ಸ್‍ ಪ್ಲಾಂಟೇಷನ್ ಎಂದು ಕರೆಯುತ್ತಾರೆ. ಯಾವಾಗ, ಹೇಗೆ, ಎಲ್ಲಿ ಮಾಡುವುದು ಎಂಬುದನ್ನು ದಂತ ವೈದ್ಯರೇ ನಿರ್ಧರಿಸುತ್ತಾರೆ. ಇದೊಂದು ಸುರಕ್ಷಿತ ಮತ್ತು ಸರಳ ಸರ್ಜರಿಯಾಗಿರುತ್ತದೆ. ನಿಮ್ಮ ದಂತ ವೈದ್ಯರ ನಿರ್ದೇಶನದಂತೆ ಅವರ ಸಲಹೆ ಸೂಚನೆಗಳನ್ನು ಚಾಚೂ ತಪ್ಪದೇ ಪಾಲಿಸಿದಲ್ಲಿ ಡೆಂಟಲ್ ಟ್ರಾನ್ಸ್‍ ಪ್ಲಾಂಟೇಷನ್ ಯಶಸ್ವಿಯಾಗುವುದರಲ್ಲಿ ಸಂದೇಹವೇ ಇಲ್ಲ.

Also Read  ಶಾಸಕ ಎಚ್ .ಕೆ ಪಾಟೀಲ್ ಅವರಿಗೆ ಕೋರೋನಾ ದೃಢ

ಡಾ| ಮುರಲೀ ಮೋಹನ್ ಚೂಂತಾರು

error: Content is protected !!
Scroll to Top