“ವಿಶ್ವ ಹೃದಯ ದಿನ- ಸೆಪ್ಟೆಂಬರ್ 29” – ಹೃದಯ ತೊಂದರೆಗಳು ಮತ್ತು ದಂತ ಆರೋಗ್ಯ

(ನ್ಯೂಸ್ ಕಡಬ) newskadaba.com ಸೆ. 27. ಪ್ರತಿ ವರ್ಷ ಸೆಪ್ಟೆಂಬರ್ 29 ರಂದು ವಿಶ್ವ ಹೃದಯ ದಿನ ಎಂದು ಆಚರಿಸಿ ಹೃದಯ ಸಂಬಂಧಿ ರೋಗಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. 2000ನೇ ಇಸವಿಯಲ್ಲಿ ಈ ಆಚರಣೆ “ದೈಹಿಕ ಚಟುವಟಿಕೆ ಮತ್ತು ಹೃದಯದ ಆರೋಗ್ಯ” ಎಂಬ ಧ್ಯೇಯ ವಾಕ್ಯದೊಂದಿಗೆ ಈ ಆಚರಣೆ ಆರಂಭವಾಗಿತ್ತು. 2021ರಲ್ಲಿ ‘ಹೃದಯವನ್ನು ಜೋಡಿಸಿ’ ಎಂಬುದಾಗಿ ಆಚರಿಸಲಾಗಿದೆ. 2022 ರ ಧ್ಯೇಯವಾಕ್ಯ “Cardiovascular Health for Everyone” ಅಂದರೆ “ಎಲ್ಲರಿಗೂ ಹೃದಯದ ಆರೋಗ್ಯ” ಎಂಬುದಾಗಿದೆ.

ವಾರ್ಷಿಕವಾಗಿ ಜಗತ್ತಿನಾದ್ಯಂತ ಸುಮಾರು 20 ಮಿಲಿಯನ್ ಮಂದಿ ಹೃದಯ ಸಂಬಂಧಿ ರೋಗಗಳಿಂದ ಸಾಯುತ್ತಾರೆ ಎಂದು ಅಂಕಿ ಅಂಶಗಳಿಂದ ಸಾbIತಾಗಿದೆ. ಜಗತ್ತಿನಲ್ಲಿ ಸಾವಿಗೆ ಕಾರಣವಾಗುವ ರೋಗಗಳಲ್ಲಿ ಅಗ್ರಸ್ಥಾನ ಹೃದಯ ಸಂಬಂಧಿ ರೋಗ ಅದರಲ್ಲೂ ಹೃದಯಾಘಾತಕ್ಕೆ ಅಭಿಸಿರುತ್ತದೆ. ಕ್ಯಾನ್ಸರ್, ಏಡ್ಸ್, ಮಲೇರಿಯಾ ಈ ಮೂರು ರೋಗಗಳನ್ನು ಒಟ್ಟು ಸೇರಿಸಿದರೆ ಉಂಟಾಗುವ ವರ್ಷಾವಧಿ ಮರಣದ ಸಂಖ್ಯೆಗಳಿಗಿಂತಲೂ ಹೃದಯ ಸಂಬಂಧಿ ರೋಗಗಳಿಂದ ಉಂಟಾಗುವ ಮರಣ ಹೆಚ್ಚು ಎಂದು ತಿಳಿದು ಬಂದಿದೆ. ಒಂದು ಸಂತಸದ ವಿಚಾರವೆಂದರೆ ಸುಮಾರು 80 ಶೇಕಡಾ ಹೃದಯಾಘಾತವನ್ನು ತಡೆಗಟ್ಟಬಹುದು ಎಂದೂ ತಿಳಿದು ಬಂದಿದೆ. ಉತ್ತಮ ಆಹಾರ ಪದ್ಧತಿ, ಒತ್ತಡ ರಹಿತ ಜೀವನ ಶೈಲಿ, ಉತ್ತಮ ವ್ಯಾಯಾಮ ಹಾಗೂ ದೈಹಿಕ ಕಸರತ್ತು ಇರುವ ಜೀವನ ಶೈಲಿ ಮತ್ತು ತಂಬಾಕು, ಧೂಮಪಾನ, ಮಧ್ಯಪಾನ ತ್ಯಜಿಸುವಿಕೆಯಿಂದ ಸುಮಾರು 80 ಶೇಕಡಾ ಹೃದಯಾಘಾತವನ್ನು ತಪ್ಪಿಸಬಹುದಾಗಿದೆ.

 

ವಸಡು ರೋಗ ಮತ್ತು ಹೃದಯ ಸಂಬಂಧಿ ರೋಗಗಳು

ವಸಡಿನ ಆರೋಗ್ಯ ಮತ್ತು ಹೃದಯ ಸಂಬಂಧಿ ರೋಗಗಳಿಗೆ ಬಹಳ ಹತ್ತಿರದ ಸಂಬಂಧವಿದೆ. ಬಾಯಿಯ ಆರೋಗ್ಯ ಮತ್ತು ಹೃದಯದ ಆರೋಗ್ಯಕ್ಕೆ ನೇರವಾದ ಸಂಬಂಧವಿರುವುದಂತೂ ಸತ್ಯ. ಶೇಕಡಾ 30 ರಿಂದ 35ರಷ್ಟು ವಸಡು ಸಂಬಂಧ ರೋಗಕ್ಕೆ ಒಳಗಾದವರಿಗೆ, ಹೃದಯಘಾತವಾಗುವ ಸಾಧ್ಯತೆ ಇದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಈ ಕಾರಣದಿಂದಲೇ ನಾವೆಲ್ಲರೂ ವಸಡಿನ ಆರೋಗ್ಯವನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಅತೀ ಅವಶ್ಯಕ ಮತ್ತು ಈಗಿನ ನಮ್ಮ ನಾಗರಿಕ ಜೀವನ ಶೈಲಿಯಲ್ಲಿ ಅನಿವಾರ್ಯವೂ ಕೂಡ. ಇದರ ಜೊತೆಗೆ ಸಾಮಾನ್ಯವಾಗಿ ಹೃದಯ ಸಂಬಂಧಿ ಕಾಯಿಲೆ ಇರುವ ಅಥವಾ ಅಧಿಕ ರಕ್ತದ ಒತ್ತಡ ಇರುವ ರೋಗಿಗಳಲ್ಲಿ ವ್ಯಾಯಾಮ ಕೊರತೆ, ವಿಪರೀತ ಒತ್ತಡದ ಜೀವನ ಶೈಲಿ, ಬೊಜ್ಜು, ಧೂಮಪಾನ ಇತ್ಯಾದಿಗಳು ಸೇರಿಕೊಂಡು ವಸಡಿನ ರೋಗಗಳಿಗೆ ನಾಂದಿ ಹಾಡುತ್ತದೆ. ಸಾಮಾನ್ಯವಾಗಿ ವಸಡಿನ ರೋಗವನ್ನು ಹೊಂದಿರುವ ರೋಗಿಗಳಲ್ಲಿ ಹಲ್ಲಿನ ಸುತ್ತ ಇರುವ ದಂತಪಾಚಿ ಮತ್ತು ದಂತಕಿಟ್ಟಗಳಲ್ಲಿ ಲಕ್ಷಾಂತರ ಬ್ಯಾಕ್ಟೀರಿಯಗಳು ಸೇರಿಕೊಂಡಿರುತ್ತವೆ. ಈ ಬ್ಯಾಕ್ಟೀರಿಯಾಗಳ ಸಂಖ್ಯೆ ವೃದ್ದಿಸಿದಂತೆ, ವ್ಯಕ್ತಿಯ ರಕ್ತನಾಳಗಳು ಪೆಡಸುಗೊಂಡು, ರಕ್ತನಾಳಗಳ ಒಳಗೆ ಪಾಚಿ ಕಟ್ಟಿಕೊಳ್ಳುವ ಸಾಧ್ಯತೆ ಹೆಚ್ಚು ಇರುತ್ತದೆ. ಈ ರೀತಿ ರಕ್ತನಾಳಗಳ ಒಳಗೆ ಪಾಚಿಕಟ್ಟಿಕೊಳ್ಳುವುದಕ್ಕೆ Atheroslerosis or Artierioslerosis ಎಂದು ಹೇಳಲಾಗುತ್ತದೆ. ಈ ರೀತಿ ರಕ್ತನಾಳಗಳಲ್ಲಿ ಪಾಚಿಕಟ್ಟಿಕೊಂಡಲ್ಲಿ, ಹೃದಯಾಘಾತ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

Also Read  ಮನೆಮಂದಿಯ ಕಿರುಕುಳವೇ? ಹೀಗೆ ಮಾಡಿ ಮತ್ತು ದಿನ ಭವಿಷ್ಯ

ಅದೇ ರೀತಿ ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿರುವವರಿಗೆ ಕೊಡಲಾಗುವ ಕೆಲವೊಂದು ಔಷಧಿಗಳು ಕೂಡಾ ವಸಡಿನ ಅನಿಯಂತ್ರಿತ ಬೆಳವಣಿಗೆಗೆ ಕಾರಣವಾಗಬಹುದು ಮತ್ತು ಈ ಅನಿಯಂತ್ರಣ ಬೆಳವಣಿಗೆಯಿಂದ, ವಸಡಿನ ಸ್ವಚ್ಛತೆಯನ್ನು ಕಾಯ್ದುಕೊಳ್ಳಲು ಕಷ್ಟವಾಗಬಹುದು ಮತ್ತು ವಸಡು ಸಂಬಂಧಿ ರೋಗಗಳಿಗೆ ಕಾರಣೀಭೂತವಾಗಬಹುದು. ಉದಾ : ‘Nifidifine’ ಎಂಬ ಔಷಧಿ ಸಾಮಾನ್ಯವಾಗಿ ವಸಡಿನ ಅನಿಯಂತ್ರಿತ ಬೆಳವಣಿಗೆಗೆ ಕಾರಣವಾಗುತ್ತದೆ. ಈ ಹಂತದಲ್ಲಿ ವೈದ್ಯರನ್ನು ಕಂಡು ಬೇರೆ ಸೂಕ್ತ ಔಷಧಿಯನ್ನು ತೆಗೆದುಕೊಂಡಲ್ಲಿ, ಅನಿಯಂತ್ರಿತ ವಸಡು ಬೆಳವಣಿಗೆಯನ್ನು ತಡೆಗಟ್ಟಿ ವಸಡಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.

ಹೃದಯಾಘಾತ ತಪ್ಪಿಸಲು ನೀವು ಓನು ಮಾಡಬೇಕು?

  1. ಪ್ರತಿ 6 ತಿಂಗಳಿಗೊಮ್ಮೆ ನಿಮ್ಮ ದಂತ ವೈದ್ಯರ ಬಳಿ ದಂತ ತಪಾಸಣೆ ಮಾಡಿಸಿಕೊಳ್ಳಿ
  2. ಪ್ರತಿ 6 ತಿಂಗಳಿಗೊಮ್ಮೆ ನಿಮ್ಮ ದಂತ ವೈದ್ಯರ ಬಳಿ ಹಲ್ಲುಗಳನ್ನು ಶುಚಿಗೊಳಿಸಿಕೊಳ್ಳಬೇಕು. ಹಲ್ಲುಗಳ ಸುತ್ತ ಬೆಳೆಯುವ ದಂತ ಕಿಟ್ಟದಲ್ಲಿರುವ ಬ್ಯಾಕ್ಟೀರಿಯಾಗಳು ಹೃದಯಾಘಾತಕ್ಕೆ ಕಾರಣವಾಗುತ್ತದೆ ಎಂದು ಸಂಶೋಧನೆಗಳಿಂದ ಸಾಬೀತಾಗಿದೆ
  3. ನಿಮ್ಮ ಹಲ್ಲುಗಳು ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ ಅಲುಗಾಡಲು ಆರಂಭವಾದಲ್ಲಿ ತಕ್ಷಣವೇ ದಂತ ವೈದ್ಯರ ಬಳಿ ತೋರಿಸಿಕೊಳ್ಳಿ. ಹಲ್ಲುಗಳ ಸುತ್ತ ಎಲುಬು ಕರಗಿ ಹಲ್ಲು ಅಲುಗಾಡುತ್ತಿದ್ದಲ್ಲಿ ವಸಡು ಸಂಬಂಧಿ ರೋಗ ಅಥವಾ ಮಧುಮೇಹ ರೋಗ ಇರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇಂತಹ ವ್ಯಕ್ತಿಗಳಿಗೆ ಹೃದಯಾಘಾತವಾಗುವ ಸಾಧ್ಯತೆ ಇತರರಿಗಿಂತ ಎರಡು ಪಟ್ಟು ಜಾಸ್ತಿ ಇರುತ್ತದೆ
  4. ನಿಮ್ಮ ವಸಡುಗಳಲ್ಲಿ ರಕ್ತ ಒಸರುತ್ತಿದ್ದಲ್ಲಿ ತಕ್ಷಣವೇ ದಂತ ವೈದ್ಯರ ಬಳಿ ತೋರಿಸಿಕೊಳ್ಳಿ. ವಸಡುಗಳಲ್ಲಿ ರಕ್ತ ಒಸರುತ್ತಿದ್ದಲ್ಲಿ, ಅದು ವಸಡು ರೋಗದ ಪ್ರಾಥಮಿಕ ಲಕ್ಷಣವಾಗಿರುತ್ತದೆ. ಆರಂಭಿಕ ಹಂತದಲ್ಲಿ ಗುರುತಿಸಿ ಚಿಕಿತ್ಸೆ ನೀಡಿದಲ್ಲಿ ಮುಂದೆ ಉಂಟಾಗುವ ವಸಡು ರೋಗ ಮತ್ತು ಹೃದಯಾಘಾತದಂತಹ ಸಮಸ್ಯೆಗಳನ್ನು ಆರಂಭದಲ್ಲಿಯೇ ತಪ್ಪಿಸಬಹುದಾಗಿದೆ.
  5. ನಿಮ್ಮ ಬಾಯಿಯಲ್ಲಿ ದುರ್ವಾಸನೆ ಬರುತ್ತಿದ್ದಲ್ಲಿ ತಕ್ಷಣವೇ ದಂತ ವೈದ್ಯರ ಬಳಿ ತೋರಿಸಬೇಕು. ಬಾಯಿ ದುರ್ವಾಸನೆ ಎನ್ನುವುದು ವಸಡು ರೋಗದ ಪ್ರಮುಖ ಲಕ್ಷಣವಾಗಿರುತ್ತದೆ. ಸಕಲದಲ್ಲಿ ಚಿಕಿತ್ಸೆ ಪಡೆದಲ್ಲಿ ಮುಂಬರುವ ಅನಾಹುತವನ್ನು ತಪ್ಪಿಸಬಹುದಾಗಿದೆ.
Also Read  ಫೆಬ್ರವರಿ 13- “ಬಾಯಿ, ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರ ದಿನ”; ಡಾ. ಮುರಲೀ ಮೋಹನ ಚೂಂತಾರು

ಕೊನೆ ಮಾತು

ಹೃದಯಾಘಾತ ಎನ್ನುವುದು ಬಹಳ ಶಕ್ತಿಶಾಲಿಯಾದ ರೋಗ ಮತ್ತು ಇದಕ್ಕೆ ಕೊಲ್ಲುವ ಶಕ್ತಿ ಬಹಳ ಅಧಿಕವಾಗಿರುತ್ತದೆ. ಒಂದು ವೇಳೆ ಬದುಕಿ ಉಳಿದರೂ ಮಾನಸಿಕ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ದುಬಾರಿ ಶಸ್ತ್ರ ಚಿಕಿತ್ಸೆ ಮಾಡಿದರೂ, ಮಾನಸಿಕವಾಗಿ ಉದುಗಿ ಹೋಗಿ ಮೊದಲಿನಂತೆ ಪರಿಣಾಮಕಾರಿಯಾಗಿ ಕೆಲಸಮಾಡಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಒಟ್ಟಿನಲ್ಲಿ ಕುಟುಂಬದ ಆರ್ಥಿಕತೆಗೆ ಕೊಡಲಿ ಏಟು ನೀಡಿ, ಮಾನಸಿಕವಾಗಿ ಕುಗ್ಗಿಸಿ, ದುಡಿಯುವ ವಯಸ್ಸಿನ ಕುಟುಂಬದ ಆಧಾರ ಸ್ತಂಭವಾದ ಮನೆಯ ಯಜಮಾನ ಹೃದಯಾಘಾತದಿಂದ ಮೃತಪಟ್ಟರೆ, ಇಡೀ ಕುಟುಂಬವೇ ತಲ್ಲಣಿಸಿ ಹೋಗುತ್ತಿದೆ. ಈ ಕಾರಣದಿಂದಲೇ ಸಕಾಲದಲ್ಲಿ ನಾವೆಲ್ಲಾ ಎಚ್ಚೆತ್ತುಕೊಂಡು ಜಾಗೃತರಾಗಿ ಸೂಕ್ತ ಜೀವನಶೈಲಿ, ಆರೋಗ್ಯಕರ ಆಹಾರ ಪದ್ಧತಿ ಅಗತ್ಯ ವ್ಯಾಯಾಮ ಮುಂತಾದವುಗಳಿಂದ ಮಾನಸಿಕ ನೆಮ್ಮದಿ ಪಡೆದು, ತಂಬಾಕು ಹಾಗೂ ಮಧ್ಯಪಾನ ಮುಂತಾದ ದುಶ್ಚಟಗಳಿಂದ ದೂರವಿದ್ದಲ್ಲಿ, ಹೃದಯಾಘಾತ ಎಂಬ ಪೆಡಂಬೂತವನ್ನು ಹೊಸಕಿ ಹಾಕುವುದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ. ಆರೋಗ್ಯ ಪೂರ್ಣವಾದ ದೈಹಿಕ ಮತ್ತು ಮಾನಸಿಕ ಜೀವನ ಶೈಲಿಯೇ ಹೃದಯಾಘಾತ ಎಂಬ ರೋಗವನ್ನು ಎದುರಿಸಿ ಗೆಲ್ಲಬಲ್ಲ ಬಹುದೊಡ್ಡ ಬ್ರಹ್ಮಾಸ್ತ್ರ ಎಂದರೂ ತಪ್ಪಲ್ಲ. ನೆನಪಿರಲಿ, ನೀವು ಆಹಾರ ಸೇವಿಸುವಾಗ ಔಷಧಿಯಂತೆ ಸೇವಿಸಿ. ಇಲ್ಲವಾದಲ್ಲಿ ಔಷಧಿಯನ್ನೇ ಆಹಾರವಾಗಿ ಸೇವಿಸಬೇಕಾದ ಅನಿವಾರ್ಯತೆ ಬರಲೂಬಹುದು. ಜೋಕೆ..!!

Also Read  ಗೃಹ ಸಚಿವ ಅಮಿತ್‌ ಶಾ ಮತ್ತೆ ಆಸ್ಪತ್ರೆಗೆ ದಾಖಲು..!

ಡಾ|| ಮುರಲೀ ಮೋಹನ್ ಚೂಂತಾರು

error: Content is protected !!
Scroll to Top