(ನ್ಯೂಸ್ ಕಡಬ) newskadaba.com ಸೆ. 25. 70 ವರ್ಷದ ಅಂಗವಿಕಲ ವೃದ್ದೆಯೊಬ್ಬರು ತಮ್ಮ ವೃದ್ಧಾಪ್ಯ ಪಿಂಚಣಿ ಪಡೆಯಲು ಸ್ಥಳೀಯ ಪಂಚಾಯತ್ ಕಚೇರಿಗೆ ಸುಮಾರು ಎರಡು ಕಿಲೋಮೀಟರ್ ತೆವಳಿಕೊಂಡು ಹೋದ ಘಟನೆ ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಸದ್ಯ ಮಹಿಳೆ ತೆವಳುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಪತುರಿ ದೆಹುರಿ ಎಂಬ ಹೆಸರಿನ ವೃದ್ಧ ಮಹಿಳೆ ಜೀವನೋಪಾಯಕ್ಕಾಗಿ ತನ್ನ ಪಿಂಚಣಿಯನ್ನೇ ಅವಲಂಬಿಸಿದ್ದಾರೆ. ಅವರಿಗೆ ಈ ಹಿಂದೆ ನಡೆದ ಅಪಘಾತದಿಂದ ಅಂಗವೈಕಲ್ಯ ಉಂಟಾಗಿ ಸರಿಯಾಗಿ ನಡೆಯಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಅವರಿಗೆ ತನ್ನ ಪಿಂಚಣಿಯನ್ನು ಯಾರೂ ಮನೆಗೆ ತಲುಪಿಸದ ಕಾರಣ, ಅವರು ವೃದ್ದಾಪ್ಯ ವೇತನವನ್ನು ಪಡೆಯಲು ಕಿಯೋಂಜಾರ್ ನ ತೆಲ್ಕೋಯಿ ಬ್ಲಾಕ್ ರೈಸುವಾನ್ ಪಂಚಾಯತ್ ಗೆ ತೆವಳಿಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.