(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.08. ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಹಿಳಾ ಮೀಸಲು ಕಾಯಿದೆ ಜಾರಿಗೆ ಬಂದಿರುವುದರಿಂದ ಸ್ತ್ರೀಯರಿಗೆ ಆಡಳಿತ ನಡೆಸಲು ಹೆಚ್ಚಿನ ಅವಕಾಶ ಲಭಿಸಿದೆ. ಸಂಸತ್ತು ಮತ್ತು ವಿಧಾನ ಮಂಡಲದಲ್ಲೂ ಶೇ.50 ಮಹಿಳಾ ಮೀಸಲು ವಿಧೇಯಕ ಅನುಷ್ಠಾನಕ್ಕೆ ಬರಬೇಕಾಗಿದೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕರಂಬಾರ್ ಮೊಹಮ್ಮದ್ ಹೇಳಿದರು.
ಕಂಕನಾಡಿಯ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಭಾಂಗಣದಲ್ಲಿ ಗುರುವಾರದಂದು ಬ್ಯಾರಿ ಸಾಹಿತ್ಯ ಅಕಾಡೆಮಿ ಮತ್ತು ಮುಸ್ಲಿಂ ಮಹಿಳಾ ಸಾಹಿತ್ಯ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಒಂದು ಕಾಲದ ಪುರುಷ ಪ್ರಧಾನ ಸಮಾಜ ಸಡಿಲುಗೊಳ್ಳುತ್ತಿದೆ. ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾರೆ. ದೇವರು ಗಂಡು – ಹೆಣ್ಣು ಎಂಬ ಎರಡು ಲಿಂಗಗಳನ್ನು ಸೃಷ್ಟಿ ಮಾಡಿದ್ದು, ಒಬ್ಬರನ್ನೊಬ್ಬರು ಬಿಟ್ಟು ಇರಲು ಸಾಧ್ಯವೇ ಇಲ್ಲ. ಗಂಡು ದೈಹಿಕವಾಗಿ ಶಕ್ತಿಶಾಲಿಯಾಗಿದ್ದರೆ, ಹೆಣ್ಣು ಸೌಂದರ್ಯವಂತೆ. ಇದು ಪ್ರಕೃತಿ ದತ್ತವಾದುದು. ಮುಸ್ಲಿಮರಲ್ಲಿ ಮಹಿಳೆಗೆ ಸ್ವಾತಂತ್ರ್ಯವಿಲ್ಲವೆಂಬ ಪ್ರಚಾರ ಹೊರ ಜಗತ್ತಿನದು. ವಾಸ್ತವದಲ್ಲಿ ಹಾಗಿಲ್ಲ ಎಂದು ಅವರು ಹೇಳಿದರು. ಅಕಾಡೆಮಿ ಸದಸ್ಯರಾದ ಬಶೀರ್ ಬೈಕಂಪಾಡಿ, ಹುಸೈನ್ ಕಾಟಿಪಳ್ಳ, ಮುಹಮ್ಮದ್ ಆರಿಫ್ ಪಡುಬಿದ್ರಿ, ರಿಜಿಸ್ಟ್ರಾರ್ ಚಂದ್ರಹಾಸ ರೈ ಉಪಸ್ಥಿತರಿದ್ದರು.
‘ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಕಾರಣ ಮತ್ತು ಪರಿಹಾರ’ ಎಂಬ ವಿಷಯ ಕುರಿತು ನಡೆದ ವಿಚಾರ ಗೋಷ್ಠಿಯಲ್ಲಿ ಸಾಹಿತ್ಯ ಸಂಘದ ಅಧ್ಯಕ್ಷೆ ಸಮೀನಾ ಅಫ್ಶಾನ್ ಅಧ್ಯಕ್ಷತೆ ವಹಿಸಿದ್ದರು. ಮುಸ್ಲಿಂ ಮಹಿಳಾ ಸಾಹಿತ್ಯ ಸಂಘದ ಕಾರ್ಯದರ್ಶಿ ರುಕ್ಸಾನ ಯು. ಪ್ರಬಂಧ ಮಂಡಿಸಿದರು. ಅನುಪಮ ಮಹಿಳಾ ಮಾಸಿಕದ ಸಂಪಾದಕಿ ಶಹನಾಝ್ ಎಂ. ಮತ್ತು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಲಹೆಗಾರ್ತಿ ಮುಮ್ತಾಝ್ ಪಕ್ಕಲಡ್ಕ ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ: ಸಾಧಕಿಯರಾದ ಸಮಾಜ ಸೇವಕಿ ಖೈರುನ್ನಿಸಾ ಸಯ್ಯದ್, ಸಾಹಿತಿ ಮಫಾಝ ಶರ್ಫುದ್ದೀನ್ ಮತ್ತು ರ‍್ಯಾಂಕ್ ವಿಜೇತೆ ಆಯಿಷತ್ ರಫೀಝಾ ಅವರನ್ನು ಸನ್ಮಾನಿಸಲಾಯಿತು. ಆಯಿಷಾ ಯು.ಕೆ. ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಿತು. ಶಮೀಮಾ ಕುತ್ತಾರ್(ಬ್ಯಾರಿ), ಶಬೀನಾ ಬಾನು ವೈ.ಕೆ (ಕನ್ನಡ), ಅಸ್ಮ ಬಜಪೆ (ಬ್ಯಾರಿ), ಝುಲೈಖಾ ಮುಮ್ತಾಝ್(ಬ್ಯಾರಿ), ಫೆಲ್ಸಿ ಲೋಬೊ(ಕೊಂಕಣಿ), ಸಮೀನಾ ಅಫ್ಶಾನ್(ಉರ್ದು), ರೂಪಕಲಾ ಆಳ್ವ(ತುಳು), ಶಿಫಾ ಕೆ.ಎಂ.(ಬ್ಯಾರಿ) ಕವನ ವಾಚನ ಮಾಡಿದರು. ಮರಿಯಮ್ ಇಸ್ಮಾಯಿಲ್ ಸಮನ್ವಯಕಾರರಾಗಿದ್ದರು. ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯೆ ಆಯಿಷಾ ಯು.ಕೆ. ಸ್ವಾಗತಿಸಿ, ಖಮರುನ್ನಿಸಾ ಮತ್ತು ಮರಿಯಂ ಶಹೀರಾ ಕಾರ್ಯಕ್ರಮ ನಿರೂಪಿಸಿದರು.