ದಸರಾ ಆನೆ ಮುಂದೆ ರೀಲ್ಸ್, ಫೋಟೋಶೂಟ್ ನಿಷೇಧ- ರಾಜ್ಯ ಸರಕಾರ ಆದೇಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 24. ಮೈಸೂರು ದಸರಾ ಉತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಬಂದಿರುವ ಸಾಕು ಆನೆಗಳ ಬಳಿ ಫೋಟೋ ಶೂಟ್, ಸೆಲ್ಫೀ, ರೀಲ್ಸ್‌ ಗಳಿಗೆ ಅವಕಾಶ ನೀಡಬಾರದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಖಡಕ್ ಸೂಚನೆ ನೀಡಿದ್ದಾರೆ.

ಈ ಸಂಬಂಧ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಪರ ಮುಖ್ಯ ಕಾರ್ಯದರ್ಶಿಗಳು, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಗೆ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪತ್ರ ಬರೆದು ಸೂಚಿಸಿದ್ದಾರೆ. ಅದರಲ್ಲಿ ಮೈಸೂರು ದಸರಾ ಮಹೋತ್ಸವದ ಪ್ರಧಾನ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಬಂದು ಪ್ರಸ್ತುತ ಅರಮನೆಯ ಆವರಣದಲ್ಲಿ ಬೀಡು ಬಿಟ್ಟಿರುವ ಸಾಕಾನೆಗಳ ಬಳಿ ಫೋಟೋಶೂಟ್ ಮತ್ತು ರೀಲ್ಸ್ ಮಾಡಲು ಅಧಿಕಾರಿಗಳೇ ಅವಕಾಶ ನೀಡಿದ್ದು, ಇದರಿಂದ ಆನೆಗಳು ವಿಚಲಿತವಾಗಿ ಅನುಚಿತವಾಗಿ ವರ್ತಿಸುತ್ತಿವೆ. ಕಳೆದ ಕೆಲವು ದಿನಗಳ ಹಿಂದೆ ಕಾಂಜನ್ ಮತ್ತು ಧನಂಜಯ ಆನೆಗಳ ನಡುವೆ ಕಾದಾಟ ನಡೆದಿತ್ತು. ಕೆಲವರು ಆನೆಯ ದಂತ ಹಿಡಿದು, ಮತ್ತೆ ಕೆಲವರು ಸೊಂಡಿಲು ತಬ್ಬಿಕೊಂಡು ಫೋಟೋ ತೆಗೆಸಿಕೊಂಡಿರುವ ಚಿತ್ರಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು, ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಶಿಬಿರದಿಂದ ತಂದ ಆನೆಗಳನ್ನು ಸುರಕ್ಷಿತವಾಗಿ ಶಿಬಿರಕ್ಕೆ ಬಿಡುವವರೆಗೆ ಯಾವುದೇ ಅನಾಹುತ ಆಗದಂತೆ ಇಲಾಖೆ ಎಚ್ಚರ ವಹಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ರೀಲ್ಸ್ ಮಾಡಲು ಅವಕಾಶ ನೀಡಿ ನಿರ್ಲಕ್ಷ್ಯ ತೋರಿರುವ ಅಧಿಕಾರಿ/ಸಿಬ್ಬಂದಿಗೆ ಸ್ಪಷ್ಟ ಸೂಚನೆ ನೀಡಿ, ಇನ್ನು ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸಲು ಸೂಚಿಸಲಾಗಿದೆ.

Also Read  ಪತಿಯ ದೇಹವನ್ನು ತುಂಡರಿಸಿ ಮರಳಿನಲ್ಲಿ ಹೂತಿಟ್ಟ ಪಾಪಿ ಹೆಂಡತಿ!!   ➤ಇಬ್ಬರು ಆರೋಪಿಗಳ ಬಂಧನ

 

 

error: Content is protected !!
Scroll to Top