ತಾಲೂಕು ಆಯ್ಕೆ ಸಮಿತಿಯ ಬೇಜವಾಬ್ದಾರಿಗೆ ಬಲಿಪಶುವಾದ ಪುತ್ತೂರು ತಾಲೂಕು ಪ್ರಾಥಮಿಕ ಬಾಲಕರ ಕಬಡ್ಡಿ ತಂಡ

ಕಡಬ, ಸೆ.23. ವಯೋಮಿತಿ ಮೀರಿದ ವಿದ್ಯಾರ್ಥಿಯೊಬ್ಬ ಪ್ರಾಥಮಿಕ ಶಾಲಾ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯದಲ್ಲಿ ಆಡಿದ ಕಾರಣಕ್ಕಾಗಿ ಜಿಲ್ಲಾ ಮಟ್ಟದ ಪ್ರಥಮ ಸ್ಥಾನ ಪಡೆದುಕೊಂಡಿದ್ದ ತಂಡವು ತನ್ನ ಸ್ಥಾನ ಕಳೆದುಕೊಂಡ ಘಟನೆ ವರದಿಯಾಗಿದೆ.

ಗುತ್ತಿಗಾರಿನ ಪಿ.ಎಂ. ಶ್ರೀ ಶಾಲಾ ಮೈದಾನದಲ್ಲಿ ಸೆ.20ರಂದು ನಡೆದ ಪ್ರಾಥಮಿಕ ಶಾಲಾ ಜಿಲ್ಲಾಮಟ್ಟದ ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ಪುತ್ತೂರು ತಾಲೂಕನ್ನು ಪ್ರತಿನಿಧಿಸಿದ ತಂಡದಲ್ಲಿ ಕಡಬ ಸೈಂಟ್ ಆನ್ಸ್, ದುರ್ಗಾಂಬ ಆಲಂಕಾರು, ರಾಮಕುಂಜ ಹಾಗೂ ಕಡ್ಯ ಕೊಣಾಜೆ ಶಾಲೆಯ ವಿದ್ಯಾರ್ಥಿಗಳಿದ್ದರು. ಪಂದ್ಯಾಟದಲ್ಲಿ ಪುತ್ತೂರು ತಾಲೂಕು ತಂಡವು ಪ್ರಥಮ ಸ್ಥಾನ ಪಡೆದಿತ್ತು. ಈ ತಂಡದಲ್ಲಿ ವಯೋಮಿತಿ ಮೀರಿದ ವಿದ್ಯಾರ್ಥಿಯೊಬ್ಬ ಆಟವಾಡಿದ್ದು ಕೊನೆಯ ಕ್ಷಣದಲ್ಲಿ ಗೊತ್ತಾಗಿರುವುದರಿಂದ ಆ ಪಂದ್ಯಾಟವನ್ನು ರದ್ದುಗೊಳಿಸಿ, ವಯೋಮಿತಿ ಮೀರಿದ ವಿದ್ಯಾರ್ಥಿಯನ್ನು ಹೊರಗಿಟ್ಟು ಪೈನಲ್ ಪಂದ್ಯಾಟ ಆಡಲಾಗಿತ್ತು. ಈ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಪುತ್ತೂರು ತಂಡ ಪಡೆದಿದ್ದು, ದ್ವಿತೀಯ ಸ್ಥಾನವನ್ನು ಬಂಟ್ವಾಳ ತಾಲೂಕು ತಂಡ ಪಡೆದಿತ್ತು. ಆದರೆ ಅಂದು ಫಲಿತಾಂಶ ಘೋಷಣೆ ಮಾಡದೆ ಸೆ.21ರಂದು ಮಾಡಲಾಗಿ ವಯೋಮಿತಿ ಮೀರಿದ ಬಾಲಕ ಆಡಿರುವುದರಿಂದ ಪುತ್ತೂರು ತಂಡದ ಪ್ರಥಮ ಸ್ಥಾನವನ್ನು ಹಿಂತೆಗೆದುಕೊಂಡು ದ್ವಿತೀಯ ಸ್ಥಾನವನ್ನು ಪಡೆದ ಬಂಟ್ವಾಳ ತಾಲೂಕು ತಂಡಕ್ಕೆ ಪ್ರಥಮ ಸ್ಥಾನ, ಹಾಗೂ ಪುತ್ತೂರು ತಂಡದೊಂದಿಗೆ ಸೆಮಿಫೈನಲ್ ನಲ್ಲಿ ಪರಾಭವಗೊಂಡಿದ್ದ ಮಂಗಳೂರು ಉತ್ತರ ತಂಡಕ್ಕೆ ನೀಡಲು ನಿರ್ಧಾರವಾಗಿರುವುದಾಗಿ ತಿಳಿದುಬಂದಿದೆ.

Also Read  ವೇಲಂಕಣಿ- ಮಡಗಾಂವ್ ನಡುವೆ ವಿಶೇಷ ರೈಲು ಸೇವೆ...!

ಈಗಾಗಲೇ ಈ ಬಗ್ಗೆ ವಿಮರ್ಷೆ ನಡೆದಿದ್ದು, ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸಿದಂತಾಗಿದೆ. ಪುತ್ತೂರು ತಾಲೂಕು ಸಮಿತಿಗೆ ವಿದ್ಯಾರ್ಥಿಯನ್ನು ಆಯ್ಕೆ ಮಾಡುವಾಗ ತಾಲೂಕು ಆಯ್ಕೆ ಸಮಿತಿಯ ಬೇಜಾಬ್ದಾರಿಯಿಂದ 8ನೇ ತರಗತಿಯ ವಿದ್ಯಾರ್ಥಿಯ ವಯೋಮಿತಿಯನ್ನು ಸರಿಯಾಗಿ ದಾಖಲಿಸಿದ್ದರೂ ವಯೋಮಿತಿ ಮೀರಿರುವುದನ್ನು ಪ್ರಮುಖವಾಗಿ ಆಯ್ಕೆ ಸಮಿತಿ ಗಮನಿಸದೆ ಇರುವುದು ಪ್ರಾರಂಭದ ತಪ್ಪಾಗಿದೆ, ಬಳಿಕ ಆ ತಂಡ ಕಡಬ ಆನ್ಸ್ ವಿದ್ಯಾ ಸಂಸ್ಥೆಗೆ ಪಂದ್ಯಾಟಕ್ಕೆ ತೆರಳಲು ಬಂದಿದ್ದಾಗಲೂ ಅಲ್ಲಿಯೂ ಪರಿಶೀಲಿಸಲಾಗಿಲ್ಲ, ಬಳಿಕ ಪಂದ್ಯಾಟದ ಮೊದಲು ಇದೇ ದಾಖಲೆ ಪತ್ರಗಳು ಅಲ್ಲಿಯ ಸಂಘಟಕರು, ಸಮಿತಿಯವರ ಬಳಿಯಲ್ಲಿ ಇದ್ದರೂ ಚಕಾರವೆತ್ತದೆ ಪಂದ್ಯಾಟಕ್ಕೆ ಅವಕಾಶ ನೀಡಲಾಗಿತ್ತು, ಆದರೆ ಪಂದ್ಯಾಟದ ಮಧ್ಯದಲ್ಲಿ ವಯೋಮಿತಿಯ ಪ್ರಶ್ನೆ ಉದ್ಭವಿಸಿ ಬಳಿಕ ಪಂದ್ಯಾಟವನ್ನು ರದ್ದುಗೊಳಿಸಿ ವಯೋಮಿತಿ ಮೀರಿದ ಬಾಲಕನನ್ನು ಹೊರಗಿಟ್ಟು ಆಟವಾಡಿದಾಗಲೂ ಪುತ್ತೂರು ತಂಡ ಪ್ರಥಮ ಸ್ಥಾನ ಗಳಿಸಿದಾಗ ಎಚ್ಚೆತ್ತುಕೊಂಡ ಇಲಾಖಾ ಸಮಿತಿ ಪ್ರಥಮ ಸ್ಥಾನವನ್ನು ಹಿಂಪಡೆದುಕೊಂಡಿತು. ಒಂದು ವೇಳೆ ಪಂದ್ಯಾಟದ ಮೊದಲು ದಾಖಲೆ ಸರಿಯಾಗಿ ಪರಿಶೀಲನೆ ಮಾಡುತ್ತಿದ್ದರೆ ಈ ಗೊಂದಲ ನಡೆಯುತ್ತಿರಲಿಲ್ಲ. ವಯೋಮಿತಿ ಮೀರಿದ ಬಾಲಕನನ್ನು ಹೊರಗಿಟ್ಟು ಆಟ ಆಡಿದ್ದರೆ ಈ ಸಮಸ್ಯೆ ಉದ್ಭವವಾಗುತ್ತಿರಲಿಲ್ಲ ಎಂದು ಆಯ್ಕೆ ಸಮಿತಿಯ ಬೇಜವ್ದಾರಿಗೆ ಪೋಷಕರು, ಶಾಲೆಯವರು ಆಕ್ರೋಶ ಹೊರಹಾಕಿದ್ದಾರೆ.

Also Read  ಜವಾಹರ ನವೋದಯ ವಿದ್ಯಾಲಯ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

error: Content is protected !!
Scroll to Top