(ನ್ಯೂಸ್ ಕಡಬ) newskadaba.com ಕಡಬ, ಮಾ.06. ಗ್ರಾ.ಪಂ.ಗಳಿಗೆ ಕಾಂಪೋಸ್ಟ್ ಪೈಪು ಖರೀದಿಯಲ್ಲಿ ಅವ್ಯವಹಾರ ನಡೆಸಿರುವ ಆರೋಪದಲ್ಲಿ ಜಿಲ್ಲಾ ಎಸಿಬಿ ತಂಡದ ಕಸ್ಟಡಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಸ್ವಚ್ಚತಾ ಆಂದೋಲನದ ಜಿಲ್ಲಾ ಸಮನ್ವಯ ಅಧಿಕಾರಿ ರೋಹಿತ್ ಈಗಾಗಲೇ ಏಳು ಗ್ರಾ.ಪಂ.ಗಳಲ್ಲಿ ಅವ್ಯವಹಾರ ನಡೆಸಿದ್ದು, ಇನ್ನೂ ಹಲವು ಕಡೆಗಳಲ್ಲಿ ತನಿಖೆ ನಡೆಸಲಾಗುವುದು ಎಂದು ಎಸಿಬಿ ಇನ್ಸ್‌ಪೆಕ್ಟರ್ ಯೋಗೀಶ್ ಕುಮಾರ್ ತಿಳಿಸಿದ್ದಾರೆ.
ಮಾ.5 ಮತ್ತು 6 ರಂದು ತಾಲೂಕಿನ ಕುಟ್ರುಪ್ಪಾಡಿ, ಪೆರಾಬೆ, ಬಿಳಿನೆಲೆ, ಕೊಯಿಲ ಅಲ್ಲದೆ ಕೋಡಿಂಬಾಡಿ ಗ್ರಾ.ಪಂ.ಗಳಲ್ಲಿ ಕಾಂಪೋಸ್ಟ್ ಖರೀದಿಯಲ್ಲಿ ಅವ್ಯವಹಾರ ನಡೆಸಿರುವ ಬಗ್ಗೆ ತನಿಖೆ ನಡೆಸಿರುವ ಎಸಿಬಿ ಪೊಲೀಸರು ಸುಳ್ಯದ ಜಾಲ್ಸೂರು, ಉಬರಡ್ಕ ಗ್ರಾ.ಪಂ.ಗಳಲ್ಲಿ ಕೂಡ ತನಿಖೆ ನಡೆಸಿದ್ದಾರೆ. ಮಂಗಳವಾರದಂದು ಕಡಬ ತಾಲೂಕಿನ ಮರ್ದಾಳದಲ್ಲಿ ಕಂಪ್ಯೂಟರ್ ದುರಸ್ಥಿ ಅಂಗಡಿಯೊಂದರಿಂದ ಆರೋಪಿ ರೋಹಿತ್‌ರವರು ದುರಸ್ಥಿಗಾಗಿ ನೀಡಿದ್ದ ಲ್ಯಾಪ್‌ಟಾಪ್‌ನ್ನು ವಶಪಡಿಸಿಕೊಂಡ ಪೊಲೀಸರು ಬಳಿಕ ಅಂತಿಬೆಟ್ಟುವಿನಲ್ಲಿರುವ ಆರೋಪಿಯ ಮನೆಯಿಂದ ಸುಮಾರು 2 ಪಿಕಪ್‌ನಷ್ಟು ಕಾಂಪೋಸ್ಟ್ ಪೈಪ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಸಮನ್ವಯ ಅಧಿಕಾರಿಯಾಗಿದ್ದ ರೋಹಿತ್‌ರವರು ಪುತ್ತೂರಿನ ಪರ್ಲಡ್ಕದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯ ಹೂಡಿದ್ದು ಜಿ.ಪಂ.ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯವರ ಸೀಲ್‌ನ್ನು (ರಬ್ಬರ್ ಸ್ಟ್ಯಾಂಪ್‌ನ್ನು) ಬೋಗಸ್ ಮಾಡಿದ್ದಲ್ಲದೆ ಪಿಜಿ ಟ್ರೇಡರ್ಸ್ ಮೈಸೂರು ಎಂಬ ಬೋಗಸ್ ಸೀಲ್‌ನ್ನು ಬಳಸಿ ವ್ಯವಹಾರ ದುರುಪಯೋಗ ಪಡಿಸಿಕೊಂಡು ಸರಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ.ನಷ್ಟ ಮಾಡಿದ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳದ ಇನ್ಸ್‌ಪೆಕ್ಟರ್ ಯೋಗೀಶ್ ಕುಮಾರ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಹರಿಪ್ರಸಾದ್, ರಾಧಾಕೃಷ್ಣ, ಉಮೇಶ್, ಪ್ರಶಾಂತ್, ಗಣೇಶ್‌ರವರು ತನಿಖೆ ನಡೆಸುತ್ತಿದ್ದಾರೆ.