(ನ್ಯೂಸ್ ಕಡಬ) newskadaba.com ಕಡಬ, ಸೆ. 18. ಕಡಬ ಹಾಗೂ ಪುತ್ತೂರು ತಾಲೂಕುಗಳ ಕರ್ನಾಟಕ ರಾಜ್ಯ ಪ್ರೌಢಶಾಲಾ ಮತ್ತು ಶಿಕ್ಷಕರ ಸಂಘ, ಕಡಬ ತಾಲೂಕು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಮತ್ತು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸಹಯೋಗದಲ್ಲಿ ಬೆಂಗಳೂರಿನ ಪ್ರಣವ್ ಫೌಂಡೇಷನ್ ಇವರಿಂದ ಸಾಧಕ ಶಿಕ್ಷಕರಿಗೆ ಪ್ರಣವ್ ಗುರು ಪುರಸ್ಕಾರ, ಗುರುವಂದನಾ ಕಾರ್ಯಕ್ರಮ ಹಾಗೂ ಶೈಕ್ಷಣಿಕ ಕಾರ್ಯಾಗಾರ ಕಡಬ ಅನುಗ್ರಹ ಸಭಾಭವನದಲ್ಲಿ ಸೆ. 21ರಂದು ನಡೆಯಲಿದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಈ ಕುರಿತು ಮಂಗಳವಾರದಂದು ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಕರು ಯಾವುದೇ ಕ್ಷೇತ್ರದಲ್ಲಿರುವ ವ್ಯಕ್ತಿಗಳನ್ನು ಉತ್ತಮ ಹಾಗೂ ಆದರ್ಶ ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಶಿಲ್ಪಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಶಿಕ್ಷಕರುಗಳನ್ನು ಗುರುತಿಸಿ ಗೌರವಿಸುವುದು ನಮ್ಮ ಕರ್ತವ್ಯವಾಗಿದೆ. ತಮಗೆ ಶಿಕ್ಷಣ ನೀಡಿದ ಶಿಕ್ಷಕರ ಬಗ್ಗೆ ಗೌರವ ಭಾವನೆ ಶಾಶ್ವತವಾಗಿ ಉಳಿಸಿಕೊಂಡು ಮುಂದೆ ವಿದ್ಯಾರ್ಥಿಗಳು ವಿದ್ಯೆ ಪಡೆದ ಶಿಕ್ಷರನ್ನು ಗೌರವಿಸಿ ಗುರು ಪರಂಪರೆ ಉಳಿಸಲು ಪ್ರೇರಣೆ ನೀಡುವ ಕಾರ್ಯಕ್ರಮ ಇದಾಗಿದೆ ಎಂದರು. ಕಡಬ ತಾಲೂಕು ಕೇಂದ್ರವಾಗಿ ರೂಪುಗೊಂಡ ಬಳಿಕ ಪ್ರಥಮ ಬಾರಿಗೆ ಗುರುವಂದನೆ ಹಾಗೂ ಶೈಕ್ಷಣಿಕ ಕಾರ್ಯಾಗಾರ ಆಯೋಜಿಸಲಾಗಿದೆ. ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದೊಂದಿಗೆ ಎಸ್‌ಡಿಎಂಸಿ ಹಾಗೂ ಊರವರ ಸಹಕಾರದೊಂದಿಗೆ ಶಾಲೆಯ ಅಭಿವೃದ್ಧಿಗೆ ಶ್ರಮಿಸಿ, ಯಾವುದೇ ಪ್ರಶಸ್ತಿಗೆ ಬಯಸದೆ ಸೇವೆ ಸಲ್ಲಿಸುತ್ತಿರುವ ಸಾಧಕ ಶಿಕ್ಷಕರನ್ನು ಗುರುತಿಸಿ ಗೌರವಿಸಲಾಗುವುದು. ಕಡಬ ತಾಲೂಕಿನ 13 ಪ್ರಾಥಮಿಕ ಹಾಗೂ 6 ಪ್ರೌಢಶಾಲಾ ಶಿಕ್ಷಕರನ್ನು ಗುರುತಿಸಿ ಗುರುವಂದನೆ ಮಾಡುವ ಕಾರ್ಯ ಮಾಡಲಾಗುವುದು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಬಿಜೆಪಿ ಮುಖಂಡರಾದ ಪ್ರಕಾಶ್ ಎನ್.ಕೆ, ಅಶೋಕ್ ಕುಮಾರ್ ಪಿ, ನಿತೀಶ್ ಗೌಡ ಏನಾಜೆ, ಕಿಶನ್ ರೈ ಪೆರಿಯಡ್ಕ ಉಪಸ್ಥಿತರಿದ್ದರು.