ವಿಶ್ವಕರ್ಮರು ಶ್ರಮ ಜೀವಿಗಳು- ಮಮತಾ ಗಟ್ಟಿ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 18. ವಿಶ್ವಕರ್ಮರು ಶ್ರಮಜೀವಿಗಳು, ತಮ್ಮ ಕರ್ಮದಿಂದಲೇ ಗುರುತಿಸಿಕೊಂಡವರು, ಪ್ರತಿಯೊಂದು ಶುಭಕಾರ್ಯವು ವಿಶ್ವಕರ್ಮರ ಸಹಕಾರವಿಲ್ಲದೆ ಪೂರ್ಣಗೊಳ್ಳಲು ಸಾಧ್ಯವಿಲ್ಲ ಎಂದು ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ ಹೇಳಿದರು. ಅವರು ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ಕಾಳಿಕಾಂಬ ವಿನಾಯಕ ದೇವಸ್ಥಾನ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ತಾಳ್ಮೆಯಿಂದಲೇ ತಮ್ಮ ಕರ್ಮಗಳನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸುವವರು ವಿಶ್ವಕರ್ಮರು. ತಮ್ಮಲ್ಲಿರುವ ಕಲಾಕೌಶಲ್ಯಗಳಿಂದಲೇ ಸಮಾಜದಲ್ಲಿ ಹೆಗ್ಗಳಿಕೆ ಪಾತ್ರರಾದವರು, ಶ್ರಮಕ್ಕೆ ಗೌರವ ಕೊಡಬೇಕು, ಶ್ರಮದಿಂದ ಯಶಸ್ಸು ಸಾಧ್ಯ ಎಂದರು. ಜಯಂತಿಗಳಂತಹ ಕಾರ್ಯಕ್ರಮಗಳು ಇಂದು ನಡೆಯಬೇಕಾದರೆ ಅದೆಷ್ಟೋ ಹೋರಾಟಗಳು, ಮನವಿಗಳು, ಬೇಡಿಕೆಗಳು ಸರ್ಕಾರಕ್ಕೆ ತಲುಪಿದೆ. ಅದರ ಫಲವಾಗಿ ಇಂದು ಸರ್ಕಾರವು ಜಯಂತಿಗಳನ್ನು ಆಚರಿಸಲು ಅನುಮತಿಯನ್ನು ನೀಡಿದೆ ಆದರೆ ಇಂದಿನ ಯುವಜನರು ಇಂತಹ ಕಾರ್ಯಕ್ರಮಗಳಿಗೆ ಭಾಗವಹಿಸಲು ಆಸಕ್ತಿ ತೋರಿಸುವುದಿಲ್ಲ ಎನ್ನುವುದು ವಿಷಾದಕರ ಸಂಗತಿ. ಆದ್ದರಿಂದ ನಮ್ಮ ಧರ್ಮದ ಬಗ್ಗೆ ನಮ್ಮ ಆಚಾರ-ವಿಚಾರಗಳ ಬಗ್ಗೆ ತಿಳಿದುಕೊಳ್ಳಲು ಮಕ್ಕಳನ್ನು, ಯುವಕರನ್ನು ಇಂತಹ ಕಾರ್ಯಕ್ರಮಗಳಿಗೆ ಹಾಜರಾಗುವಂತೆ ನೋಡಿಕೊಳ್ಳಬೇಕು. ಸರ್ಕಾರವು ಜಯಂತಿಗಳನ್ನು ಆಚರಿಸುವ ಮುಖ್ಯ ಉದ್ದೇಶವೇ ಅದರಲ್ಲಿ ಅಡಕವಾಗಿರುವ ಚಿಂತನೆಗಳು, ಆದರ್ಶಗಳು ತತ್ವಗಳನ್ನು ತಿಳಿದುಕೊಂಡು ನಮ್ಮಲ್ಲಿ ಅಳವಡಿಸಿ ಉತ್ತಮ ಜೀವನವನ್ನು ನಡೆಸಲು ಎಂದರು. ಉಪನ್ಯಾಸ ನೀಡಿದ ಶಿಕ್ಷಕ ವೆಂಕಟರಮಣ ಪಾಂಡುರಂಗ ಆಚಾರ್ಯ ಅವರು ಮಾತನಾಡಿ ಅದೆಷ್ಟೋ ದೇಶಗಳು ತಮ್ಮ ಕೌಶಲ್ಯಗಳಿಂದ ಅಭಿವೃದ್ಧಿಯತ್ತ ಸಾಗುತ್ತಿದೆ. ಭಾರತದಲ್ಲಿ ಹಲವಾರು ಕೌಶಲ್ಯಗಳನ್ನು ಹೊಂದಿರುವ ವಿಶ್ವಕರ್ಮರು ಇದ್ದಾರೆ. ಮುಂದೊಂದು ದಿನ ಅವರನ್ನು ಕಡೆಗಣಿಸಿದಲ್ಲಿ ಅವರ ಕೌಶಲ್ಯಗಳಿಗೆ ಮಾನ್ಯತೆ ನೀಡದೇ ಇದ್ದಲ್ಲಿ ನಾಶಕ್ಕೆ ಕಾರಣವಾಗಬಹುದು. ಆದ್ದರಿಂದ ವಿಶ್ವಕರ್ಮ ಸಮುದಾಯವನ್ನು ಉತ್ತಮ ಸಮಾಜವೆಂದು ಪರಿಗಣಿಸಿ ಮಾನ್ಯತೆ ನೀಡುವಂತೆ ತಿಳಿಸಿದರು.

Also Read  ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

 

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಮಾತನಾಡಿ, ಎಲ್ಲಾ ಸಮುದಾಯಗಳು ವಿಶ್ವಕರ್ಮ ಜನಾಂಗವನ್ನೇ ಅವಲಂಬಿಸಿದೆ. ವಿಶ್ವಕರ್ಮ ಸಮುದಾಯವು ಸಮಾಜದಲ್ಲಿ ಮುನ್ನೆಲೆಗೆ ಬರಲು, ಸರ್ಕಾರದ ಗಮನಕ್ಕೆ ಸಮಾಜವು ಬರಬೇಕಾದರೆ ಸಂಘಟನೆಯಿಂದ ಮಾತ್ರ ಸಾಧ್ಯ, ನಾನು ಎಂಬುದನ್ನು ಮರೆತು ನಾವೆಲ್ಲರೂ ಎಂದು ವಿಶ್ವಕರ್ಮ ಸಮುದಾಯದ ಪ್ರತಿಯೊಬ್ಬರು ಒಗ್ಗಟ್ಟಾಗಿ ಸಂಘಟನೆಗಳ ಮೂಲಕ ಮುಂದೆ ಸಾಗಿ ಸರಕಾರಕ್ಕೆ ತಮ್ಮ ಬೇಡಿಕೆಗಳನ್ನು ತಿಳಿಸುವ ಕೆಲಸ ವಾಗಬೇಕು ಎಂದರು. ಈ ಸಂದರ್ಭದಲ್ಲಿ ಶ್ರೀ ಕಾಳಿಕಾಂಬ ವಿನಾಯಕ ದೇವಸ್ಥಾನ ಆಡಳಿತಾಧಿಕಾರಿ ಕೆ. ಉಮೇಶ್ ಆಚಾರ್ಯ ಪಾಂಡೇಶ್ವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ರಾಜೇಶ್ ಜಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!
Scroll to Top