ಸ್ವಚ್ಛತೆಯೇ ನಮ್ಮ ಸಂಸ್ಕಾರವಾಗಲಿ- ಸಂಸದ ಬ್ರಿಜೇಶ್ ಚೌಟ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 18. ಸ್ವಚ್ಛತೆಯು ಕೇವಲ ತೋರಿಕೆಗೆ ಸೀಮಿತವಾಗದೇ ನಮ್ಮ ಬದುಕಿನಲ್ಲಿ ಸ್ವಭಾವ ಮತ್ತು ಸಂಸ್ಕಾರ ಆದರೆ ಮಾತ್ರ ಸಮಾಜವನ್ನು ಶುಚಿಯಾಗಿಟ್ಟುಕೊಳ್ಳಬಹುದು ಎಂದು ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.

ದ.ಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ನಗರದ ತೋಟ ಬೆಂಗರೆಯಲ್ಲಿ ಮಂಗಳವಾರ ನಡೆದ ಬೃಹತ್ ಸ್ವಚ್ಛತಾ ಅಭಿಯಾನ” ಸ್ವಚ್ಛತೆಯೇ ಸೇವೆ -2024″ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸ್ವಚ್ಛತೆಯನ್ನು ಪಾಲಿಸಲು ಅಭಿಯಾನ ನಡೆಸಬೇಕಾಗಿರುವುದು ವಿರೋಧಕರವಾಗಿದೆ. ಸ್ವಚ್ಛತೆ ನಮ್ಮ ದೈನಂದಿನ ಭಾಗವಾಗಿರಬೇಕೇ ಹೊರತು ಅಭಿಯಾನ ರೂಪದಲ್ಲಿ ನಡೆಸುವಂತದ್ದಲ್ಲ. ವೈಯಕ್ತಿಕವಾಗಿ ಸ್ವಚ್ಛತೆ ಕಾಪಾಡುವ ನಾಗರಿಕರು ಸಮಾಜಮುಖಿಯಾಗಿ ಚಿಂತಿಸದಿರುವುದು ದುರಂತವಾಗಿದೆ ಎಂದು ಸಂಸದರು ಕಳವಳ ವ್ಯಕ್ತಪಡಿಸಿದರು. ಶಾಲೆಗಳಲ್ಲಿ ಸ್ವಚ್ಛತಾ ಪಾಠವನ್ನು ಕಲಿತು ಹೊರಗಡೆ ಅದನ್ನು ಅನುಸರಿಸುವುದೇ ಮೌಲ್ಯಯುತ ಶಿಕ್ಷಣವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸ್ವಚ್ಛತೆಯನ್ನು ಸಮಗ್ರವಾಗಿ ಅರಿತು ಮುಂದಿನ ದಿನಗಳಲ್ಲಿ ಅನುಸರಿಸುವುದೇ ನಮಗಿರುವ ಆಶಾಕಿರಣವಾಗಿದೆ. ವಿದ್ಯಾರ್ಥಿ ಮತ್ತು ಯುವ ಸಮೂಹ ಮನಸ್ಸು ಮಾಡಿದರೆ ಈ ದೇಶವು ಸ್ವಚ್ಛ ರಾಷ್ಟ್ರವಾಗುವುದರಲ್ಲಿ ಸಂಶಯವಿಲ್ಲ ಎಂದು ಅವರು ಹೇಳಿದರು.

Also Read  ಅಡ್ಯಾರ್ ಪದವು: ಸಹಾಯ ಕೇಳುವ ನೆಪದಲ್ಲಿ ಚೂರಿ ಇರಿತ

ಸೆಪ್ಟೆಂಬರ್ 17ರಿಂದ ಅಕ್ಟೋಬರ್ 20ರವರೆಗೆ ನಡೆಯುವ ಬೃಹತ್ ಸ್ವಚ್ಛತಾ ಅಭಿಯಾನದಲ್ಲಿ ಸಾರ್ವಜನಿಕರು, ಸಂಘಸಂಸ್ಥೆಗಳು ಪರಿಪೂರ್ಣವಾಗಿ ತೊಡಗಿಸಿಕೊಳ್ಳಬೇಕೆಂದು ಸಂಸದರು ಹೇಳಿದರು. ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಸಿ ಎಲ್ ಆನಂದ್, ಉಪ ಅರಣ್ಯ ಸಂರಕ್ಷಣಾಧಿಕಾರಿ (ಸಾಮಾಜಿಕ ಅರಣ್ಯ) ರೋಷನ್ ನಾಣಯ್ಯ, ಹಿರಿಯ ಪರಿಸರ ಅಧಿಕಾರಿ ಲಕ್ಷ್ಮಿಕಾಂತ್, ಸುರತ್ಕಲ್ ವಲಯ ಆಯುಕ್ತೆ ವಾಣಿ, ಬೆಂಗರೆ ಮಹಾಜನ ಸಭಾ ಅಧ್ಯಕ್ಷ ಚೇತನ್ ಬೆಂಗ್ರೆ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸ್ವಚ್ಛತಾ ಪ್ರತಿಜ್ಞಾವಿಧಿಯನ್ನು ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಗಿರೀಶ್ ನಂದನ್ ಬೋಧಿಸಿದರು. ಹಾಗೂ ಮೂವರು ಸ್ವಚ್ಛತಾ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜ್ಞಾನೇಶ್ ಸ್ವಾಗತಿಸಿದರು, ನಾಗರಾಜ್ ಬಜಾಲ್ ವಂದಿಸಿ ನಿಸರ್ಗ ಮಂಜುನಾಥ್ ನಿರೂಪಿಸಿದರು.

error: Content is protected !!
Scroll to Top