(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 17. ಬೆಂಗಳೂರಿನ ಏರ್ಪೋರ್ಟ್ ನಲ್ಲಿ ಲ್ಯಾಂಡಿಂಗ್ ಅಥವಾ ಟೇಕ್ ಆಫ್ ಆಗುವ ಪ್ರತಿಯೊಂದು ವಿಮಾನದಲ್ಲೂ ಮೊದಲ ಅನೌನ್ಸ್ ಮೆಂಟ್ ಕನ್ನಡದಲ್ಲೇ ಮಾಡಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಅವರು ಮನವಿ ಸಲ್ಲಿಸಿದ್ದಾರೆ.
ಈ ಸಂಬಂಧ ಮಹೇಶ್ ಜೋಶಿ ಅವರು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ (MoCA) ಪತ್ರ ಬರೆದು ಮನವಿ ಮಾಡಲು ಮುಂದಾಗಿದ್ದಾರೆ. ಜೋಶಿ ಅವರು ಬಿಐಎಎಲ್‌ನ ಎಂಡಿ ಮತ್ತು ಸಿಇಒ ಹರಿ ಮರಾರ್ ಅವರನ್ನು ಭೇಟಿ ಮಾಡಿ ವಿಮಾನ ನಿಲ್ದಾಣದಲ್ಲಿ ಕನ್ನಡವನ್ನು ಉತ್ತೇಜಿಸುವ ಹಾಗೂ ವಿಮಾನ ಲ್ಯಾಂಡಿಂಗ್ ಅಥವಾ ಟೇಕ್ ಆಫ್ ಸಮಯದಲ್ಲಿ ಕನ್ನಡವನ್ನು ಬಳಸುವ ಬಗ್ಗೆ ಚರ್ಚಿಸಿದರು. ಬಳಿಕ ಮಾತನಾಡಿದ ಜೋಶಿ, ನವೆಂಬರ್ 1ರಿಂದ ವಿಮಾನಗಳಲ್ಲಿ ಕನ್ನಡದಲ್ಲೇ ಅನೌನ್ಸ್ಮೆಂಟ್ ಮಾಡುವುದನ್ನು ಪ್ರಾರಂಭಿಸಲು ನಾನು ಅವರನ್ನು ಕೇಳಿದ್ದೇನೆ. ಏಕೆಂದರೆ ಈ ವ್ಯವಸ್ಥೆಯನ್ನು ವಿಮಾನಗಳಲ್ಲಿ ಅಳವಡಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ವಿಮಾನಗಳಲ್ಲಿ ಮೊದಲ ಪ್ರಕಟಣೆಯು ಕನ್ನಡದಲ್ಲಿರಬೇಕು, ನಂತರ ಇತರ ಭಾಷೆಗಳನ್ನು ಅನುಸರಿಸಬೇಕು. ಬ್ರಿಟಿಷ್ ಏರ್ವೇಸ್ ಮತ್ತು ಸಿಂಗಾಪುರ್ ಏರ್ಲೈನ್ಸ್ ಈಗಾಗಲೇ ಇದನ್ನು ಕಾರ್ಯಗತಗೊಳಿಸಲು ಪ್ರಾರಂಭಿಸಿವೆ ಎಂದು ತಿಳಿಸಿದರು.