ನೇಮದ ಕಾರಣ ನೀಡಿ ವೃದ್ಧರ ಹೆಣ ಸಾಗಿಸಲು ನಿರಾಕರಿಸಿದ ಗ್ರಾಮಸ್ಥರು ► ಹೆಗಲು‌ಕೊಟ್ಟ ಕಡಬ ಪೊಲೀಸರನ್ನೂ, ಮಾಹಿತಿ ನೀಡಿದ ಪತ್ರಕರ್ತನನ್ನೂ ಪ್ರಶಂಸಿಸಿದ ಹಿರಿಯ ಅಧಿಕಾರಿಗಳು

(ನ್ಯೂಸ್ ಕಡಬ) newskadaba.com ಕಡಬ, ಮಾ.03. ಊರಿನಲ್ಲಿ ದೈವದ ನೇಮ ನಡೆಯಲಿರುವ ಕಾರಣ ನೀಡಿ ಮೃತದೇಹವನ್ನು ಮುಟ್ಟಲು ಗ್ರಾಮದ ಜನ ಹಿಂಜರಿದಾಗ ಪೊಲೀಸ್ ಅಧಿಕಾರಿಯೇ ತನ್ನ ಸಿಬ್ಬಂದಿಗಳ ಜೊತೆಗೆ ಹೆಗಲುಕೊಟ್ಟು ಮೃತದೇಹವನ್ನು ಸಾಗಿಸಿರುವುದನ್ನು ಹಾಗೂ ಮಾಹಿತಿ ನೀಡಿದ ಪತ್ರಕರ್ತನನ್ನು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಪ್ರಶಂಸಿಸಿದ್ದಾರೆ‌.

ವೃದ್ಧರೋರ್ವರು ಕಡಬ ತಾಲೂಕಿನ ಕೊಯಿಲ ಗ್ರಾಮದ ಗುಲ್ಗೋಡಿ ಎಂಬಲ್ಲಿನ ಗುಡ್ಡದ ಕಾಲು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕುಸಿದು ಬಿದ್ದು ಮೃತಪಟ್ಟಿದ್ದರು‌. ಬಡ ಕುಟುಂಬದವರಾದುದರಿಂದ ಕುಟುಂಬಸ್ಥರು ಯಾರೂ ಇಲ್ಲದ ಹಿನ್ನೆಲೆಯಲ್ಲಿ ಮತ್ತು ಊರಿನಲ್ಲಿ ದೈವದ ನೇಮ ಇದ್ದುದರಿಂ ಮೃತದೇಹವನ್ನು ಮುಟ್ಟಿದರೆ ಸೂತಕದ ಅಂಜಿಕೆಯಿಂದ ಗ್ರಾಮದ ಜನ ಹೆಣ ಮುಟ್ಟಲು ಹಿಂಜರಿದಿದ್ದರು. ಇದರಿಂದಾಗಿ ಮೃತದೇಹವನ್ನು ಸಾಗಿಸಲು ಜನವಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ವಿಷಯ ತಿಳಿದ ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರೂ, ವಿಜಯ ಕರ್ನಾಟಕ ವರದಿಗಾರರೂ ಆದ ಬಾಲಕೃಷ್ಣ ಕೊಯಿಲರವರು ಕಡಬ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಕಡಬ ಪೊಲೀಸರು ಮೃತದೇಹವನ್ನು ಸಾಗಿಸಲು ಸ್ಥಳೀಯರಲ್ಲಿ ವಿನಂತಿಸಿದ್ದಾರೆ. ಆದರೆ ನೇಮದ ಕಾರಣವೊಡ್ಡಿ ಮೃತದೇಹವನ್ನು ಮುಟ್ಟಲು ಸ್ಥಳೀಯರು ನಿರಾಕರಿಸಿದ ಕಾರಣ ಕೊನೆಗೆ ಕಡಬ ಠಾಣಾ ಸಬ್ ಇನ್ಸ್‌ಪೆಕ್ಟರ್ ಪ್ರಕಾಶ್ ದೇವಾಡಿಗ, ಎಎಸ್ಐ ರವಿ ಮತ್ತು ಹೋಂಗಾರ್ಡ್ ಸಂದೇಶ್ ಮೃತದೇಹಕ್ಕೆ ತಾವೇ ಹೆಗಲು ಕೊಟ್ಟು ಮನೆತನಕ ಸಾಗಿಸಲು ನೆರವಾಗಿದ್ದಾರೆ. ಪೊಲೀಸರ ಈ ಮಾನವೀಯತೆಯ ಬಗ್ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಇದೀಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ರವಿಕಾಂತೇಗೌಡ ರವರು ಮಾನವೀಯ ಸೇವೆ ನೀಡಿದ ಪೊಲೀಸರನ್ನೂ, ಮಾಹಿತಿ ನೀಡಿದ ಪತ್ರಕರ್ತನನ್ನೂ ಪ್ರಶಂಸಿಸಿದ್ದಾರೆ.

error: Content is protected !!

Join the Group

Join WhatsApp Group