“ವಿಶ್ವ ಓಜೋನ್ ದಿನ – ಸೆಪ್ಟೆಂಬರ್ 16”

(ನ್ಯೂಸ್ ಕಡಬ) newskadaba.com ಸೆ. 16. ‘ಪ್ರತಿ ವರ್ಷ ಸಪ್ಟೆಂಬರ್ 16ನ್ನು “ವಿಶ್ವ ಓಜೋನ್ ದಿನ” ಎಂದು ಆಚರಿಸಿ ಓಜೋನ್ ಪದರದ ರಕ್ಷಣೆಯ ಬಗ್ಗೆ ವಿಶ್ವದಾದ್ಯಂತ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ವಿಪರ‍್ಯಾಸವೆಂದರೆ ಮರುದಿನದಿಂದಲೇ ‘ಒಜೋನ್ ಪದರ’ದ ಬಗ್ಗೆ ದಿವ್ಯ ನಿರ್ಲಕ್ಷ ತೋರುವ ಧೋರಣೆ ಮುಂದುವರಿಯುತ್ತಿದೆ. ಮನುಷ್ಯನ ಆಸೆ ದುರಾಸೆಗಳಿಗೆ ಕೊನೆಯೆಂಬುವುದಿಲ್ಲ ಎಂದು ಸಾಬೀತಾಗುತ್ತಲೇ ಇದೆ. ಓಜೋನ್ ಪದರದ ಇರುವಿಕೆಯನ್ನು 1839ರಲ್ಲೇ ಕಂಡು ಹಿಡಿಯಲಾಯಿತು ಮತ್ತು 1850ರಲ್ಲಿ ಓಜೋನ್‌ನ್ನು ವಾತಾವರಣದ ನೈಸರ್ಗಿಕ ಅನಿಲವೆಂದು ಪರಿಗಣಿಸಲಾಯಿತು. 1880ರಲ್ಲಿಯೇ ಓಜೋನ್ ಅತಿ ಹೆಚ್ಚು ನೇರಳಾತೀತ (Ultraviolet radiator) ಕಿರಣಗಳನ್ನು ಹೀರಿಕೊಳ್ಳುವ ಅನಿಲವೆಂದು ಸಂಶೋಧನೆಯಿಂದ ತಿಳಿದು ಬಂದರೂ ಓಜೋನ್ ಪದರದ ಬಗೆಗಿನ ದಿವ್ಯ ನಿರ್ಲಕ್ಷ್ಯತೆಯ ನಿರಂತರವಾಗಿ ಮುಂದುವರಿಯುತ್ತಲಿದೆ. ಇನ್ನಾದರೂ ನಾವು ಎಚ್ಚೆತ್ತಿಕೊಳ್ಳದಿದ್ದಲ್ಲಿ ಪರಿಸರದ ಸಮತೋಲನ ಕಳೆದುಹೋಗಿ, ಭೂಮಿ ಬರಡಾಗಿ, ಮನುಷ್ಯ ರೋಗಗಳ ಹಂದರವಾಗಿ, ಜೀವ ವೈವಿದ್ಯಗಳು ನಾಶಗೊಂಡು ಭೂಮಿ ಬದುಕಲು ಯೋಗ್ಯವಲ್ಲದ ಬಂಜರು ಭೂಮಿಯಾದರೂ ಆಶ್ಚರ್ಯವೇನಲ್ಲ.

ಏನಿದು ಓಜೋನ್ ಪದರ?

ಓಜೋನ್ ಎನ್ನುವುದು ನೀಲಿಬಣ್ಣದ ನೈಸರ್ಗಿಕ ಅನಿಲ ಎಂದು ಸಾಬೀತಾಗಿ ಶತಮಾನಗಳೇ ಕಳೆದಿದೆ. ಭೂಮಿಯ ವಾತಾವರಣದ ಮೊದಲೇ ಎರಡು ಪದರಗಳಾದ ಟ್ರೋಪೋಸ್ಪಿಯರ್ ಮತ್ತು ಸ್ಟಾಟೋಸ್ಪಿಯರ್‌ಗಳಲ್ಲಿ ಓಜೋನ್ ಇರುತ್ತದೆ. ಸುಮಾರು ಶೇಕಡಾ 90 ಭಾಗ ಓಜೋನ್ ಸ್ಟಾಟೋಸ್ಪಿಯರ್ ಪದರದಲ್ಲಿ ಇರುತ್ತದೆ. ಅಲ್ಲದೇ ಓಜೋನ್ ಸ್ಟಾಟೋಸ್ಪಿಯರ್‌ನಲ್ಲಿದ್ದರೆ ಜೀವರಕ್ಷಕ ಕವಚವಾಗಿರುತ್ತದೆ ಮತ್ತು ಟ್ರೋಪೋಸ್ಪಿಯರ್‌ ನಲ್ಲಿದ್ದರೆ ಮಾಲಿನ್ಯಕಾರಕ ಅನಿಲವಾಗಿ ಪರಿವರ್ತನೆಯಾಗುತ್ತದೆ. ಭೂಮಿಯಿಂದ ಮೇಲ್ಮುಖವಾಗಿ 25ರಿಂದ 30 ಕಿ.ಮೀ ದೂರದಲ್ಲಿ ಸ್ಟಾಟೋಸ್ಪಿಯರ್‌ ನಲ್ಲಿ ಓಜೋನ್ ಪದರವಾಗಿ ಸೂರ್ಯ ಕಿರಣಗಳಿಂದ ಹೊರಹೊಮ್ಮುವ ನೇರಳಾತೀತ (Ultraviolet radiator) ಕಿರಣಗಳನ್ನು ಹೀರಿಕೊಂಡು, ಚರ್ಮದ ಕ್ಯಾನ್ಸರ್‌ನಿಂದ ಮನುಕುಲವನ್ನು ರಕ್ಷಿಸುತ್ತದೆ ಎಂದು ನಮಗೆ ತಿಳಿದ ಸತ್ಯ ವಿಚಾರವಾಗಿದೆ. ಸೂರ್ಯನ ನೇರಳಾತೀತ ಕಿರಣಗಳ ಸಮ್ಮುಖದಲ್ಲಿ ಆಮ್ಲಜನಕದ ಒಂದು ಅಣು ( O 2 ) ಮತ್ತು ಪರಮಾಣು (o) ಸೇರಿದಾಗ ಓಜೋನ್ ಪದರ ಸೃಷ್ಟಿಯಾಗುತ್ತದೆ. ಒಟ್ಟಿನಲ್ಲಿ ಓಜೋನ್ ಪದರದ ಸೃಷ್ಟಿಗೆ ಮುಖ್ಯವಾಗಿ ಬೇಕಾಗಿರುವುದು ಆಮ್ಲಜನಕದ ಅಣು ಮತ್ತು ಪರಮಾಣು ಹಾಗೂ ಸೂರ್ಯನ ನೇರಳಾತೀತ ಕಿರಣಗಳು ಓಜೋನ್ ಪದರ ಸೃಷ್ಟಿಯಾಗುವ ಈ ಪ್ರಕೃತಿಯ ಪ್ರಕ್ರಿಯೆಯಲ್ಲಿ ಆಮ್ಲಜನಕದ ಅಣು ಮತ್ತು ಪರಮಾಣುಗಳು ನೇರಳಾತೀತ ಕಿರಣಗಳನ್ನು ಹೀರಿ ಭೂಮಂಡಲದ ಜೀವರಾಶಿಗಳಿಗೆ ಸಂಪೂರ್ಣ ರಕ್ಷಣೆ ನೀಡುತ್ತದೆ. ಹೀಗೆ ಓಜೋನ್ ಪದರ ಸೃಷ್ಟಿಯಾಗುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಅದರ ಜೊತೆಗೆ ನೈಸರ್ಗಿಕವಾಗಿ ಹಾಗೂ ಮನುಷ್ಯನ ನಿಸರ್ಗ ವಿರೋಧಿ ಪ್ರಕ್ರಿಯೆಗಳಿಂದಾಗಿ ಓಜೋನ್ ಪದರ ಅನೈಸರ್ಗಿಕವಾಗಿ ಕ್ಷೀಣವಾಗುತ್ತಲೇ ಬರುತ್ತಿದೆ. ಹೀಗೆ ಓಜೋನ್ ಸೃಷ್ಟಿಯಾಗುವ ಪ್ರಕ್ರಿಯೆಗಿಂತ ಕ್ಷೀಣಿಸುವ ಪ್ರಕ್ರಿಯೆ ಹೆಚ್ಚಾದಂತೆ ಓಜೋನ್ ಪದರ ತೆಳುವಾಗುತ್ತಲೇ ಬರುತ್ತದೆ. ಒಟ್ಟಿನಲ್ಲಿ ತೆಳುವಾದ ಓಜೋನ್ ಪದರ ಸೂರ್ಯನ ನೇರಳಾತೀತ ಕಿರಣಗಳನ್ನು ತಡೆಯಲಾರದೇ, ಭೂಮಿಗೆ ನೇರವಾಗಿ ಸೇರಿಕೊಂಡು ಜೀವರಾಶಿಗಳ ಮೇಲೆ, ಮನುಕುಲದ ಮೇಲೆ ಮಾರಕವಾದ ದಾಳಿ ನಡೆಸುತ್ತದೆ.

Also Read  ಅತ್ಯುತ್ತಮ ಸೇವೆ ಮಾಡಿದ ರಾಜ್ಯ ಸರ್ಕಾರಿ ನೌಕರರಿಂದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಅರ್ಜಿ

 

ಓಜೋನ್ ಪದರ ಕರಗಲು ಕಾರಣಗಳು ಏನು?

ಓಜೋನ್ ಪದರ ಕರಗಲು ಮುಖ್ಯ ಕಾರಣಗಳು ಬೆಳೆಯುತ್ತಿರುವ ಕೈಗಾರಿಕೀಕರಣ ಎಂದರೂ ತಪ್ಪಲ್ಲ. ಕಾಡು ಕಡಿದು ಕಾಂಕ್ರೀಟ್ ಜಂಗಲ್ ಮಾಡಿಕೊಂಡು ಆಧುನೀಕತೆಯ ನೆಪದಲ್ಲಿ ಪರಿಸರ ವಿರೋಧಿ ಕೈಗಾರಿಕೆಗಳಿಗೆ ಹೆಚ್ಚು ಒತ್ತು ನೀಡುವುದೇ ಬಹಳ ದೊಡ್ಡ ದುರಂತ ಎಂದರೂ ತಪ್ಪಲ್ಲ. ಕಾರ್ಖಾನೆಗಳಿಂದ ಹೊರಹೊಮ್ಮುವ ವಿಷಕಾರಕ ಅನಿಲಗಳು, ವಾಹನಗಳಿಂದ ಹೊರಸೂಸುವ ಹೊಗೆ, ಧೂಮಪಾನ, ಹವಾನಿಯಂತ್ರಕ ಯಂತ್ರಗಳಿಂದ ಹೊರಸೂಸುವ ವಿಷಾನಿಲಗಳು, ಶಿಥಿಲೀಕರಣ ಯಂತ್ರದಿಂದ ಹೊರಹೊಮ್ಮುವ ಅನಿಲಗಳು ಖಂಡಿತವಾಗಿಯೂ ಓಜೋನ್ ಪದರಕ್ಕೆ ಮಾರಕವಾಗಬಲ್ಲದು. ಮಥೇನ್, ಕಾರ್ಬನ್ ಮೋನೋಕ್ಸೈಡ್, ಕ್ಲೋರೋಪ್ಲೋರೋ ಕಾರ್ಬನ್, ಕ್ಲೋರಿನ್, ಬ್ರೋಮಿನ್, ಮಿಥೈಲ್ ಬ್ರೋಮೈಡ್, ಹೈಡ್ರೋ ಪ್ಲೋರೋಕಾರ್ಬನ್ ಮುಂತಾದ ಅನಿಲಗಳು ಓಜೋನ್ ಪದರವನ್ನು ತೆಳುವಾಗಿಸುವಲ್ಲಿ ಪ್ರಮುಖ ಭೂಮಿಕೆ ವಹಿಸುತ್ತದೆ.

ಓಜೋನ್ ಪದರ ತೆಳುವಾದಲ್ಲಿ ಉಂಟಾಗುವ ಅನಾಹುತಗಳು-

ಆಕ್ಸ್ಪರ್ಡ್ ವಿಶ್ವ ವಿದ್ಯಾಲಯದ ಹಿರಿಯ ವಿಜ್ಞಾನಿ ಡಾಬ್ಸನ್ ಎಂಬಾತ ಓಜೋನ್ ಅನಿಲದ ಪ್ರಮಾಣವನ್ನು ಸಂಶೋಧನಾತ್ಮಕವಾಗಿ ಮೊದಲಿಗೆ ದಾಖಲಿಸಿದರು. ಅವರ ನೆನಪಲ್ಲಿ ಓಜೋನ್ ಪದರದ ಅಳತೆಗೆ ಡಾಬ್ಸನ್ ಯುನಿಟ್ ಎಂದೇ ನಾಮಕರಣ ಮಾಡಲಾಯಿತು. ಈ ಪದರ 290 ರಿಂದ 310ರ ವರೆಗಿದ್ದಲ್ಲಿ ಯಾವುದೇ ತೊಂದರೆ ಇಲ್ಲ. ಆದರೆ 290ಕ್ಕಿಂತ ಕಡಿಮೆಯಾದಲ್ಲಿ ಮನುಕುಲ ಮತ್ತು ಜೀವ ಸಂಕುಲಕ್ಕೆ ಖಂಡಿತವಾಗಿಯೂ ಮಾರಕವಾಗುತ್ತದೆ ಎಂದು ತಿಳಿದು ಬಂದಿದೆ. ಓಜೋನ್ ಪದರ ತೂತಾಗಿದೆ ಎಂದು ಆಡು ಮಾತಲ್ಲಿ ಹೇಳುವುದು ಇದರ ನಿಜವಾದ ಅರ್ಥ, ಓಜೋನ್ ಪದರ 290 ಡಾಬ್ಸನ್ ಯುನಿಟ್‌ಗಿಂತಲೂ ತೆಳುವಾಗಿ ತನ್ನ ಜೀವ ರಕ್ಷಕ ಸಾಮರ್ಥ್ಯವನ್ನು ಕಳಕೊಂಡಿದೆ ಎಂಬುದಾಗಿರುತ್ತದೆ. ಓಜೋನ್ ಪದರ ತೆಳುವಾದಲ್ಲಿ ಮನುಷ್ಯನ ಆರೋಗ್ಯದಲ್ಲಿ ಏರುಪೇರಾಗಿ ಚರ್ಮದ ಕ್ಯಾನ್ಸರ್ ಬರಬಹುದು. ಭೂಮಂಡಲದ ಇತರ ಜೀವ ಸಂಕುಲಗಳು ನಾಶವಾಗಿ ಪರಿಸರದ ಸಮತೋಲನ ತಪ್ಪಬಹುದು. ಭೂಮಿಯ ಫಲವತ್ತತೆ ಕಡಿಮೆಯಾಗಿ ಬರಡು ಭೂಮಿಯಾಗಲೂಬಹುದು. ಶುದ್ಧ ನೀರಿನ ಕೊರತೆಯೂ ಕಾಡಬಹುದು. ಒಟ್ಟಿನಲ್ಲಿ ಭೂಮಂಡಲ ಜೀವಿಸಲು ಯೋಗ್ಯವಾದ ಸ್ಥಳವಾಗಿ ಖಂಡಿತವಾಗಿಯೂ ಉಳಿಯದು ಎಂಬುದು ಸಾರ್ವಕಾಲಿಕ ಸತ್ಯ. ಈ ನಿಟ್ಟಿನಲ್ಲಿ ನಾವೆಲ್ಲರೂ ಗಾಢವಾಗಿ ಯೋಚಿಸಿ ಪರಿಸರಕ್ಕೆ ಮಾರಕವಾಗುವ ಯಾವುದೇ ಕೈಗಾರೀಕೀಕರಣ ಯೋಜನೆಗಳು ಮತ್ತು ಪರಿಸರಕ್ಕೆ ಮಾರಕವಾಗುವ ಅನಿಲಗಳನ್ನು ಹೊರಸೂಸುವ ಯಂತ್ರೋಪಕರಣಗಳ ಬಳಕೆಯನ್ನು ಕಡಿಮೆ ಮಾಡಿ ಭೂಮಂಡಲವನ್ನು ನಮ್ಮ ನಂತರದ ಪೀಳಿಗೆಗೆ ವಾಸಕ್ಕೆ ಯೋಗ್ಯವಾದ ಸ್ಥಳವಾಗಿ ಉಳಿಸಿಕೊಳ್ಳುವ ಗುರುತರವಾದ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ. ನಮ್ಮ ಜೀವನಶೈಲಿ, ಬದುಕಿನಪದ್ಧತಿ, ಆಹಾರ ಪದ್ಧತಿಯನ್ನು ಪರಿಸರಕ್ಕೆ ಪೂರಕವಾಗಿ ಮಾಡಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ. ಇಲ್ಲವಾದಲ್ಲಿ ಇನ್ನೊಂದು ಶತಮಾನ ಕಳೆಯುವ ಹೊತ್ತಿಗೆ ನಮ್ಮ ಫಲವತ್ತ್ತಾದ ಭೂಮಂಡಲ ಬಂಜರು ಭೂಮಿಯಾಗಿ ಮರುಳುಗಾಡಾಗಿ ಪರಿವರ್ತತೆಯಾಗಲೂಬಹುದು.

Also Read  ಸೆ. 26: ವಿಶ್ವ ಸಂತಾನ ನಿಯಂತ್ರಣ ಜಾಗೃತಿ ದಿನ - ಡಾ.ಮುರಲೀ ಮೋಹನ ಚೂಂತಾರು

ಕೊನೆಮಾತು

ವಿಶ್ವ ಸಂಸ್ಥೆಯ ಇತ್ತೀಚಿನ ಅಂಕಿಅಂಶಗಳ ಪ್ರಕಾರ ಜಗತ್ತಿನಲ್ಲಿ ಅತೀ ಹೆಚ್ಚು ಇಂಗಾಲ ಹೊರಸೂಸುವ ರಾಷ್ಟ್ರಗಳಲ್ಲಿ ಮೊದಲ ಸ್ಥಾನ ಚೀನಾಕ್ಕೆ ದೊರಕಿದೆ. ಅದೇ ರೀತಿ ಅತೀ ಕಡಿಮೆ ಇಂಗಾಲ ಹೊರಸೂಸುವ ರಾಷ್ಟ್ರವಾಗಿ ಇಥಿಯೋಪಿಯಾ ಹೊರಹೊಮ್ಮಿದೆ. ನಮ್ಮ ಭಾರತ ವಿಶ್ವದಲ್ಲಿ ನಾಲ್ಕನೇ ಅತಿದೊಡ್ಡ ಇಂಗಾಲ ಹೊರಸೂಸುವ ದೇಶವಾಗಿದೆ. ಬೆಳವಣಿಗೆಯ ಧಾವಂತದಲ್ಲಿ ಕೈಗಾರೀಕರಣದ ಅನಿವಾರ್ಯತೆಯಲ್ಲಿ ಆರ್ಥಿಕತೆಯನ್ನು ಸದೃಢಗೊಳಿಸುವ ಪ್ರಕ್ರಿಯೆಯಲ್ಲಿ ಇಂತಹ ಬೆಳವಣಿಗೆಗಳು ನಡೆಯುವುದು ಸಹಜ. ಆದರೆ ಪರಿಸರ ಮತ್ತು ಆಧುನೀಕರಣ ಇವುಗಳ ನಡುವಿನ ಹೊಂದಾಣಿಕೆಯನ್ನು ತೂಗಿಕೊಂಡು ಹೋಗಬೇಕಾದ ಅನಿವಾರ್ಯತೆಯೂ ಇದೆ. ಜಗತ್ತಿನ ಇತರ ರಾಷ್ಟ್ರಗಳ ಜತೆಗಿನ ಪೈಪೋಟಿಯಲ್ಲಿ, ಕೈಗಾರೀಕೀಕರಣದ ಮತ್ತು ಔದ್ಯೋಗೀಕರಣದ ನೆಪದಲ್ಲಿ ಹೆಚ್ಚು ಹೆಚ್ಚು ಹಸಿರುಮನೆ ಅನಿಲಗಳನ್ನು (Green House Gazes) ಅಂದರೆ ಕಾರ್ಬನ್ ಡೈ ಆಕ್ಸೈಡ್, ಮಿಥೇನ್, ನೈಟ್ರನ್ ಆಕ್ಸೈಡ್ ಗಳನ್ನು ಪರಿಸರಕ್ಕೆ ಸೇರಿಸಿದಲ್ಲಿ ನಮ್ಮ ನಂತರದ  ಪೀಳಿಗೆಯ ಜನಾಂಗ ಬದುಕಲು, ಉಸಿರಾಡಲು ಪರದಾಡಬೇಕಾದ ಕಾಲಬಂದರೂ ಬರಬಹುದು. ಈ ನಿಟ್ಟಿನಲ್ಲಿ ನಾವೆಲ್ಲರೂ ಹೆಚ್ಚು ಚಿಂತಿಸಿ ಮುಂದುವರಿಯಬೇಕಾದ ಕಾಲ ಬಂದೊದಗಿದೆ ಎಂದರೂ ತಪ್ಪಲ್ಲ. ಒಟ್ಟಿನಲ್ಲಿ ನಮ್ಮ ಮುಂದಿನ ಜನಾಂಗಕ್ಕೂ ಬದುಕಲು ಪೂರಕವಾದ ವಾತಾವರಣ ಮತ್ತು ಭೂಮಂಡಲದ ಫಲವತ್ತತೆಯನ್ನು ಉಳಿಸಿಕೊಳ್ಳುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ.

Also Read  ತರಬೇತಿ ಅವಧಿಯ ಶಿಷ್ಯ ವೇತನ- ಅವಧಿ ವಿಸ್ತರಣೆ

ಡಾ|| ಮುರಲೀ ಮೋಹನ್ ಚೂಂತಾರು

error: Content is protected !!
Scroll to Top