(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 17. ಕೇಂದ್ರ ಸರ್ಕಾರ ಘೋಷಿಸಿರುವ ಮಹತ್ವಾಕಾಂಕ್ಷಿ ‘ಪಿಎಂ ಶ್ರೀ’ ಯೋಜನೆಯಡಿ ಮುಡಿಪುವಿನ ಜವಾಹರ್ ನವೋದಯ ವಿದ್ಯಾಲಯ ಆಯ್ಕೆಯಾಗಿರುವುದನ್ನು ಅಧಿಕೃತವಾಗಿ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಘೋಷಿಸಿದ್ದಾರೆ.
ಈ ವೇಳೆ ಮಾತನಾಡಿದ ಸಂಸದರು, ಪ್ರಧಾನ ಮಂತ್ರಿ ಸ್ಕೂಲ್ ಫಾರ್ ರೈಸಿಂಗ್ ಇಂಡಿಯಾ( ಪಿಎಂಶ್ರೀ) ಯೋಜನೆಯಡಿ ಮುಡಿಪುವಿನ ಜವಾಹರ್ ನವೋದಯ ವಿದ್ಯಾಲಯ ಶಾಲೆ ಆಯ್ಕೆಯಾಗಿರುವುದು ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ. ಈ ಯೋಜನೆಯಡಿ ಶಾಲೆಯಲ್ಲಿ ತಂತ್ರಜ್ಞಾನ ಆಧಾರಿತ ನಾವೀನ್ಯ ಬೋಧನಾ ವ್ಯವಸ್ಥೆ, ಕೌಶಲ್ಯ, ಆವಿಷ್ಕಾರ, ಉತ್ತಮ ಮೂಲಸೌಕರ್ಯ ಸೇರಿದಂತೆ ಈ ವಿದ್ಯಾಸಂಸ್ಥೆಯ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗಲಿದೆ ಎಂದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ರಾಜೇಶ್, ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಮಾಜಿ ಅಧ್ಯಕ್ಷರಾದ ಸಂತೋಷ್ ಬೋಳಿಯಾರ್, ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷರಾದ ಜಗದೀಶ್ ಆಳ್ವ, ಶಿಕ್ಷಕ ವೃಂದ, ವಿದ್ಯಾರ್ಥಿಗಳ ಪೋಷಕರು ಹಾಜರಿದ್ದರು.
‘ಪಿಎಂ ಶ್ರೀʼ ಶಾಲೆಗಳ ವೈಶಿಷ್ಯಗಳೇನು?
PM SHRI ಶಾಲೆಯು ಭಾರತ ಸರ್ಕಾರದಿಂದ ಪ್ರಾರಂಭಿಸಿರುವ ಕೇಂದ್ರ ಪ್ರಾಯೋಜಿತ ಯೋಜನೆಯಾಗಿದ್ದು, ದೇಶದಾದ್ಯಂತ 14,500ಕ್ಕೂ ಹೆಚ್ಚು ಶಾಲೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಮೇಲ್ಧರ್ಜೆಗೇರಿಸುವುದು ಈ ಮಹತ್ವಾಕಾಂಕ್ಷಿ ಯೋಜನೆಯ ಉದ್ದೇಶವಾಗಿದೆ. ಇವುಗಳು ಮಾದರಿ ಶಾಲೆಗಳಾಗಲಿದ್ದು, ಸುತ್ತಮುತ್ತ ಶಾಲೆಗಳಿಗೆ ಪ್ರೇರಣೆ ಹಾಗೂ ಮಾರ್ಗದರ್ಶನ ಒದಗಿಸಲಿವೆ. ಸುಸಜ್ಜಿತ ಪ್ರಯೋಗಾಲಯಗಳು, ಸ್ಮಾರ್ಟ್ ಕ್ಲಾಸ್ ರೂಂ, ಗ್ರಂಥಾಲಯಗಳು, ಕ್ರೀಡಾ ಸಲಕರಣೆ, ಕಲಾ ಕೊಠಡಿ ಮುಂತಾದ ಅತ್ಯಾಧುನಿಕ ಸೌಲಭ್ಯಗಳನ್ನು ಪಿಎಂ ಶ್ರೀ ಶಾಲೆಗಳಲ್ಲಿ ಒದಗಿಸಲಾಗುತ್ತದೆ.