(ನ್ಯೂಸ್ ಕಡಬ) newskadaba.com ಕೊಪ್ಪಳ, ಸೆ. 14. ಹಣಕ್ಕಾಗಿ ಬೇರೆಯವರಿಗೆ ನೂರಾರು ಫೋನ್ ಕಾಲ್ ರೆಕಾರ್ಡ್ ಬಹಿರಂಗಪಡಿಸಿದ ಸೈಬರ್, ಆರ್ಥಿಕ ಮತ್ತು ನಾರ್ಕೋಟಿಕ್ಸ್ ಅಪರಾಧ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಕೊಪ್ಪಳ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಹೆಡ್ ಕಾನ್ಸ್ ಟೇಬಲ್ ಸಿಹೆಚ್ ಕೊಟೆಪ್ಪ (44)ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಎಫ್‌ಐಆರ್ ವರದಿಯ ಪ್ರಕಾರ, ಆರೋಪಿ ಕಾನ್ಸ್ ಟೇಬಲ್ 145 ಜನರ ಮೊಬೈಲ್ ಕಾಲ್ ರೆಕಾರ್ಡ್ ಬಹಿರಂಗಪಡಿಸಿದ್ದಾರೆ. ಅಲ್ಲದೇ, ಒಂಬತ್ತು ಮೊಬೈಲ್ ಟವರ್‌ಗಳಿಗೆ ಸೇರಿದ ಸೆಲ್ ಐಡಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಚಾಟ್‌ಗಳು ಮತ್ತು ದೂರವಾಣಿ ಸಂಭಾಷಣೆಯಂತಹ ಖಾಸಗಿ ಮಾಹಿತಿಯನ್ನು ಬೇರೆ ಬೇರೆ ಕ್ಲೈಂಟ್ ಗಳೊಂದಿಗೆ ಹಂಚಿಕೊಳ್ಳಲಾಗಿದೆ. ಪ್ರಕರಣದ ಪ್ರಮುಖ ವ್ಯಕ್ತಿ ಯಾರು ಮತ್ತು ಆರೋಪಿ ಕಾನ್‌ಸ್ಟೆಬಲ್‌ಗೆ ಎಷ್ಟು ಪಾವತಿಸಲಾಗಿದೆ ಎಂಬ ಬಗ್ಗೆ ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದಾರೆ.