ಮನೆಯ ಬಾಗಿಲಿನ ಚಿಲಕ ಮುರಿದು 3.54 ಲಕ್ಷ ರೂ. ಮೌಲ್ಯದ ಆಭರಣ, ನಗದು ಕಳ್ಳತನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ. 14.  ಮನೆಯೊಂದರಲ್ಲಿ ಯಾರೂ ಇಲ್ಲದ ವೇಳೆ ಬಾಗಿಲಿನ ಚಿಲಕ ಮುರಿದು ಒಳನುಗ್ಗಿದ್ದ ಕಳ್ಳರು 3.54 ಲಕ್ಷ ರೂ. ಮೌಲ್ಯದ ಆಭರಣ ಹಾಗೂ ನಗದು ಕಳವು ಮಾಡಿದ ಘಟನೆ ಪುದು ಗ್ರಾಮದ ಪೆರಿಯಾರ್ ನಲ್ಲಿ ನಡೆದಿರುವುದಾಗಿ ಸೆಪ್ಟೆಂಬರ್ 12ರಂದು ಬೆಳಕಿಗೆ ಬಂದಿದೆ.

ಪೆರಿಯಾರ್ ಬಾಲ್ಪಬೊಟ್ಟು ನಿವಾಸಿ ಮಹಮ್ಮದ್ ಇಕ್ಬಾಲ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಕ್ಯಾಟರಿಂಗ್ ಕೆಲಸ ಮಾಡುತ್ತಿರುವ ಅವರು ಸೆ. 8ರಂದು ಮನೆಗೆ ಬೀಗ ಹಾಕಿ ಪತ್ನಿಯೊಂದಿಗೆ ಬೆಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದರು. ಸೆ. 12ರಂದು ಮನೆಗೆ ಮರಳಿದಾಗ ಮುಂದಿನ ಬಾಗಿಲಿನ ಚಿಲಕ ಮುರಿದಿದ್ದು, ಬಾಗಿಲು ತೆರೆದುಕೊಂಡಿತ್ತು. ಒಳಗೆ ಹೋಗಿ ನೋಡಿದಾಗ ಕೋಣೆಯೊಂದರ ಕಪಾಟಿನ ಬೀಗ ಒಡೆದು ಬಟ್ಟೆಗಳನ್ನು ಚೆಲ್ಲಾಪಿಲ್ಲಿಗೊಳಿಸಿ ಅದರೊಳಗಿದ್ದ 1.70 ಲಕ್ಷ ರೂ. ನಗದು, 1.80 ಲಕ್ಷ ರೂ. ಮೌಲ್ಯದ 36 ಗ್ರಾಂ ತೂಕದ ಪೆಂಡೆಂಟ್ ಸಹಿತ ಚಿನ್ನದ ಸರ, ಕಪಾಟಿನ ಮೇಲಿದ್ದ 4 ಸಾವಿರ ರೂ. ಮೌಲ್ಯದ ಮೊಬೈಲ್ ಫೋನ್ ಕಳವಾಗಿರುವುದಾಗಿ ಎಂದು ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಆಗಮಿಸಿ ತನಿಖೆ ನಡೆಸಿದೆ ಎಂದು ವರದಿ ಪ್ರಕಟಣೆ ತಿಳಿಸಿದೆ.

Also Read  ಕೋಟ : ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಏಳನೇ ತರಗತಿ ವಿದ್ಯಾರ್ಥಿ

 

error: Content is protected !!
Scroll to Top