ಕೊಯಿಲ ಪಶುವೈದ್ಯಕೀಯ ಕಾಲೇಜು ಪ್ರಾರಂಭಕ್ಕೆ ಗ್ರೀನ್ ಸಿಗ್ನಲ್ – ಹಂದಿ, ಕುರಿ ಸಾಕಾಣಿಕೆಗೂ ಅವಕಾಶ

(ನ್ಯೂಸ್ ಕಡಬ) newskadaba.com ಕಡಬ, ಸೆ. 14. 2025ರ ಸೆಪ್ಟೆಂಬರ್ ತಿಂಗಳಿನಲ್ಲಿ ಉಪ್ಪಿನಂಗಡಿ ಸಮೀಪದ ಕೊಯಿಲದಲ್ಲಿ ಪಶು ವೈದ್ಯಕೀಯ ಕಾಲೇಜು ಪ್ರಾರಂಭವಾಗಲಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.


ಈ ಕುರಿತು ಸೆ. 13ರ ಶುಕ್ರವಾರದಂದು ಬೆಂಗಳೂರಿನಲ್ಲಿ ಪಶುಸಂಗೋಪನಾ ಇಲಾಖೆಯ ಪ್ರಮುಖರನ್ನು ಭೇಟಿಯಾದ ಶಾಸಕರು, ಕೊಯಿಲ ಪಶು ವೈದ್ಯಕೀಯ ಕಾಲೇಜಿನ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ಈಗಾಗಲೇ ಅಲ್ಲಿ ನಿರ್ಮಾಣವಾಗಿರುವ ಕಟ್ಟಡಗಳು ಖಾಲಿ ಬಿದ್ದಿದ್ದು, ಇದೇ ಕಟ್ಟಡವನ್ನು ನವೀಕರಣ ಮಾಡಿ ಮೂಲಭೂತ ಸೌಕರ್ಯಗಳಿಗಾಗಿ ಸರಕಾರ ತಕ್ಷಣ ಅನುದಾನವನ್ನು ಬಿಡುಗಡೆ ಮಾಡಬೇಕು ಮತ್ತು ಒಂದು ವರ್ಷದೊಳಗೆ ಕಾಲೇಜು ಪ್ರಾರಂಭವಾಗಬೇಕು ಎಂಬ ಶಾಸಕರ ಮನವಿಗೆ ಸ್ಪಂದಿಸಿದ ಪಶುಸಂಗೋಪನಾ ಸಚಿವಾಲಯ ಈ ಬಗ್ಗೆ ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಅಧಿಕಾರಿಗಳು ಶಾಸಕರಿಗೆ ತಿಳಿಸಿದ್ದಾರೆ. ಕೊಯಿಲದಲ್ಲಿರುವ ವಿಸ್ತಾರವಾದ ಜಾಗದಲ್ಲಿ ಪಶು ವೈದ್ಯಕೀಯ ಕಾಲೇಜಿಗೆ ಪೂರಕವಾಗಿ ಇರಬೇಕಾದ ಅಗತ್ಯ ಕ್ರಮಗಳನ್ನು ಮಾಡಿಕೊಳ್ಳುವುದರ ಜೊತೆಗೆ ಹೊರ ಗುತ್ತಿಗೆ ಆಧಾರದಲ್ಲಿ ಸ್ಥಳದಲ್ಲಿ ಹಸು, ಕುರಿ ಮತ್ತು ಹಂದಿ ಸಾಕಾಣಿಕೆಗೆ ಅವಕಾಶ ನೀಡುವಂತೆ ಶಾಸಕರು ಮನವಿ ಮಾಡಿದ್ದರು. ಈ ಮನವಿಗೆ ಇಲಾಖೆ ಸ್ಪಂದಿಸಿದ್ದು ಹೊರ ಗುತ್ತಿಗೆ ಆಧಾರದಲ್ಲಿ ಹಸು, ಕುರಿ ಮತ್ತು ಹಂದಿ ಸಾಕಾಣಿಕೆಗೆ ಅವಕಾಶವನ್ನು ಕಲ್ಪಿಸಿದೆ.

error: Content is protected !!
Scroll to Top