(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 14. ಭತ್ತದಲ್ಲಿ ಎಲೆ ಸುರುಳಿ ಹಾಗೂ ಕೊಳವೆ ಹುಳುವಿನ ಭಾದೆಯು ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭತ್ತದ ಗದ್ದೆಗಳಲ್ಲಿ ಕಂಡುಬಂದಿದ್ದು, ಇವುಗಳ ಸಮಗ್ರ ನಿರ್ವಹಣೆ ಮಾಡುವುದು ಅಗತ್ಯವಾಗಿದೆ.
ಸಾಮಾನ್ಯವಾಗಿ ಎಲೆ ಸುರುಳಿ ಕೀಟದ ಮರಿ ಹುಳುಗಳು ಗರಿಗಳನ್ನು ಸುರುಳಿ ಮಾಡಿ ಅದರ ಒಳಗಡೆ ಇದ್ದು, ಹಸಿರು ಭಾಗವನ್ನು ತಿನ್ನುವುದರಿಂದ ಎಲೆಗಳ ಮೇಲೆ ಬಿಳಿ ಬಣ್ಣದ ಪಟ್ಟೆಗಳು ಕಾಣುತ್ತವೆ ಮತ್ತು ಕೊಳವೆ ಕೀಟದ ಮರಿ ಹುಳುಗಳು ಎಲೆಗಳನ್ನು ತುಂಡು-ತುಂಡಾಗಿ ಕತ್ತರಿಸಿ ಕೊಳವೆಗಳನ್ನು ಮಾಡಿ ಒಳಗಡೆಯಿಂದ ಗರಿಗಳನ್ನು ತಿನ್ನುತ್ತದೆ ಹಾಗೂ ತೀವ್ರ ಭಾದಿತ ಗದ್ದೆಗಳಲ್ಲಿ ತುದಿ ಎಲೆಗಳು ಇಲ್ಲದೇ ಇರುವುದು ಕಾಣಬಹುದು.
ಆದುದರಿಂದ ಭತ್ತದಲ್ಲಿ ಆಹಾರ ಉತ್ಪಾದನೆ ಕಡಿಮೆ ಆಗಿ, ಇಳುವರಿ ತುಂಬಾ ಕಡಿಮೆ ಆಗಿರುವುದರಿಂದ ಇವುಗಳ ನಿರ್ವಹಣೆಯು 2 ಮಿ.ಲೀ. ಕಹಿ ಬೇವಿನ ಎಣ್ಣೆ ಅಥವಾ 2 ಮಿ.ಲೀ. ಪ್ರೋಫೆನೊಫಾಸ್ 50 ಇ.ಸಿ ಅಥವಾ 2 ಮಿ.ಲೀ. ಕ್ವಿನೋಲ್ಫಾಸ್ 25.ಇ.ಸಿ. ಅಥವಾ ಫೋಸಲಾನ್ 35.ಇ.ಸಿ. ಅಥವಾ 0.5 ಮಿ.ಲೀ. ಇಂಡಾಕ್ಸಿಕಾರ್ಬ್ 14.5.ಎಸ್.ಸಿ. ಅನ್ನು ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು. ಮೇಲೆ ತಿಳಿಸಿರುವ ಯಾವುದಾದರೂ ಒಂದು ಕೀಟನಾಶಕವನ್ನು ಗದ್ದೆಯಲ್ಲಿರುವ ನೀರನ್ನು ಬಸಿದು, ಸಿಂಪರಣೆ ಮಾಡುವುದರಿಂದ ಉತ್ತಮವಾಗಿ ಕೀಟಗಳ ನಿರ್ವಹಣೆ ಮಾಡಬಹುದು ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ.ಕೇದಾರನಾಥ ಇವರು ತಿಳಿಸಿರುತ್ತಾರೆ.