(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 14. ಗಣೇಶೋತ್ಸವ ಆಚರಣೆಗಳು ಸಮಸ್ತ ಹಿಂದೂ ಸಮಾಜವನ್ನು ಒಟ್ಟುಗೂಡಿಸುವ ಸುಸಂದರ್ಭವಾಗಿದೆ ಎಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ. ಹಿಂದೂ ಯುವ ಸೇನಾ ಆಶ್ರಯದಲ್ಲಿ ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆದ 32ನೇ ವರ್ಷದ ಮಂಗಳೂರು ಗಣೇಶೋತ್ಸವದ ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಸಾರ್ವಜನಿಕ ಗಣೇಶೋತ್ಸವ ಆಯೋಜನೆಯಿಂದ ಹಿಂದೂ ಸಮಾಜ ಒಟ್ಟಾಗಿ ಒಂದೆಡೆ ಸೇರುವಂತಾಗುತ್ತದೆ. ಈ ಗಣಪತಿ ಉತ್ಸವದ ಮೂಲಕ ಸಮಾಜದಲ್ಲಿ ಧರ್ಮದ ಕಾರ್ಯ, ಹಿಂದುತ್ವ ಹಾಗೂ ಧಾರ್ಮಿಕತೆಯ ಜಾಗೃತಿ ಮೂಡಿಸುತ್ತಿದೆ. ಇದರ ಜತೆಗೆ ಗಣೇಶೋತ್ಸವದ ಮೂಲಕ ಈ ಗಣೇಶೋತ್ಸವ ಸಮಿತಿಯೂ ಸಮಾಜದಲ್ಲಿರುವ ಅಶಕ್ತರಿಗೆ ಹೆಚ್ಚಿನ ಸೇವೆ ಸಲ್ಲಿಸುವಂತಾಗಲಿ” ಎಂದು ಹಾರೈಸಿದರು.
ಬಾಲಗಂಗಾಧರ ತಿಲಕರು ಗಣೇಶನ ಆರಾಧನೆಯನ್ನು ಹಿಂದೂ ಸಮುದಾಯದ ಹಬ್ಬವನ್ನಾಗಿಸುವ ಮೂಲಕ ಬ್ರಿಟೀಷರನ್ನು ಭಾರತದಿಂದ ತೊಲಗುವಂತೆ ಮಾಡಿದರು. ಇಂತಹ ಸಮುದಾಯದ ಹಬ್ಬ ಹಿಂದೂ ಯುವ ಸೇನಾ ಆಶ್ರಯದಲ್ಲಿ ಕಳೆದ 32 ವರ್ಷಗಳಿಂದ ಬಹಳ ಶ್ರದ್ಧೆ, ಭಕ್ತಿಯಿಂದ ಅಚ್ಚುಕಟ್ಟಾಗಿ ನಡೆಯುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಈ ಸಾರ್ವಜನಿಕ ಗಣೇಶೋತ್ಸವವನ್ನು “ಮಂಗಳೂರು ಗಣೇಶೋತ್ಸವ” ಎನ್ನುವಂತೆ ಮಾಡಿದ ಎಲ್ಲ ನಮ್ಮ ಸಂಘಟನೆಯ ಯುವಕರು ಹಾಗೂ ಕಾರ್ಯಕರ್ತರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಇಡೀ ಮಂಗಳೂರಿಗೆ ಮಂಗಳೂರು ನಗರದ ಕೇಂದ್ರ ಭಾಗದಲ್ಲಿ ಒಟ್ಟು ಸೇರಿ ಸಂಭ್ರಮಿಸುತ್ತಿರುವುದು ಬಹಳ ಖುಷಿಯ ವಿಚಾರ ಎಂದು ಕ್ಯಾ. ಚೌಟ ಸಂತಸ ವ್ಯಕ್ತಪಡಿಸಿದ್ದಾರೆ.