(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ. 14. ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಎಲೆಕ್ಟ್ರೀಷಿಯನ್ ಓರ್ವರು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ, ಉರ್ಕುಂಜ ಎಂಬಲ್ಲಿ ನಡೆದಿದೆ.
ಮೃತಪಟ್ಟವರನ್ನು ಉಳಿ ಗ್ರಾಮದ ನೆಕ್ಕಿಲ ಪಲ್ಕೆ ನಿವಾಸಿ ಸದಾನಂದ ಗೌಡ ಅವರ ಪುತ್ರ ದೇವದಾಸ್ (35) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಇಲೆಕ್ಟ್ರೀಷಿಯನ್ ಆಗಿರುವ ದೇವದಾಸ್ ಉರ್ಕುಂಜ ಎಂಬಲ್ಲಿ ಮನೆಯೊಂದರ ವೈರಿಂಗ್ ಕೆಲಸ ಮಾಡಿ, ಮನೆಯ ಹೊರಗಡೆಯಲ್ಲಿದ್ದ ಮೈನ್ ಸ್ವಿಚ್ ಬಳಿ ಕೆಲಸ ಮಾಡುತ್ತಿರುವಾಗ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿದ ಪರಿಣಾಮ ಕೆಳಗೆ ಬಿದ್ದು ಗಾಯಗೊಂಡಿದ್ದರು ಎನ್ನಲಾಗಿದೆ. ತಕ್ಷಣ ಸ್ಥಳದಲ್ಲಿದ್ದವರು ಗಾಯಾಳುವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿದರಾದರೂ, ಅಲ್ಲಿ ಪರೀಕ್ಷಿಸಿದ ವೈದ್ಯರು ದೇವದಾಸ್ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.