ಕಡಬ ಪ್ರಾ.ಕೃ.ಪ.ಸ.ಸಂಘದಲ್ಲಿ ನವೋದಯ ಸದಸ್ಯರಿಗೆ ಸಮವಸ್ತ್ರ ಸೀರೆ ವಿತರಣೆ ► ಸೀರೆಯಿಂದ ಸಮಾನತೆ ಮಾತ್ರವಲ್ಲ, ಹೃದಯ ವೈಶಾಲ್ಯತೆಯು ಬೇಕು: ಶಾಸಕ ಅಂಗಾರ

(ನ್ಯೂಸ್ ಕಡಬ) newskadaba.com ಕಡಬ, ಮಾ.03. ಸ್ವಸಹಾಯ ಸಂಘಗಳು ಸ್ವಾವಲಂಬಿ ಬದುಕಿನೊಂದಿಗೆ ದೇಶದ ಅಭಿವೃದ್ದಿಗೆ ಪ್ರಮುಖ ಪಾತ್ರ ವಹಿಸುತ್ತಿವೆ. ಸಂಘಗಳ ಮಹಿಳಾ ಸದಸ್ಯರು ಕೇವಲ ಒಂದೇ ರೀತಿಯ ಸೀರೆ ಉಡುವುದರಿಂದ ಸಮಾನತೆ ಬರಲು ಸಾಧ್ಯವಿಲ್ಲ, ಹೃದಯ ವೈಶಾಲ್ಯತೆಯಿಂದ ಮೇಲು ಕೀಳು ಭಾವನೆ ತೊರೆದು ಸಮಾನತೆ ತೋರುವ ಕೆಲಸ ಕೂಡ ಆಗಬೇಕು ಎಂದು ಸುಳ್ಯ ಶಾಸಕ ಎಸ್.ಅಂಗಾರ ಹೇಳಿದರು.

ಅವರು ಕಡಬ ಪ್ರಾ.ಕೃ.ಸ.ಸಂಘದ ಸಭಾಂಗಣದಲ್ಲಿ ಸಂಘದ ಸಹಯೋಗದೊಂದಿಗೆ ಮಂಗಳೂರು ನವೋದಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನವೋದಯ ಸ್ವಸಹಾಯ ಸಂಘದ ಮಹಿಳಾ ಸದಸ್ಯರಿಗೆ ಸೀರೆ ವಿತರಣೆ ಮಾಡಿ ಮಾತನಾಡಿದರು. ನಮ್ಮಲ್ಲಿ ದೇಶ ಸದೃಢವಾಗಿದ್ದರೆ ಮಾತ್ರ ನಾವು ಉಳಿಯಲು ಸಾಧ್ಯ. ಎಲ್ಲಾ ವರ್ಗದ ಜನ ಅಭಿವೃದ್ದಿ ಹೊಂದಿ ಸಮಾನತೆಯಿಂದ ಬದುಕು ನಡೆಸಿದಾಗ ಸಂವಿಧಾನ ಶಿಲ್ಪಿ ಡಾ| ಬಿ.ಆರ್.ಅಂಬೇಡ್ಕರ್ ರವರ ಆಶಯಗಳಿಗೆ ಗೌರವ ಬರುತ್ತದೆ. ಹೀಗಾಗಬೇಕಾದರೆ ನಮ್ಮ ಗ್ರಾಮ ಸ್ವರಾಜ್ಯದ ಕನಸು ನನಸಾಗಬೇಕು. ಈ ಹಿನ್ನಲೆಯಲ್ಲಿ ಗ್ರಾಮೀಣ ಭಾಗದ ಮಹಿಳೆಯರನ್ನು ಹಾಗೂ ಬಡಜನರನ್ನು ಸ್ವಸಹಾಯ ಸಂಘಗಳ ಮೂಲಕ ಸ್ವಾವಲಂಬಿಗಳಾಗಿ ಮಾಡಿ ಆರ್ಥಿಕ ಸಮಾನತೆಯನ್ನು ಮಾಡುತ್ತಿರುವುದು ಮಹತ್ತರದ ಹೆಜ್ಜೆಯಾಗಿದೆ. ನಾವು ಸ್ವಸಹಾಯ ಸಂಘಗಳ ಮೂಲಕ ಬ್ಯಾಂಕಿನಿಂದ ಸಾಲ ಪಡೆದು ಅಭಿವೃದ್ದಿ ಹೊಂದುವುದರೊಂದಿಗೆ ಸಮರ್ಪಕವಾಗಿ ಸಾಲ ಮರುಪಾವತಿ ಮಾಡಿ ಬ್ಯಾಂಕ್‌ಗಳ ಉಳಿವಿಗೂ ಶ್ರಮಿಸಬೇಕೆಂದರು.

Also Read  ಶಿಕ್ಷಕ ಯಾಕೂಬ್ ಅವರಿಗೆ ರಾಷ್ಟ್ರಪ್ರಶಸ್ತಿ ಪ್ರದಾನ

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಡೆಯವರು ಪ್ರಾರಂಭಿಸಿದ ಗ್ರಾಮಾಭಿವೃದ್ದಿ ಯೋಜನೆಯು ಜಿಲ್ಲೆಯಾದ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸುವುದರಿಂದ ಪ್ರೇರಣೆಗೊಂಡಿದ್ದ ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ. ರಾಜೇಂದ್ರ ಕುಮಾರ್ ನವೋದಯ ಸ್ವಸಹಾಯ ಸಂಘಗಳನ್ನು ಪ್ರಾರಂಭಿಸಿ ಅಭೂತಪೂರ್ವ ಯಶಸ್ಸನ್ನು ಸಾಧಿಸಲು ಸಾಧ್ಯವಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶದ ಮಹಿಳೆಯರು ಆರ್ಥಿಕ ಸ್ವಾವಲಂಬನೆಯೊಂದಿಗೆ ಸಮಾಜದ ಮುಖ್ಯವಾಹಿನಿಗೆ ಬರುವುದಲ್ಲದೆ ಒಗ್ಗಟ್ಟಿನ ಸಹಬಾಳ್ವೆಯ ಜೀವನ ನಡೆಸುತ್ತಿದ್ದಾರೆ. ಇವರ ಒಗ್ಗಟ್ಟು ಇನ್ನಷ್ಟು ಸದೃಢವಾಗಬೇಕೆಂಬ ನೆಲೆಯಲ್ಲಿ ಸಮವಸ್ತ್ರದ ಸೀರೆಗಳನ್ನು ವಿತರಿಸುವಂತಹ ಕಾರ್ಯಗಳನ್ನು ಮೂರನೇ ಬಾರಿಗೆ ಮಾಡುತ್ತಿದ್ದೇವೆ. ಇದರಿಂದ ಮಹಿಳೆಯರ ಮತ್ತಷ್ಟು ಜೀವನೋತ್ಸಹವನ್ನು ತುಂಬಲಿದೆ ಎಂದರು. ಸರಕಾರದಿಂದ ನಿಬ್ಬಡ್ಡಿಯಲ್ಲಿ ಸಾಲ ದೊರೆಯುವ ವ್ಯವಸ್ಥೆ ಮುಂದಿನ ದಿನಗಳಲ್ಲಿ ಸ್ವಸಹಾಯ ಸಂಘಗಳ ಮೂಲಕ ನಡೆಯಲಿದೆ. ಆದರೆ ಈ ಅವಕಾಶವನ್ನು ನವೋದಯ ಸದಸ್ಯರು ಸದುಪಯೋಗ ಪಡಿಸಿಕೊಂಡು ತಾವು ಅಭಿವೃದ್ದಿ ಹೊಂದುವುದರೊಂದಿಗೆ ಸಮರ್ಪಕ ಸಾಲ ಮರುಪಾವತಿ ಮಾಡುವ ಮೂಲಕ ಬ್ಯಾಂಕ್ಗಳ ಅಭಿವೃದ್ದಿಗೂ ಭದ್ರ ಬುನಾದಿಯನ್ನು ಹಾಕಿ ಕೊಡಬೇಕು ಎಂದು ಹೇಳಿದರು.

Also Read  ಎಸ್.ಪಿ. ಬಾಲಸುಬ್ರಹ್ಮಣ್ಯಂ ಆರೋಗ್ಯದಲ್ಲಿ ಚೇತರಿಕೆ ➤ಎಸ್‌ಪಿಬಿ ಪುತ್ರ ಚರಣ್ ರಿಂದ ಸಂದೇಶ ರವಾನೆ

ವೇದಿಕೆಯಲ್ಲಿ ಹೊಸಮಠ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಕರುಣಾಕರ ಗೋಗಟೆ ಉಪಸ್ಥಿತರಿದ್ದರು. ಕಡಬ ಸಿ.ಎ ಬ್ಯಾಂಕ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಎಂ ಚಾಕೋ ಅತಿಥಿಗಳಿಗೆ ಹೂಗುಚ್ಚ ನೀಡಿ ಗೌರವಿಸಿದರು. ನಿರ್ದೇಶಕರಾದ ಸುದರ್ಶನ ಗೌಡ ಕೋಡಿಂಬಾಳ, ಪೂವಪ್ಪ ಗೌಡ ಐತ್ತೂರು, ರಘುಚಂದ್ರ ಮನೆಜಾಲು, ಅಂಗಜ ಗೋಳಿಯಡ್ಕ, ಲೀಲಾವತಿ ರೈ, ರಾಜೀವಿ, ವಲಯ ಮೇಲ್ವಿಚಾರಕ ವಸಂತ ಬಿ, ನವೋದಯ ಸ್ವಸಹಾಯ ಸಂಘದ ವಲಯ ಮೇಲ್ವಿಚಾರಕ ಚಂದ್ರಶೇಖರ ಉಪಸ್ಥಿತರಿದ್ದರು. ಕಡಬ ಪ್ರಾ.ಕೃ.ಸ.ಸಂಘದ ಅಧ್ಯಕ್ಷ ಸುಂದರ ಗೌಡ ಮಂಡೇಕರ ಸ್ವಾಗತಿಸಿ, ನವೋದಯ ಪ್ರೇರಕಿ ಪ್ರಿಯಾ ವಂದಿಸಿದರು. ಸಂಘದ ಉಪಾಧ್ಯಕ್ಷ ರಮೇಶ್ ಭಟ್ ಕಲ್ಪುರೆ ಕಾರ್ಯಕ್ರಮ ನಿರೂಪಿಸಿದರು. ಸಾಂಕೇತಿಕವಾಗಿ 5 ತಂಡಗಳಿಗೆ ಸೀರೆ ಸಮವಸ್ತ್ರವನ್ನು ವಿತರಿಸಿ ಬಳಿಕ ಒಟ್ಟು 308 ಸದಸ್ಯರಿಗೆ ವಿತರಣೆ ಮಾಡಲಾಯಿತು.

error: Content is protected !!
Scroll to Top