(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 12. ಇನ್ನುಮುಂದೆ ಶಾಲೆಗಳಲ್ಲಿ ಪಾಠ ಮಾಡದೇ ಇತರೆ ಕೆಲಸ ಮಾಡುತ್ತಾ ತಿರುಗಾಡುವ ಶಿಕ್ಷಕರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಕರಾದವರು ಶಾಲೆಯಲ್ಲೇ ಇದ್ದು ಮಕ್ಕಳಿಗೆ ಶಿಕ್ಷಣ ನೀಡಲಿ. ಅದು ಬಿಟ್ಟು ರಾಜಕೀಯ, ಸಂಘಟನೆ, ವ್ಯವಹಾರ ಮಾಡುತ್ತ ತಿರುಗಾಡುತ್ತಿದ್ದಾರೆ ಎಂಬ ದೂರುಗಳಿವೆ. ಶಿಕ್ಷಣಾಧಿಕಾರಿಗಳ ನಿಯಂತ್ರಣದಲ್ಲೂ ಇಲ್ಲದಂತೆ ವರ್ತಿಸುತ್ತಿರುವುದು ಗಮನಕ್ಕೆ ಬಂದಿದೆ. ಅಂತಹ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಶಿಕ್ಷಕರು ಇಲ್ಲವೇ ಸರಕಾರಿ ನೌಕರರಿಗೆ ಪ್ರತಿಭಟನೆ ಮಾಡುವ ಹಕ್ಕು ಇದೆ ಎಂದ ಮಾತ್ರಕ್ಕೆ ಅದನ್ನೇ ಮುಖ್ಯ ಕಾಯಕ ಮಾಡಿಕೊಂಡರೆ ಹೇಗೆ ಎಂದು ಪ್ರಶ್ನಿಸಿದರು.