“ಮಂಕಿ ಪಾಕ್ಸ್ (ಎಂಪಾಕ್ಸ್)”- ಡಾ. ಮುರಲೀ ಮೋಹನ ಚೂಂತಾರು

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 12. ಮಂಕಿ ಪಾಕ್ಸ್ ಎನ್ನುವುದು ವೈರಾಣುವಿನಿಂದ ಹರಡುವ ಸಾಂಕ್ರಾಮಿಕ ರೋಗವಾಗಿದ್ದು,  ಆರ್ಥೋಪಾಕ್ಸ್ ಗುಂಪಿಗೆ ಸೇರಿದ ವೈರಾಣು ಆಗಿರುತ್ತದೆ. 1958ರಲ್ಲಿ ಡೆನ್ಮಾರ್ಕ್ ದೇಶದಲ್ಲಿ  ಸಂಶೋಧನೆಗಾಗಿ ಇರಿಸಲಾದ ಮಂಗಗಳಲ್ಲಿ  ಈ ವೈರಾಣು ಮೊದಲ ಬಾರಿ ಪತ್ತೆಯಾಯಿತು. ಆದಾದ ಬಳಿಕ 1970ರಲ್ಲಿ ಡೆಮಾಕ್ರಟಿಕ್  ರಿಪಬ್ಲಿಕ್ ಆಫ್ ಕಾಂಗೋದಲ್ಲಿ  ಮೊದಲ ಬಾರಿಗೆ ಮನುಷ್ಯರಲ್ಲಿ ಈ ವೈರಾಣು  ಪತ್ತೆಯಾಯಿತು. ಮಂಗಗಳಲ್ಲಿ ಮೊದಲ ಬಾರಿಗೆ  ಕಂಡು ಬಂದ ಕಾರಣ ಮಂಕಿಪಾಕ್ಸ್ ಎಂದು ಈ ವೈರಾಣುವಿಗೆ ನಾಮಕರಣ  ಮಾಡಲಾಯಿತು. ಮನುಷ್ಯ ಅಲ್ಲದೇ ಇಲಿ ಹೆಗ್ಗಣ ಮಂಗಗಳನ್ನು ಈ ವೈರಾಣು ಬಾಧಿಸುತ್ತದೆ. ಈಗ ಇದೇ ವೈರಾಣುವನ್ನು  ಎಂಪಾಕ್ಸ್  ಎಂದೂ ಕರೆಯಲಾಗುತ್ತಿದೆ.

 

ವಿಶ್ವಸಂಸ್ಥೆ ವರದಿ ಪ್ರಕಾರ, 2022ರಿಂದ 2023ರ  ವರೆಗೆ  ಜಗತ್ತಿನ ಸುಮಾರು 115  ರಾಷ್ಟ್ರಗಳಲ್ಲಿ ಹತ್ತಿರ 1 ಲಕ್ಷ ಮಂದಿ  ಈ ರೋಗಕ್ಕೆ ತುತ್ತಾಗಿದ್ದು,  ಈ ವೈರಾಣು  ಸೋಂಕಿನಿಂದ  ಸುಮಾರು 220ಕ್ಕೂ  ಹೆಚ್ಚು  ಮಂದಿ ಸಾವನ್ನಪ್ಪಿದ್ದಾರೆ. 2024 ರಲ್ಲಿ ಈವರೆಗೆ ವಿಶ್ವದಾದ್ಯಂತ 17500 ಮಂದಿ ಈ ರೋಗಕ್ಕೆ  ತುತ್ತಾಗಿದ್ದು, ಇದರಲ್ಲಿ 95 ಶೇಕಡಾ  ಪ್ರಕರಣ  ಮದ್ಯ ಆಫ್ರಿಕಾ ದೇಶದಲ್ಲಿ  ವರದಿಯಾಗಿದೆ ಮತ್ತು 500ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಒಟ್ಟಿನಲ್ಲಿ ಮಾರಣಾಂತಿಕವಲ್ಲದ ಈ ರೋಗ ಜಾಗತಿಕವಾಗಿ  ಹರಡುತ್ತಿರುವ ಕಾರಣದಿಂದ  ಸೋಂಕಿನ ಗಂಭೀರತೆಯನ್ನು ಪರಿಗಣಿಸಿ ವಿಶ್ವಸಂಸ್ಥೆ ಮಂಕಿಪಾಕ್ಸ್ ರೋಗವನ್ನು  ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು  ಘೋಷಿಸಿದೆ. ಸಾಮಾನ್ಯವಾಗಿ  ಪುರುಷರಲ್ಲಿ ಅದರಲ್ಲೂ 14 ರಿಂದ 40 ವಯಸ್ಸಿನ  ಯುವಕರಲ್ಲಿ ಈ ರೋಗಗಳು ಹೆಚ್ಚು ಕಂಡುಬರುತ್ತದೆ. ಸೋಂಕಿತ ರೋಗಿಗಳ ನಿಕಟ ಸಂಪರ್ಕದಿಂದ, ಅಂದರೆ ಮುಖ, ಬಾಯಿ, ನಿಕಟ ಉಸಿರಾಟ ಹಾಗೂ ಲೈಂಗಿಕ  ಸಂಪರ್ಕದಿಂದ  ಮನುಷ್ಯರಿಂದ ಮನುಷ್ಯರಿಗೆ  ಹರಡುತ್ತದೆ.  ಅದೇ ರೀತಿ  ಸೋಂಕಿತ  ಪ್ರಾಣಿಗಳ ನಿಕಟ ಸಂಪರ್ಕದಲ್ಲಿರುವವರಿಗೆ ಈ ರೋಗ ತಗಲುವ ಸಾಧ್ಯತೆ ಇರುತ್ತದೆ.

Also Read  ಕಾರಿನೊಳಗೆ ಆಟವಾಡುತ್ತಿದ್ದ ನಾಲ್ವರು ಮಕ್ಕಳು ಉಸಿರುಗಟ್ಟಿ ಮೃತ್ಯು..!

ರೋಗದ ಲಕ್ಷಣಗಳು

1) ಸಾಮಾನ್ಯ ವೈರಾಣು ಜ್ವರದಲ್ಲಿ ಇರುವ ಎಲ್ಲಾ ಲಕ್ಷಣಗಳಾದ ಜ್ವರ, ತಲೆನೋವು, ಮೈ-ಕೈ ನೋವು ಸ್ನಾಯುಸೆಳೆತ, ಬೆನ್ನುನೋವು, ಚಳಿ, ನಡುಕ ಇರುತ್ತದೆ.

2) ಸುಸ್ತು, ಆಯಾಸ, ಬಳಲಿಕೆ ನಿಶ್ಯಕ್ತಿ ವಿಪರೀತ ಕಾಡುತ್ತದೆ.

3) ಈ ಎಂಪಾಕ್ಸ್ ಸೋಂಕು ತಗಲಿದವರಿಗೆ ಮೈಮೇಲೆ  ಚರ್ಮದಲ್ಲಿ ಗುಳ್ಳೆಗಳು  ಏಳುತ್ತದೆ. ಮುಖ್ಯವಾಗಿ ಕೈಗಳು, ಕಾಲು ಎದೆ, ಬೆನ್ನು, ಮುಖ ಮತ್ತು  ಜನನಾಂಗಗಳಲ್ಲಿ ಹೆಚ್ಚು ಕಂಡು ಬರುತ್ತದೆ. ವ್ಯಕ್ತಿಗೆ ವೈರಾಣು ಸೋಂಕು  ತಗುಲಿ  7 ರಿಂದ 21 ದಿನಗಳ ಒಳಗೆ ಈ ಲಕ್ಷಣಗಳು ಕಾಣಿಸುತ್ತದೆ.

4) ಮೈಮೇಲೆ ಚರ್ಮದಲ್ಲಿ ಬಿದ್ದ ಗುಳ್ಳೆಗಳು ಒಡೆದು  ಚರ್ಮ ಒಣಗಿ ಬೀಳಲಾರಂಭಿಸುತ್ತದೆ. ಈ ಒಡೆದ  ಗುಳ್ಳೆಗಳಿಗೆ ಸೋಂಕು ತಗಲಿದಲ್ಲಿ  ದುಗ್ದ ರಸಗ್ರಂಥಿಗಳು ಆ ಜಾಗದಲ್ಲಿ  ದೊಡ್ಡದಾಗಿ ಊದಿಕೊಂಡು ನೋವು ಇರುತ್ತದೆ.

Also Read  ಸಾಲದ ವಿಷವರ್ತುಲದಿಂದ ಪಾರಾಗಿ ಮತ್ತು ದಿನಭವಿಷ್ಯ ನೋಡಿ

ಲಸಿಕೆ: ಚಿಕನ್ ಪಾಕ್ಸ್   ಮತ್ತು ಸ್ಮಾಲ್ ಪಾಕ್ಸ್  ಸೋಂಕಿಗೆ ಬಳಸುವ ಲಸಿಕೆಯನ್ನು  ಈ ರೋಗಕ್ಕೂ ಬಳಸಲಾಗುತ್ತದೆ. ಅದೇ  ರೀತಿ  ಎಂಪಾಕ್ಸ್ ರೋಗಕ್ಕೂ ಲಸಿಕೆಗಳು ವಿದೇಶಗಳಲ್ಲಿ ಲಭ್ಯವಿದ್ದು ರೋಗವನ್ನು ತಡೆ ಗಟ್ಟಲು ಸಾಧ್ಯವಿದೆ.

ಚಿಕಿತ್ಸೆ: ಈ ವೈರಾಣು  ಸೋಂಕಿಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇರುವುದಿಲ್ಲ. ರೋಗದ ಲಕ್ಷಣಗಳಿಗೆ  ಸರಿಯಾಗಿ ನೋವು ನಿವಾರಣಾ. ಆಯಾಸ  ನಿವಾರಕ  ಔಷಧಿಗಳನ್ನು ನೀಡಲಾಗುತ್ತದೆ. ರೋಗಿಗಳನ್ನು ಏಕಾಂತದಲ್ಲಿ  ಇರಿಸಿ ಜ್ವರ ನಿಯಂತ್ರಿಸಿ, ರೋಗ ಹರಡದಂತೆ  ನೋಡಿಕೊಳ್ಳಲಾಗುತ್ತದೆ.  ಸಂಪೂರ್ಣ ವಿಶ್ರಾಂತಿ ಹಾಗೂ ಸಾಕಷ್ಟು  ದ್ರವಾಹಾರ ನೀಡಿ  ರೋಗಿ  ಬಳಲದಂತೆ  ಎಚ್ಚರ ವಹಿಸಲಾಗುತ್ತದೆ. ರೋಗಿಗಳಿಗೆ ಬ್ಯಾಕ್ಟಿರಿಯಾ  ಸೋಂಕು ತಗಲದಂತೆ  ಎಚ್ಚರಿಕೆ  ವಹಿಸಲಾಗುತ್ತಿದೆ. ಹೆಚ್ಚಿನ ಸೋಂಕು ಮತ್ತು ಆಯಾಸ ಇದ್ದಲ್ಲಿ  ಆಂಟಿವೈರಲ್ ಔಷಧಿ (ಟಿಕೋವಿರಿಮ್ಯಾಟ್) ಕೂಡಾ ನೀಡಲಾಗುತ್ತದೆ.

ಡಾ|| ಮುರಲೀ ಮೋಹನ್‍ಚೂಂತಾರು

BDS, MDS,DNB,MOSRCSEd(U.K), FPFA, M.B.A

ಮೊ : 9845135787

drmuraleechoontharu@gmail.com

 

error: Content is protected !!
Scroll to Top