(ನ್ಯೂಸ್ ಕಡಬ) newskadaba.com ರಾಂಚಿ, ಸೆ. 12. ಜಾರ್ಖಂಡ್ ನ ಅಬಕಾರಿ ಪೊಲೀಸ್ ಪರೀಕ್ಷೆಯ ಎರಡನೇ ದಿನವಾದ ಬುಧವಾರ ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಹಾಜರಾಗಿದ್ದ 16 ಮಂದಿ ಅಭ್ಯರ್ಥಿಗಳು ಒಂದು ಗಂಟೆಯಲ್ಲಿ 10 ಕಿಲೋಮೀಟರ್ ದೂರವನ್ನು ಕ್ರಮಿಸಬೇಕಾದ ಪರೀಕ್ಷೆಯ ವೇಳೆ ಅಸ್ವಸ್ಥಗೊಂಡಿದ್ದಾರೆ. ರಾಜ್ಯದ ಆರು ಕಡೆಗಳಲ್ಲಿ ಈ ಪರೀಕ್ಷೆ ನಡೆದಿದ್ದು, ಐದು ಕೇಂದ್ರಗಳಲ್ಲಿ ಅಭ್ಯರ್ಥಿಗಳು ಅಸ್ವಸ್ಥರಾಗಿರುವ ಬಗ್ಗೆ ವರದಿಯಾಗಿದೆ.
ವಾಂತಿ ಮತ್ತು ಬಳಲಿಕೆಗಾಗಿ ಪರೀಕ್ಷಾ ಕೇಂದ್ರಗಳ ವೈದ್ಯಕೀಯ ಶಿಬಿರಗಳಲ್ಲಿ ಮತ್ತು ಸ್ಥಳೀಯ ಆಸ್ಪತ್ರೆಗಳಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿದೆ. ರಾಂಚಿಯ ಜಾಗ್ವಾರ್ ನಲ್ಲಿ ಆರು ಮಂದಿ ಆಕಾಂಕ್ಷಿಗಳು ಸುಸ್ತಾಗಿ ಟ್ರ್ಯಾಕ್ ನಲ್ಲಿ ಬಿದ್ದರು. ಈ ಪೈಕಿ ಐದು ಮಂದಿ ವೈದ್ಯಕೀಯ ಶಿಬಿರದಲ್ಲಿ ಆಮ್ಲಜನಕ ನೀಡಿದ ಬಳಿಕ ಗುಣಮುಖರಾದರು. ಬಿಹಾರದ ಭಗಲ್ಪುರದಿಂದ ಬಂದಿದ್ದ ಸೂರಜ್ ಕುಮಾರ್ ಎಂಬಾತನನ್ನು ರಾಂಚಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾಹೀಬ್ ಗಂಜ್ ನಲ್ಲಿ ಇಬ್ಬರು ಅಸ್ವಸ್ಥಗೊಂಡಿದ್ದು, ರಾಂಚಿ ಸ್ಮಾರ್ಟ್ ಸಿಟಿ ಹಾಗೂ ಗಿರಿಧ್ ಕೇಂದ್ರಗಳಲ್ಲಿ ತಲಾ ಒಬ್ಬರು ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಪೊಲೀಸರು ಇದನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ.