ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಜಿ.ಪಂ. ಸಿಇಓ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 12. ಜಿಲ್ಲೆಯಾದ್ಯಂತ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಲೆ, ಅಂಗನವಾಡಿ ಕೇಂದ್ರ, ಸರ್ಕಾರಿ ಕಟ್ಟಡ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸ್ವಸಹಾಯ ಸಂಘದವರು ಹಾಗೂ ಗ್ರಾಮ ಪಂಚಾಯತ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಸೆ.14 ರಿಂದ ಅ. 02ರ ವರೆಗೆ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ್ ಕೆ. ಸೂಚಿಸಿದರು. ಅವರು “ಸ್ವಚ್ಛತಾ ಹಿ ಸೇವಾ” ಆಂದೋಲನವನ್ನು ಆಯೋಜಿಸುವ ಕುರಿತು ನಡೆದ ಆನ್‍ಲೈನ್ ಸಭೆಯಲ್ಲಿ ಮಾತನಾಡಿದರು. ಕೇಂದ್ರ ಕುಡಿಯವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಶಕ್ತಿ ಮಂತ್ರಾಲಯ ಹಾಗೂ ಕೇಂದ್ರ ವಸತಿ ವ್ಯವಹಾರಗಳ ಸಚಿವಾಲಯ ಪ್ರತಿ ಗ್ರಾಮಗಳಲ್ಲಿ ಸಂಪೂರ್ಣ ನೈರ್ಮಲ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಪ್ರತಿವರ್ಷ “ಸ್ವಚ್ಛತಾ ಹಿ ಸೇವಾ” ಆಂದೋಲನವನ್ನು ಸೆ.14 ರಿಂದ ಅ 0.2ರ ವರೆಗೆ ಆಯೋಜಿಸಲಾಗುತ್ತಿದೆ ಎಂದರು.

ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿರುವ ಶಿಕ್ಷಣ ಸಂಸ್ಥೆ ಹಾಗೂ ಎನ್‍ಜಿಓ ಅವರೊಂದಿಗೆ ಸೇರಿಕೊಂಡು ಒಂದು ತಂಡ ರಚಿಸಿ ಶ್ರಮದಾನ ಚಟುವಟಿಕೆಗಳನ್ನು ನಿಯಮಿತವಾಗಿ ಪ್ರಾರಂಭಿಸಬೇಕು. ಶ್ರಮದಾನ ವಾರದಲ್ಲಿ ಒಂದು ದಿನ ತಪ್ಪದೇ ಮಾಡುವಂತೆ ನೋಡಿಕೊಳ್ಳಬೇಕು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಕಸ ಕಂಡು ಬರಬಾರದು. ಸ್ಥಳೀಯವಾಗಿ ಶ್ರಮದಾನ ಚಟುವಟಿಕೆ ಮಾಡಬೇಕು ಎಂದು ಎಲ್ಲಾ ತಾಲೂಕು ಪಂಚಾಯಿತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಿಇಓ ಸೂಚಿಸಿದರು.

 

ಆಶಾ ಕಾರ್ಯಕರ್ತೆಯರು ನೈರ್ಮಲ್ಯ ಅಭಿಯಾನಗಳಲ್ಲಿ ತರಬೇತಿ ಮತ್ತು ಸಾಮರ್ಥ್ಯ ವರ್ಧನೆ ಮತ್ತು ಮಾಹಿತಿ, ಶಿಕ್ಷಣ ಚಟುವಟಿಕೆಗಳ ಅಭಿಯಾನಗಳಲ್ಲಿ ಸಕ್ರಿಯವಾಗಿ ತೊಡಗುವಂತೆ ಮಾಡಬೇಕು. ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಕೇಂದ್ರಗಳ ಸುತ್ತಮುತ್ತ ಶ್ರಮದಾನ ಆಯೋಜಿಸುವುದು. ಸ್ವಚ್ಛತೆ ಮತ್ತು ಶುದ್ಧ ಕುಡಿಯುವ ನೀರಿನಿಂದ ಆರೋಗ್ಯದ ಕುರಿತು ಅರಿವು ಮೂಡಿಸುವ ಪೋಸ್ಟರ್, ಕಿರು ಚಿತ್ರಗಳನ್ನು ಪ್ರದರ್ಶಿಸಬೇಕು ಎಂದು ಡಾ. ಕೆ. ಆನಂದ್ ಹೇಳಿದರು. ಎ.ಪಿ.ಎಂ.ಸಿ ಯಾರ್ಡ್‍ಗಳು, ಮಂಡಿಗಳು, ಮಾರುಕಟ್ಟೆಗಳಲ್ಲಿ ತ್ಯಾಜ್ಯದಿಂದ ಸಂಪತ್ತು ಮಾಡುವ ಕುರಿತು ಸ್ವಚ್ಛತಾ ಅಭಿಯಾನಗಳನ್ನು ಹಮ್ಮಿಕೊಳ್ಳಬೇಕು. ಸ್ವಚ್ಛತಾ ಅಭಿಯಾನಗಳಲ್ಲಿ ಶಾಲಾ ಮಕ್ಕಳು ಭಾಗವಹಿಸಲು ಜಾಥಾ, ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಬೇಕು. ಶಾಲಾ ಮತ್ತು ಕಾಲೇಜು ಆವರಣಗಳಲ್ಲಿ ಸ್ವಚ್ಛತೆ ಕಾಪಾಡಲು ಶ್ರಮದಾನ ನಡೆಸಬೇಕು. ಶೌಚಾಲಯಗಳ ಸ್ವಚ್ಛತೆ ಹಾಗೂ ನಿರಂತರ ಪ್ರಾಥಮಿಕ ಮತ್ತು ಪ್ರೌಢಶಾಲಾ ಮತ್ತು ಕಾಲೇಜು ಸುತ್ತಮುತ್ತ ಸಸಿ ನೆಡುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.

 

ಸಮುದ್ರ ತೀರ, ನದಿ ತೀರ, ಕುಡಿಯುವ ನೀರಿನ ಮೂಲ, ಪ್ರವಾಸಿ ತಾಣಗಳು ಹಾಗೂ ಆಧ್ಯಾತ್ಮಿಕ ಸ್ಥಳಗಳಲ್ಲಿ ಸ್ವಚ್ಛತಾ ಶ್ರಮದಾನ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಕುಡಿಯುವ ನೀರಿಗೆ ಸಂಬಂಧಪಟ್ಟಂತೆ ನೀರಿನ ಸಂಗ್ರಹ ಟ್ಯಾಂಕ್ ಗಳಲ್ಲಿ ಸ್ವಚ್ಛತೆ ಮಾಡುವುದರೊಂದಿಗೆ ಕಡತ ನಿರ್ವಹಣೆ ಮಾಡಿ ಸ್ವಚ್ಛ ಮಾಡಿರುವ ದಿನಾಂಕವನ್ನು ತಪ್ಪದೇ ಕಡತದಲ್ಲಿ ನಮೂದಿಸಬೇಕು. ಬೋರ್‍ವೆಲ್ ಗಳ ಸುತ್ತಮುತ್ತ ಗಿಡಗಳ ಪೊದೆ ಹಾಗೂ ಗಲೀಜು ನೀರು ಸಂಗ್ರಹವಾಗದಂತೆ ನಿಗಾವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಓ ಹೇಳಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group