ಮುಂಬೈ ವಾಲ್ಕೇಶ್ವರ ಶ್ರೀಕಾಶಿ ಮಠಕ್ಕೆ ಭೇಟಿ – ಜಿಎಸ್ಬಿ ಸೇವಾ ಮಂಡಲ ಶ್ರೀ ಗಣೇಶನ ದರ್ಶನ ಪಡೆದ ಸಂಸದ ಕ್ಯಾ.ಚೌಟ

(ನ್ಯೂಸ್ ಕಡಬ) newskadaba.com ಮುಂಬೈ, ಸೆ. 12. ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮಂಗಳವಾರದಂದು ಸಂಜೆ ಮುಂಬೈನಲ್ಲಿರುವ ವಾಲ್ಕೇಶ್ವರ ಶ್ರೀ ಕಾಶಿ ಮಠಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ..

ವಾರಣಾಸಿಯ ಶ್ರೀ ಕಾಶಿಮಠ ಸಂಸ್ಥಾನದ ಶಾಖಾ ಮಠವಾಗಿರುವ ವಾಲ್ಕೇಶ್ವರ ಶ್ರೀ ಕಾಶಿ ಮಠವು ಅಗಾಧ ಅಧ್ಯಾತ್ಮದ ಶಕ್ತಿ ಕೇಂದ್ರವಾಗಿದೆ. ಜಿಎಸ್ಬಿ ಸಮುದಾಯದವರ ಪ್ರಮುಖ ಧಾರ್ಮಿಕ ಶಕ್ತಿಯ ಪವಿತ್ರ ನೆಲವಿದು. ಸುಮಾರು 5000 ವರ್ಷಗಳ ಹಿಂದಿನ ವೇದವ್ಯಾಸರ ವಂಶಕ್ಕೆ ಸೇರಿದ ಶ್ರೀ ಕಾಶಿಮಠ ಸಂಸ್ಥಾನದ 7ನೇ ಮಠಾಧೀಶರಾದ ಶ್ರೀಮದ್ ಮಾಧವೇಂದ್ರ ತೀರ್ಥ ಸ್ವಾಮೀಜಿಯವರು ಸಮಾಧಿಯಾಗಿರುವ ಅತ್ಯಂತ ಪವಿತ್ರ ಸ್ಥಳವಾಗಿದೆ. ಧನಾತ್ಮಕ ಶಕ್ತಿ ನೆಲೆಬೀಡಾಗಿರುವ ಶ್ರೀಮದ್ ಮಾಧವೇಂದ್ರ ತೀರ್ಥ ಸ್ವಾಮೀಜಿಯವರ ಬೃಂದಾವನದಲ್ಲಿ ಕ್ಯಾ.ಚೌಟ ಅವರು ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ. ಈ ವೇಳೆ ಚೌಟ ಅವರು ಬೃಂದಾವನದಲ್ಲಿ ಸಿದ್ಧಿಯ ಯೋಗಿ ಹಾಗೂ ಮಹಾನ್ ತಪಸ್ವಿಗಳಾದ ಶ್ರೀಮದ್ ಮಾಧವೇಂದ್ರ ತೀರ್ಥಶ್ರೀಗಳ ದೈವೀ ಪವಾಡಗಳು ಹಾಗೂ ತೀರ್ಥ ಕ್ಷೇತ್ರದ ಮಹಿಮೆ ಬಗ್ಗೆ ತಿಳಿದುಕೊಂಡರು. ಕಾಶಿ ಮಠದ ಸಂಸ್ಥಾನದ 18ನೇ ಮಠಾಧೀಶರಾದ ಶ್ರೀಮದ್ ವರದೇನರ ತೀರ್ಥ ಸ್ವಾಮೀಜಿಯವರ ಬೃಂದಾವನವೂ ಇಲ್ಲಿದೆ..ಜಿಎಸ್ಬಿ ಸಮುದಾಯದವರ ಅತ್ಯಂತ ದೈವೀ ಶಕ್ತಿಯ ಪವಿತ್ರ ಸ್ಥಳವಾದ ಶ್ರೀಮದ್ ಮಾಧವೇಂದ್ರ ತೀರ್ಥ ಶ್ರೀಗಳ ಬೃಂದಾವನಕ್ಕೆ ಭೇಟಿ ಮಾಡಿ ಪ್ರಾರ್ಥನೆ ಸಲ್ಲಿಸಿರುವುದು ಭಕ್ತಿ-ಭಾವದ ಜತೆಗೆ ವಿಶೇಷ ಅನುಭವ ನೀಡಿದೆ ಎಂದು ಕ್ಯಾ. ಚೌಟ ಈ ಸಂದರ್ಭದಲ್ಲಿ ಹೇಳಿದ್ದಾರೆ. ಚಾತುರ್ಮಾಸ ವ್ರತದ ಪ್ರಯುಕ್ತ ಕಾಶಿ ಮಠದ ಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರು ಕೂಡ ಇಲ್ಲಿಗೆ ಆಗಮಿಸಿದ್ದಾರೆ. ಈ ವೇಳೆ ಸ್ವಾಮೀಜಿ ಅವರನ್ನೂ ಭೇಟಿ ಮಾಡಿರುವ ಕ್ಯಾ. ಚೌಟ ಅವರು ಶ್ರೀಗಳ ಆಶೀರ್ವಾದ ಪಡೆದುಕೊಂಡಿದ್ದಾರೆ.. ಇದಾದ ಬಳಿಕ ದೇಶದಲ್ಲೇ ಪ್ರಖ್ಯಾತ ಗಣೇಶೋತ್ಸವಗಳಲ್ಲಿ ಒಂದಾದ ಮುಂಬೈ ಮಹಾನಗರದ ಕಿಂಗ್ಸ್ ಸರ್ಕಲ್ ಸಮೀಪದಲ್ಲಿ ಪೂಜಿಸಲ್ಪಡುವ ಜಿ.ಎಸ್.ಬಿ ಸೇವಾ ಮಂಡಲದ ಗಣಪತಿಯ ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದ್ದಾರೆ. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಹಾಗೂ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ ಅವರು ಕೂಡ ಜತೆಗಿದ್ದರು.

Also Read  ಜಿಲ್ಲಾ ವಿಕಲಚೇತನರ ಹಾಗೂ ಹಿರಿಯನಾಗರಿಕರ ಸಬಲೀಕರಣ ಇಲಾಖೆಯಿಂದ ➤ ವೃದ್ಧಾಶ್ರಮ ಪ್ರಾರಂಭಿಸಲು ಅರ್ಜಿ ಆಹ್ವಾನ

error: Content is protected !!
Scroll to Top