ಬಲ್ಯ: ಸ್ಥಳೀಯಾಡಳಿತದ ಅನುಮತಿ ಪಡೆಯದೇ ಮಲಯಾಳಂ ಚಿತ್ರದ ಚಿತ್ರೀಕರಣ ► ಚಿತ್ರ ತಂಡದ ವಿರುದ್ಧ ಕಾನೂನು ಹೋರಾಟಕ್ಕೆ ಸದಸ್ಯರ ಆಗ್ರಹ

(ನ್ಯೂಸ್ ಕಡಬ) newskadaba.com ಕಡಬ, ಮಾ.02. ತಾಲೂಕಿನ ಬಲ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಂಚಾಯತಿನ ಅನುಮತಿ ಪಡೆಯದೆ ಮಲಯಾಳಂ ಚಲನಚಿತ್ರದ ಚಿತ್ರೀಕರಣದ ವಿಚಾರಕ್ಕೆ ಸಂಬಂಧಿಸಿ ಚಿತ್ರ ತಂಡಕ್ಕೆ ನೋಟಿಸ್ ನೀಡಿದರೂ ಪ್ರತಿಕ್ರಿಯಿಸದಿರುವುದು ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ಗೆ ಆದ ಅವಮಾನವಾಗಿದ್ದು, ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮ ಪಂಚಾಯತ್ ಸದಸ್ಯರು ಆಗ್ರಹಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್, ಜಿಲ್ಲಾ ಪಂಚಾಯತ್ ನಲ್ಲಿ ಗ್ರಾಮ ಪಂಚಾಯತ್ ಪ್ರಕರಣಗಳಿಗೆಂದು ನೇಮಿಸಿರುವ ಕಾನೂನು ಸಲಹೆಗಾರರನ್ನು ಈಗಾಗಲೇ ಸಂಪರ್ಕಿಸಲಾಗಿದ್ದು, ಮುಂದಿನ ಕಾನೂನು ಹೋರಾಟಕ್ಕೆ ಮಾರ್ಗದರ್ಶನ ನೀಡಲಿದ್ದಾರೆ ಎಂದರು. ಇತ್ತೀಚೆಗೆ ಕಡಬ ತಾಲೂಕಿನ ಬಲ್ಯ ಗ್ರಾಮದ ಕಾಡಿನಲ್ಲಿ ನಿವಿನ್ ಪೌಲಿ ಅಭಿನಯದ ‘ಕಾಯಂಕುಳಂ ಕೊಚ್ಚುನ್ನಿ’ ಮಲಯಾಳಂ ಚಿತ್ರೀಕರಣವನ್ನು ಪಂಚಾಯತ್ ನಿಂದ ಅನುಮತಿ ಪಡೆಯದೆ ನಡೆಸಲಾಗಿತ್ತು. ಅಲ್ಲದೆ ಚಿತ್ರೀಕರಣ ತಂಡದವರು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಅಲ್ಲಲ್ಲಿ ಬಿಸಾಡಿ ಶುಚಿತ್ವವನ್ನು ಕಾಪಾಡದೆ ಸರಕಾರಿ ಆಸ್ತಿಪಾಸ್ತಿಗಳಿಗೆ ಹಾನಿಯನ್ನುಂಟು ಮಾಡಿದ್ದಾರೆ ಎಂದು ಆರೋಪಿಸಿ ಸಂಬಂಧಪಟ್ಟ ಇಲಾಖೆಗಳಿಗೆ ಪಂಚಾಯತ್ ನಿಂದ ದೂರನ್ನು ನೀಡಲಾಗಿತ್ತು. ಇದೀಗ ಸಾಮಾನ್ಯ ಸಭೆಯಲ್ಲೂ ಇದೇ ವಿಚಾರ ಪ್ರಸ್ತಾಪವಾಗಿದ್ದು, ಸರ್ವ ಸದಸ್ಯರು ಕಾನೂನು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

Also Read  ಮಂಗಳೂರು : 7 ದಿನದ ಕಂದಮ್ಮನಿಗೂ ಕೊರೋನಾ ಪಾಸಿಟಿವ್

error: Content is protected !!
Scroll to Top