ಬಣ್ಣದ ಮಾಂತ್ರಿಕ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ’ವನಜ ರಂಗಮನೆ ಪ್ರಶಸ್ತಿ- 2024’ಗೆ ಆಯ್ಕೆ

(ನ್ಯೂಸ್ ಕಡಬ) newskadaba.com ಸುಳ್ಯ, ಸೆ. 11.  ಸುಳ್ಯದ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದಿಂದ ಪ್ರತಿವರ್ಷ ಕೊಡಮಾಡುವ ರಂಗಕರ್ಮಿ ಡಾ.ಜೀವನ್ ರಾಂ ಸುಳ್ಯರ ಮಾತೃಶ್ರೀ ದಿ| ವನಜಾಕ್ಷಿ ಜಯರಾಮ ಸ್ಮರಣಾರ್ಥ ನೀಡುವ 2024 ನೇ ಸಾಲಿನ ವನಜ ರಂಗಮನೆ ಪ್ರಶಸ್ತಿಗೆ ತೆಂಕುತಿಟ್ಟು ಯಕ್ಷಗಾನದ ಪ್ರಸಿದ್ಧ ಬಣ್ಣದ ವೇಷದಾರಿ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ರವರನ್ನು ಆಯ್ಕೆ ಮಾಡಲಾಗಿದೆ.

ರಾವಣ, ಕುಂಭಕರ್ಣ, ಮಹಿರಾವಣ, ಮಹಿಷಾಸುರ, ಕಾಕಾಸುರ, ವರಾಹ, ಸಿಂಹ, ಗಜೇಂದ್ರ ಮುಂತಾದ ಬಣ್ಣದ ವೇಷಗಳು ಅಲ್ಲದೆ ಅಜಮುಖಿ, ಶೂರ್ಪನಖಿ, ಪೂತನಿ, ವೃತ್ರ ಜ್ವಾಲೆ ಮುಂತಾದ ಹೆಣ್ಣು ಬಣ್ಣಗಳಿಗೆ ತನ್ನದೇ ಶೈಲಿಯಲ್ಲಿ ಜೀವ ಭಾವ ತುಂಬಿ ವಿಜೃಂಭಿಸಿ, ಬಣ್ಣದ ಮಾಂತ್ರಿಕರೆಂದೇ ಪ್ರಸಿದ್ಧಿ ಪಡೆದವರು. ನೂರಾರು ಪ್ರಶಸ್ತಿ ಸನ್ಮಾನಗಳಿಗೆ ಭಾಜನರಾದ ಯಕ್ಷರಂಗದ ಅಪರೂಪದ ಕಲಾವಿದ. ಪ್ರಶಸ್ತಿಯು ರೇಶ್ಮೆ ಶಾಲು, ಪ್ರಶಸ್ತಿ ಫಲಕ, ಸ್ಮರಣಿಕೆ, ಫಲಪುಷ್ಪ ಹಾಗೂ ರೂ.ಹತ್ತು ಸಾವಿರ ನಗದು ಒಳಗೊಂಡಿರುತ್ತದೆ. ಅಕ್ಟೋಬರ್ 06 ರಂದು ರಂಗಮನೆಯಲ್ಲಿ ನಡೆಯುವ ಯಕ್ಷ ಸಂಭ್ರಮದ ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ರಂಗಮನೆಯ ಅಧ್ಯಕ್ಷರಾದ ಡಾ| ಜೀವನರಾಂ ಸುಳ್ಯ ತಿಳಿಸಿದ್ದಾರೆ.

 

error: Content is protected !!

Join the Group

Join WhatsApp Group