(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 11. ಮಾರ್ಬಲ್ ವ್ಯವಹಾರದಲ್ಲಿ ಲಾಭದ ಆಸೆ ಹುಟ್ಟಿಸಿ 2.50 ಕೋ.ರೂ. ಹೂಡಿಕೆ ಮಾಡಿಸಿ ಬಳಿಕ ವಂಚಿಸಿರುವ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಮುಹಮ್ಮದ್ ಶರೀಫ್ ಎಂಬಾತ ತಾನು ರಾಜಸ್ತಾನದಿಂದ ಮಾರ್ಬಲ್ ತಂದು ಕಾಸರಗೋಡಿನಲ್ಲಿ ವ್ಯಾಪಾರ ಮಾಡುತ್ತಿದ್ದೇನೆ. ಅದರಲ್ಲಿ ಹೂಡಿಕೆ ಮಾಡಿದರೆ ಲಾಭ ಕೊಡುತ್ತೇನೆ ಎಂದು ನಂಬಿಸಿದ್ದ. ಅಲ್ಲದೆ ತನ್ನಿಂದ ಹಂತ ಹಂತವಾಗಿ 2.50 ಕೋ.ರೂ.ಗಳನ್ನು ನಗದಾಗಿ ಪಡೆದುಕೊಂಡಿದ್ದ. ಹಣ ಪಡೆದುಕೊಂಡ ಬಗ್ಗೆ ದಾಖಲಾತಿ ಕೇಳಿದಾಗ ತಾವಿಬ್ಬರು ಒಂದೇ ಊರಿನವರಾಗಿದ್ದು ದಾಖಲಾತಿಯನ್ನು ಮುಂದಕ್ಕೆ ಮಾಡಬಹುದು ಎಂದಿದ್ದ. ಮೂರು ತಿಂಗಳು ಕಳೆದ ಬಳಿಕ ವ್ಯಾಪಾರದ ಲೆಕ್ಕ ಮಾಡಿ ಲಾಭ ಮತ್ತು ದಾಖಲಾತಿಯನ್ನು ಒಟ್ಟಿಗೆ ಕೊಡುವುದಾಗಿಯೂ ಹೇಳಿದ್ದ. ಅದಾದ ಬಳಿಕ ತಾನು ಅಬುದಾಬಿಗೆ ತೆರಳಿದ್ದು, ಆಗಾಗ ಫೋನ್ ಮಾಡಿ ಹಣದ ಬಗ್ಗೆ ವಿಚಾರಿಸುತ್ತಿದ್ದೆ. ನಂತರ ಊರಿಗೆ ಬಂದು ಶರೀಫ್‌ನ ಮನೆಗೆ ಹೋಗಿ ಹಣ ಕೇಳಿದಾಗ ನೀಡದೆ ಅವಾಚ್ಯ ಶಬ್ದಗಳಿಂದ ಬೈದು, ಜೀವಬೆದರಿಕೆ ಹಾಕಿದ್ದಾನೆ ಎಂದು ಎಂ.ನಾಸೀರ್ ಎಂಬವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.