ಶಿಕ್ಷಿತರು ತಮ್ಮ ಜ್ಞಾನ ಧಾರೆ ಎರೆಯಬೇಕು- ಮಮತಾ ಗಟ್ಟಿ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 11. ಸಾಕ್ಷರರು ತಮ್ಮಲ್ಲಿರುವ ಜ್ಞಾನವನ್ನು, ವಿದ್ಯೆಯನ್ನು ಅನಕ್ಷರಸ್ಥರಿಗೆ ನೀಡಿದಾಗ, ಧಾರೆಯೆರೆದಾಗ ಜಿಲ್ಲೆಯೂ ಸಂಪೂರ್ಣ ಸಾಕ್ಷರತಾ ಜಿಲ್ಲೆಯಾಗಿ ರೂಪುಗೊಳ್ಳಲು ಸಾಧ್ಯ ಎಂದು ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಹೇಳಿದರು. ಮಂಗಳವಾರ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಲೋಕ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾ ಪಂಚಾಯತ್, ಜಿಲ್ಲಾ ಸಾಕ್ಷರತಾ ಸಮಿತಿ, ತಾಲೂಕು ಪಂಚಾಯತ್ ಬಂಟ್ವಾಳ ಹಾಗೂ ಜನ ಶಿಕ್ಷಣ ಟ್ರಸ್ಟ್ ನವಸಾಕ್ಷರರ ಗ್ರಾಮ ವಿಕಾಸ ಕೇಂದ್ರಗಳು ಸಹಭಾಗಿತ್ವದಲ್ಲಿ ನಡೆದ ವಿಶ್ವ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರವು 1991ರಲ್ಲಿ ಅನಕ್ಷರತೆ ನಿರ್ಮೂಲನೆಗಾಗಿ ಪಣತೊಟ್ಟು ಅನೇಕ ಆಂದೋಲನಗಳನ್ನು ನಡೆಸಿ ಪ್ರತಿಯೊಬ್ಬರೂ ಶಿಕ್ಷಣವನ್ನು ಪಡೆಯಬೇಕು ಎನ್ನುವ ದೃಷ್ಟಿಯಿಂದ ಹಲವಾರು ಯೋಜನೆಗಳ ಮೂಲಕ ಜಾಗೃತಿಯನ್ನು ಮೂಡಿಸಿ ಸಾಕ್ಷರತೆಯನ್ನು ಹೆಚ್ಚಿಸುವಲ್ಲಿ ಪಣತೊಟ್ಟಿತು. ಇದರ ಪರಿಣಾಮವಾಗಿ ಇಂದು ಅನೇಕರು ಶಿಕ್ಷಿತರಾಗಿದ್ದಾರೆ. ವಿದ್ಯಾದಾನ ಎಂಬುದು ಅತ್ಯಂತ ಅಮೂಲ್ಯವಾದ ದಾನ. ಆದ್ದರಿಂದ ವಿದ್ಯಾವಂತರಾಗಿರುವ ನಾವು ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡಲು ಪ್ರಯತ್ನಿಸಬೇಕು ಎಂದರು.

Also Read  ರಾಜ್ಯಾದ್ಯಂತ ನಾಳೆ(ಜ.28) ಮೊದಲ ಹಂತದ ಪಲ್ಸ್ ಪೊಲೀಯೋ ಕಾರ್ಯಕ್ರಮ

 

ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಸಮಾಜದಲ್ಲಿ ತಮ್ಮ ಹಕ್ಕನ್ನು ಪಡೆಯಲು ಸ್ವಾವಲಂಬಿ ಜೀವನವನ್ನು ನಡೆಸಲು ಶಿಕ್ಷಣವೂ ಮುಖ್ಯವಾದದ್ದು, ಪರರ ಉಪಕಾರಕ್ಕಾಗಿ ತನ್ನನು ತಾನು ತೊಡಗಿಸಿಕೊಳ್ಳಬೇಕು, ನಾವೆಲ್ಲರೂ ಸೇರಿ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡಬೇಕು. ಇದಕ್ಕಾಗಿ ವಿದ್ಯಾವಂತರು ತಮ್ಮ ದಿನಚರಿಯಲ್ಲಿ ಒಂದಷ್ಟು ಸಮಯವನ್ನು ಮೀಸಲಿಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಉಳ್ಳಾಲ ಮಾತನಾಡಿ, ಸರ್ಕಾರವು ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮವನ್ನು ಪ್ರಾರಂಭಿಸಿದಾಗಿನಿಂದ ಇಂದಿನವರೆಗೂ ಸಾಕ್ಷರತಾ ಪ್ರಮಾಣವನ್ನು ಹೆಚ್ಚಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಅನೇಕರ ಬಗ್ಗೆ ಸ್ಮರಿಸಿದರು. ಈ ಸಂದರ್ಭದಲ್ಲಿ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಲೋಕೇಶ್ ಬೆಂಗಳೂರಿಗೆ ವರ್ಗಾವಣೆಯಾಗಿರುವ ಕಾರಣ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ವೆಂಕಟೇಶ ಸುಬ್ರಾಯ ಪಟಗಾರ್, ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಲೋಕೇಶ ಸಿ, ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ಕೊಡಿಯಾಲ್‍ಬೈಲ್ ಇದರ ಪ್ರಾಂಶುಪಾಲರು ರಾಜಲಕ್ಷ್ಮೀ ಕೆ, ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್, ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ ಫಾತಿಮಾ ಮತ್ತಿತರರು ಉಪಸ್ಥಿತರಿದ್ದರು.

error: Content is protected !!
Scroll to Top