(ನ್ಯೂಸ್ ಕಡಬ) newskadaba.com ಕೈರೋ, ಸೆ. 10. ದಕ್ಷಿಣ ಗಾಝಾದಲ್ಲಿ ನಿರಾಶ್ರಿತ ಫೆಲೆಸ್ತೀನಿಯರಿದ್ದ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗೆ 40 ಮಂದಿ ಮೃತಪಟ್ಟಿದ್ದು, 60ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಹಮಾಸ್ ಕಮಾಂಡ್ ಸೆಂಟರ್ ಅನ್ನು ಗುರಿಯಾಗಿಸಿ ಈ ದಾಳಿ ನಡೆಸಿದ್ದಾಗಿ ಇಸ್ರೇಲ್ ಸೇನೆ ಹೇಳಿಕೊಂಡಿದೆ. ಆದರೆ ಅಮಾಯಕ ನಾಗರಿಕರನ್ನು ಗುರಿ ಮಾಡಲಾಗಿದೆ ಎಂದು ಹಮಾಸ್ ಹೇಳಿಕೊಂಡಿದೆ. ಯುದ್ಧ ಪೀಡಿತ ಗಾಝಾದ ಅಲ್-ಮವಾಸಿ ಪ್ರದೇಶದಲ್ಲಿನ ಖಾನ್ ಯೂನಿಸ್ ನಗರದಲ್ಲಿ ಕಿಕ್ಕಿರಿದ ಜನಸಂಖ್ಯೆಯಿದ್ದ ನಿರಾಶ್ರಿತರ ಶಿಬಿರದ ಮೇಲೆ ಕನಿಷ್ಟ ನಾಲ್ಕು ಕ್ಷಿಪಣಿಗಳು ಅಪ್ಪಳಿಸಿದೆ ಎಂದು ಅಲ್ಲಿದ್ದ ನಿರಾಶ್ರಿತರು ಮತ್ತು ನೆರವು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದ ವೈದ್ಯರು ಮಾಹಿತಿಯನ್ನು ನೀಡಿದ್ದಾರೆ ಎನ್ನಲಾಗಿದೆ.