(ನ್ಯೂಸ್ ಕಡಬ) newskadaba.com ಕಾಸರಗೊಡು, ಸೆ. 07. ಮನೆಕೆಲಸಕ್ಕೆ ಬಂದಿದ್ದ ಯುವತಿಯರಿಬ್ಬರು ಚಿನ್ನಾಭರಣ, ಐ ಫೋನ್ ಹಾಗೂ ಸ್ಮಾರ್ಟ್ ವಾಚ್ ಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಮನೆಯವರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕುಂಬಳೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಂಧಿತರನ್ನು ಪತ್ತನಂತ್ತಿಟ್ಟ ಮೂಲದ ಬ್ಲೆಸಿ (23) ಮತ್ತು ಜಿನ್ಸಿ (22) ಎಂದು ಗುರುತಿಸಲಾಗಿದೆ. ಕಯ್ಯಾರಿನಲ್ಲಿ ವಾಸ್ತವ್ಯ ಹೂಡಿ ಮನೆ ಕೆಲಸಕ್ಕೆ ತೆರಳುತ್ತಿದ್ದ ಇವರು ಒಂದು ತಿಂಗಳ ಹಿಂದೆ ಕುಬಣೂರಿನ ಸೈನುದ್ದೀನ್ ಎಂಬವರ ಮನೆಗೆ ಕೆಲಸಕ್ಕೆ ತೆರಳಿದ್ದ ಸಂದರ್ಭ ಐಫೋನ್ ಕಳವಾಗಿತ್ತು. ಆದರೆ ಮನೆಯವರು ಫೋನ್ ಎಲ್ಲಿಯಾದರೂ ಬಿದ್ದು ಹೋಗಿರಬಹುದು ಎಂದು ಸಂಶಯಿಸಿದ್ದರು. ಆಗಸ್ಟ್ 24 ಮತ್ತು 25 ರಂದು ಮತ್ತೆ ಈ ಯುವತಿಯರು ಮನೆ ಕೆಲಸಕ್ಕೆ ಬಂದಿದ್ದರು. ಅಂದು ಕೋಣೆಯಲ್ಲಿದ್ದ ಬ್ಯಾಗ್ ನಿಂದ ಚಿನ್ನಾಭರಣ ಮತ್ತು ಮೊಬೈಲ್ ಫೋನ್ ಮತ್ತು ಸ್ಮಾರ್ಟ್ ವಾಚ್ ಕಳವುಗೀಡಾಗಿತ್ತು. ಕೆಲಸಗಾರ್ತಿಯರು ಕೆಲಸ ಬಿಟ್ಟು ತೆರಳಿದ ಬಳಿಕ ಕೃತ್ಯ ಗಮನಕ್ಕೆ ಬಂದಿತ್ತು. ಈ ಬಗ್ಗೆ ಜೈನುದ್ದೀನ್ ರವರು ಪೊಲೀಸರಿಗೆ ದೂರು ನೀಡಿದ್ದರು. ಕೃತ್ಯ ನಡೆಸಿದವರು ಇದೇ ಯುವತಿಯರು ಎಂಬ ಬಗ್ಗೆ ಸುಳಿವು ಲಭಿಸಿದ ಹಿನ್ನಲೆ ಇಬ್ಬರನ್ನೂ ಮತ್ತೆ ಮನೆ ಕೆಲಸಕ್ಕೆಂದು ಕರೆಸಿ, ವಿಚಾರಿಸಿದಾಗ ಕಳವು ನಡೆಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇಬ್ಬರ ನ್ನು ಕುಂಬಳೆ ಠಾಣಾ ಪೊಲೀಸರಿಗೆ ಒಪ್ಪಿಸಲಾಗಿದೆ.