ಕಾರುಣ್ಯಭರಿತ ಸೇವೆಯಿಂದ ಮನುಷ್ಯ ಜೀವನ ಸಾರ್ಥಕ: ಸುಬ್ರಹ್ಮಣ್ಯ ಶ್ರೀ ► ಬೆಥನಿ ಜೀವನ್ ಜ್ಯೋತಿ ವಿಶೇಷ ಶಾಲಾ ದಶಮಾನೋತ್ಸವ

(ನ್ಯೂಸ್ ಕಡಬ) newskadaba.com ಕಡಬ, ಮಾ.01. ಇಂದು ಸಮಾಜದಲ್ಲಿ ಕ್ರೌರ್ಯವೇ ತಾಂಡವಾಡುತ್ತಿರುವುದು ದುರಂತದ ಸಂಗತಿ. ಮನುಷ್ಯ ಕಾರುಣ್ಯಭರಿತ ಸೇವಾ ಮನೋಭಾವದಿಂದ ಬದುಕಿದಾಗ ಮಾತ್ರ ಜೀವನ ಸಾರ್ಥಕವಾಗಲು ಸಾಧ್ಯ ಎಂದು ಶ್ರೀ ಸಂಪುಟ ನರಸಿಂಹಸ್ವಾಮಿ  ಸುಬ್ರಹ್ಮಣ್ಯ ಮಠಾಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಅವರು ಮಂಗಳವಾರ ರಾತ್ರಿ ಮರ್ಧಾಳ ಬೆಥನಿ ಜೀವನ್ ಜ್ಯೋತಿ ವಿಶೇಷ ಶಾಲೆಯ ದಶಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ನಮ್ಮ ಹೃದಯದಲ್ಲಿ ಕರುಣೆ ಮತ್ತು ಸೇವೆಯ ಮನೋಭಾವ ಇದ್ದರೆ ಮಾತ್ರ ನಾವು ಇತರರ ಸಂಕಷ್ಟಗಳಿಗೆ ಸ್ಪಂದಿಸಲು ಸಾಧ್ಯ. ಇತರರ ನೋವನ್ನು ನಮ್ಮ ನೋವು ಎಂದು ತಿಳಿದು ಮಾಡುವ ಸೇವೆಗೆ ದೇವರ ಕೃಪೆ ಖಂಡಿತವಾಗಿಯೂ ಇದೆ ಎಂದ ಅವರು ಬೆಥನಿ ವಿಶೇಷ ಶಾಲೆಯ ಕಾರ್ಯ ನಿಜಕ್ಕೂ ಅಭಿನಂದನೀಯ. ಸಹಜ ಮಕ್ಕಳಿಗೆ ಸಮಾಜದಲ್ಲಿ ಎಲ್ಲಾ ರೀತಿಯ ಅವಕಾಶಗಳಿವೆ. ಆದರೆ ಈ ರೀತಿಯ ಭಿನ್ನ ಸಾಮರ್ಥ್ಯದ ಮಕ್ಕಳನ್ನು ಸಲಹುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ನಡೆಯುತ್ತಿರುವ ಈ ಪ್ರಯತ್ನದಲ್ಲಿ ಇಡೀ ಸಮಾಜ ಕೈಜೋಡಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು. ತಾಳ್ಮೆ ಹಾಗೂ ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿರುವ ಶಾಲೆಯ ಶಿಕ್ಷಕ ವೃಂದ ಹಾಗೂ ಆಡಳಿತ ಮಂಡಳಿಯ ಕಾರ್ಯ ಶ್ಲಾಘನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಬೆಥನಿ ವಿದ್ಯಾಸಂಸ್ಥೆಗಳ ಸಂಚಾಲಕ ವಂ|ಸತ್ಯನ್ ಥಾಮಸ್ ಅವರು ಮಾತನಾಡಿ ಭಿನ್ನ ಸಾಮಥ್ರ್ಯದ ಮಕ್ಕಳಲ್ಲಿ ವಿಶೇಷವಾದ ಪ್ರತಿಭೆಗಳಿವೆ. ಆದರೆ ಅದನ್ನು ಹೊರಜಗತ್ತಿಗೆ ತೆರೆದಿಡುವ ಕಾರ್ಯ ಸ್ವಲ್ಪಮಟ್ಟಿಗೆ ಸವಾಲಿನದು. ಅವರ ಪ್ರತಿಭೆಗಳನ್ನು ಗುರುತಿಸಿ ಸರಿಯಾದ ತರಬೇತಿ ನೀಡಿದರೆ ಅವರು ಇತರ ಮಕ್ಕಳಿಗಿಂತ ಹೆಚ್ಚಿನ ಸಾಧನೆ ಮಾಡಬಲ್ಲರು ಎನ್ನುವುದು ಹಲವು ವಿಚಾರಗಳಲ್ಲಿ ರುಜುವಾತಾಗಿದೆ. ಆದುದರಿಂದ ಹೆತ್ತವರು ಅಂತಹ ಮಕ್ಕಳಿಗೆ ವಿಶೇಷ ಕಾಳಜಿಯಿಂದ ಪ್ರೋತ್ಸಾಹ ನೀಡಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಥನಿ ನವಜ್ಯೋತಿ ಪ್ರೊವಿನ್ಸ್ನ ಸುಪೀರಿಯರ್ ವಂ|ವಿಲಿಯಂ ನೆಡುಂಪುರತ್ ಅವರು ಮಕ್ಕಳಿಗೆ ದೇವರು ನೀಡಿರುವ ಪ್ರತಿಭೆ ಮತ್ತು ಅವರ ಸೃಜನಶೀಲತೆಯನ್ನು ಹೊರತೆಗೆಯುವುದೇ ಶಿಕ್ಷಣ. ಸಹಜ ಆರೋಗ್ಯದ ಮಕ್ಕಳಲ್ಲಿ ಇದು ಕಷ್ಟದ ಕೆಲಸವಲ್ಲ. ಆದರೆ ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಶಿಕ್ಷಣ ನೀಡುವುದು ಸವಾಲಿನ ಕೆಲಸ. ಬೆಥನಿ ಸಂಸ್ಥೆಯ 40 ಶಿಕ್ಷಣ ಸಂಸ್ಥೆಗಳ ಪೈಕಿ ಈ ವಿಶೇಷ ಶಾಲೆಯ ಮೇಲೆ ನಮಗೆ ವಿಶೇಷ ಕಾಳಜಿ ಇದೆ. ಪ್ರತಿಯೊಂದು ಮಗುವೂ ತನ್ನ ಬಾಲ್ಯವನ್ನು ಇತರ ಮಕ್ಕಳಂತೆಯೇ ಖುಷಿಯಿಂದ ಕಳೆಯಬೇಕು. ಭಿನ್ನ ಸಾಮರ್ಥ್ಯದ ಮಕ್ಕಳೂ ಅದರಿಂದ ವಂಚಿತರಾಗಬಾರದು ಎನ್ನುವ ಕಾರಣಕ್ಕಾಗಿ 10 ವರ್ಷಗಳ ಹಿಂದೆ ಸಂಸ್ಥೆಯನ್ನು ಆರಂಭಿಸಲಾಯಿತು. 9 ಮಕ್ಕಳಿಂದ ಆರಂಭಗೊಂಡ ಸಂಸ್ಥೆ ಇಂದು 62 ಮಕ್ಕಳನ್ನು ಸಲಹುತ್ತಿದೆ. ಆರಂಭದಿಂದ ಸತತ 7 ವರ್ಷಗಳ ಕಾಲ ಶಾಲೆಯನ್ನು ಮುನ್ನಡೆಸಿದ ವಂ|ಸಖಾರಿಯಾಸ್ ನಂದಿಯಾಟ್ ಅವರ ಶ್ರಮ ಇಲ್ಲಿ ಉಲ್ಲೇಖನೀಯ ಎಂದರು.

ಬೆಥನಿ ನವಜ್ಯೋತಿ ಪ್ರೊ ವಿನ್ಸ್‌ ನ ಕೋಶಾಧಿಕಾರಿ ವಂ|ಮ್ಯಾಥ್ಯೂ ಮೋಡಿಯಿಲ್ ಅವರು ಸಂಸ್ಥೆಯ ವೆಬ್‌ಸೈಟ್ ಅನಾವರಣಗೊಳಿಸಿ ಮಾತನಾಡಿದರು. ಕಡಬ ಬೆಥನಿ ಆಶ್ರಮದ ಮುಖ್ಯಸ್ಥ ವಂ|ಪೀಟರ್ ಜಾನ್, ಶಾಲೆಯ ನಿಕಟಪೂರ್ವ ನಿರ್ದೇಶಕ ವಂ| ಸಖರಿಯಾಸ್ ನಂತದಿಯಾಟ್, ಮರ್ಧಾಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ ರೈ, ಶಾಲೆಯ ಸ್ಥಾಪಕ ಮುಖ್ಯ ಶಿಕ್ಷಕಿ ಸಿ.ಆಲನ್ ಮೇರಿ ಡಿ.ಎಂ. ಹಾಗೂ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರೆಜಿ ಕೆ. ಥಾಮಸ್ ಅವರು ಮಾತನಾಡಿದರು. ಧರ್ಮಗುರುಗಳಾದ ವಂ|ಸಿರಿಲ್ ಮೈಕೆಲ್, ವಂ|ಫ್ರಾನ್ಸಿಸ್ ತೆಕ್ಕೆಪೂಕಳಂ, ದಶಮಾನೋತ್ಸವ ಸಮಿತಿಯ ಅಧ್ಯಕ್ಷ ಸುದರ್ಶನ ಗೌಡ ಕೋಡಿಂಬಾಳ, ಉಪಾಧ್ಯಕ್ಷ ಗಣೇಶ್ ಕಾಶಿಕಟ್ಟೆ ಅವರು ಕ್ರೀಡಾ ವಿಜೇತರಿಗೆ ಬಹುಮಾನ ವಿತರಿಸಿದರು. ಪುತ್ತೂರು ಸಿಟಿ ರೋಟರಿ ಕ್ಲಬ್ ವತಿಯಿಂದ ಶಾಲೆಗೆ ಆರ್ಥಿಕ ನೆರವು ಹಸ್ತಾಂತರಿಸಲಾಯಿತು. ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಹೊಸದಾಗಿ ತೆರೆಯಲಾದ ಫಿಸಿಯೋಥೆರಪಿ ವಿಭಾಗದ ಉದ್ಘಾಟನೆ ನೆರವೇರಿತು.

ಶಾಲಾ ನಿರ್ದೇಶಕ ವಂ| ವಿಜೋಯ್ ವರ್ಗೀಸ್ ಅವರು ಸ್ವಾಗತಿಸಿ, ಪ್ರಸ್ತಾವನೆಗೈದರು. ಮುಖ್ಯಶಿಕ್ಷಕಿ ಶೈಲಾ ಪಿ.ಜೆ. ವರದಿ ಮಂಡಿಸಿ, ದೈಹಿಕ ಶಿಕ್ಷಣ ಶಿಕ್ಷಕ ಪ್ರಭಾಕರ ಅವರು ಕ್ರೀಡಾ ಸಾಧಕರ ಪಟ್ಟಿ ವಾಚಿಸಿದರು. ನೆಲ್ಯಾಡಿಯ ಬೆಥನಿ ಪದವಿ ಕಾಲೇಜಿನ ವಿದ್ಯಾರ್ಥಿಗಳಾದ ರಕ್ಷಕ್, ಟೀನಾ ಹಾಗೂ ಪೃಥ್ವಿ ನಿರೂಪಿಸಿ, ಶಿಕ್ಷಕಿ ಅಂಬಿಲಿ ಪಿ.ಎಸ್. ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ಜರಗಿತು.

error: Content is protected !!

Join the Group

Join WhatsApp Group