(ನ್ಯೂಸ್ ಕಡಬ) newskadaba.com ಕೋಲ್ಕತ್ತಾ, ಸೆ. 06. ಇಲ್ಲಿನ ಆರ್ಜಿಕರ್ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯವು ದಾಳಿ ನಡೆಸಿದ್ದು, ಸರ್ಕಾರಿ ಸಂಸ್ಥೆಯಲ್ಲಿ ನಡೆದ ಆರ್ಥಿಕ ಹಗರಣದ ಭಾಗವಾಗಿ ದಾಳಿ ನಡೆದಿದೆ ಎನ್ನಲಾಗಿದೆ.
ಸಂದೀಪ್ ಘೋಷ್ ಅವರ ಅಧಿಕಾರಾವಧಿಯಲ್ಲಿ ಆಸ್ಪತ್ರೆಯಲ್ಲಿ ನಡೆದ ಹಣಕಾಸು ಅಕ್ರಮಗಳ ಆರೋಪವೇ ಕೇಂದ್ರೀಯ ಸಂಸ್ಥೆಗಳ ತನಿಖೆಗೆ ಕಾರಣವಾಗಿದೆ. ಸಂದೀಪ್ ಘೋಷ್ ಅವರು ಆಪಾದಿತ ಹಣಕಾಸು ಅಕ್ರಮಗಳ ಕುರಿತು ಸಿಬಿಐ ತನಿಖೆಗೆ ಆದೇಶಿಸಿದ ಕೋಲ್ಕತ್ತಾ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತತ್ವದ ಪೀಠದ ಮುಂದೆ ಈ ಅರ್ಜಿ ಇಂದು ವಿಚಾರಣೆ ನಡೆಸಲಿದೆ. ಕೋಲ್ಕತ್ತಾ ನ್ಯಾಯಾಲಯವು ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಹಣಕಾಸು ಅವ್ಯವಹಾರದ ಬಗ್ಗೆ ನಡೆಯುತ್ತಿರುವ ತನಿಖೆಯ ಭಾಗವಾಗಿ ಘೋಷ್ ಮತ್ತು ಇತರ ಮೂವರನ್ನು ಎಂಟು ದಿನಗಳ ಕಾಲ ಸಿಬಿಐ ಕಸ್ಟಡಿಗೆ ಒಪ್ಪಿಸಿತು.
ಸಿಬಿಐ ತನ್ನ ಪ್ರಥಮ ಮಾಹಿತಿ ವರದಿಯಲ್ಲಿ (ಎಫ್‌ಐಆರ್) ಘೋಷ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿ), ಸೆಕ್ಷನ್ 420 ಐಪಿಸಿ (ವಂಚನೆ ಮತ್ತು ಅಪ್ರಮಾಣಿಕತೆ) ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ, 1988 ರ ಅಡಿಯಲ್ಲಿ ಆರೋಪ ಮಾಡಿದೆ. ಸೆಪ್ಟೆಂಬರ್ 2 ರಂದು, ಭ್ರಷ್ಟಾಚಾರ ಪ್ರಕರಣದಲ್ಲಿ ಡಾ ಘೋಷ್ ಅವರನ್ನು ಬಂಧಿಸಿದ ಸಿಬಿಐ ನಂತರ ತನಿಖಾ ಸಂಸ್ಥೆಯ ಕಸ್ಟಡಿಗೆ ಕಳುಹಿಸಿದ್ದಾರೆ.