ಶಿಕ್ಷಕ ದಿನಾಚರಣೆ- ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಗುರುವಂದನಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 05. ಮಂಗಳೂರಿನ ಶಕ್ತಿನಗರದ ಶಕ್ತಿ ವಿದ್ಯಾ ಸಂಸ್ಥೆಯ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿ ನಿವೃತ್ತಿ ಹೊಂದಿದ ಗುರುಗಳಿಗೆ ಗುರುವಂದನೆಯನ್ನು ನೀಡುವ ಮೂಲಕ ಶಿಕ್ಷಕರ ದಿನಾಚರಣೆಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು.

ಶುಭೋದಯ ಮೆಡಿಕಲ್ ಸೈನ್ಸ್ ಸಂಸ್ಥೆ ಶಿವಮೊಗ್ಗ ಇಲ್ಲಿಯ ಪ್ರೊಫೆಸರ್ ಆಗಿರುವ ಶ್ರೀಯುತ ಡಾ ಶಿವಾನಂದ ನಾಯ್ಕ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ದೀಪವನ್ನು ಬೆಳಗಿಸಿದರು. ನಂತರ ಮಾತನಾಡಿದ ಅವರು, “ವಿದ್ಯಾ ಕ್ಷೇತ್ರದಲ್ಲಿ ಸಾಧ್ಯವಾದದ್ದನೆಲ್ಲ ಮಾಡಿ ಮಕ್ಕಳಿಗೆ ಮಾರ್ಗದರ್ಶನ ಮಾಡಿದ ಶಿಕ್ಷಕರನ್ನು ನೆನಪಿಕೊಳ್ಳುವ ಸಲುವಾಗಿ ಈ ಶಿಕ್ಷಕರ ದಿನಾಚರಣೆ ಮಾಡಲಾಗುತ್ತದೆ. ತಾಯಿ ಜನ್ಮ ಕೊಟ್ಟರೆ, ಶಿಕ್ಷಕರು ಜೀವನವನ್ನು ಕೊಡುತ್ತಾರೆ. ಆದ್ದರಿಂದ ಮಕ್ಕಳು ತಾಯಿ ಹೃದಯದ ಶಿಕ್ಷಕರನ್ನು ನೆನಪಿಸಿಕೊಳ್ಳುತ್ತಾರೆ. ಸಂಸ್ಕೃತದಲ್ಲಿ ವಿದ್ಯಾರ್ಥಿಯನ್ನು ಒಳ್ಳೆ ಪ್ರಜೆಯಾಗಿ ಮಾಡುವವರಿಗೆ ಅಂಧಕಾರವನ್ನು ಹೋಗಲಾಡಿಸುವವರಿಗೆ  ಶಿಕ್ಷಕ ಎಂದು ಕರೆಯುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನಕ್ಕೆ ಒಂದು ಗುರಿ ಇರಲೇಬೇಕು. ಆ ಗುರಿಯನ್ನು ಸಾಧಿಸಲು  ಹಿಂದೆ ಯಾರಾದರೊಬ್ಬ ಗುರು ಇದ್ದೇ ಇರುತ್ತಾರೆ. ಆ ಗುರು ಮಕ್ಕಳನ್ನು ಉತ್ತಮ ಪ್ರಜೆಯನ್ನಾಗಿ ಮಾಡುವಲ್ಲಿ ಮುಖ್ಯವಾದ ಪಾತ್ರವನ್ನು ನಿಭಾಯಿಸುತ್ತಾರೆ.

ವಿದ್ಯಾರ್ಥಿಗಳಿಗೆ ಶಿಕ್ಷಕರು ಏನನ್ನು ಕಲಿಸುತ್ತಾರೋ ಮಕ್ಕಳು ಮುಂದಿನ ಜೀವನದಲ್ಲಿ ಅದನ್ನೇ ಅನುಸರಿಸುತ್ತಾರೆ. ಹಾಗಾಗಿ ಶಿಕ್ಷಕನಾದವನು ತನಗೆ ಯಾವ ವಿದ್ಯಾರ್ಥಿ ಮಾತ್ರ ಇಷ್ಟವೋ ಯಾವ ವಿದ್ಯಾರ್ಥಿ ಕಲಿಕೆಯಲ್ಲಿ ಮುಂದಿದ್ದಾನೋ ಅವನಿಗೆ ಮಾತ್ರ ಕಲಿಸದೇ, ಶಾಲೆಗಳಲ್ಲಿ ಕಲಿಕೆಯಲ್ಲಿ ಹಿಂದಿದ್ದವನನ್ನು ಕೂಡಾ ಪ್ರಗತಿ ಕಾಣುವಂತೆ ಮಾಡುತ್ತಾನೆ. ಯಾವ ಮಗುವಿಗೆ ಆಗಲಿ ತಪ್ಪು ಮಾಡಿದಾಗ ಧನಾತ್ಮಕವಾಗಿ ಅವನಲ್ಲಿ ತಪ್ಪಿನ ಅರಿವನ್ನು ಮೂಡಿಸಿ ಮುಂದೆ ಅದೇ ತಪ್ಪು ಮರುಕಳಿಸದಂತೆ ತಿದ್ದಿ ಬುದ್ಧಿ ಹೇಳುವ ಕೌಶಲವನ್ನು ಶಿಕ್ಷಕನಾದವನು ಬೆಳೆಸಿಕೊಂಡಿರಬೇಕು” ಎಂದು ಹೇಳಿದರು.

Also Read  ಉಡುಪಿ: ಮೃತಪಟ್ಟ 7 ಮೀನುಗಾರರ ಕುಟುಂಬಕ್ಕೆ 10 ಲಕ್ಷ ಹೆಚ್ಚುವರಿ ಪರಿಹಾರ

ನಂತರ ಶಿಕ್ಷಣ ಕ್ಷೇತ್ರದಲ್ಲಿ ಅಗಾಧವಾದ ಸಾಧನೆ ಮಾಡಿದಕ್ಕಾಗಿ ಶಕ್ತಿ ವಿದ್ಯಾಸಂಸ್ಥೆಯ ವತಿಯಿಂದ ಸನ್ಮಾನಿಸಲ್ಪಟ್ಟ  ಶ್ರೀಮತಿ ರತ್ನಾವತಿ ಜೆ ಬೈಕಾಡಿ ನಿವೃತ್ತ ಮುಖ್ಯ ಶಿಕ್ಷಕರು ಬೆಸೆಂಟ್ ಪ್ರೌಢ ಶಾಲೆ ಮಂಗಳೂರು ಇವರು ಈ ಸಂದರ್ಭದಲ್ಲಿ ಮಾತನಾಡಿ, ಮಕ್ಕಳು ದೇವರು,  ಅವರದ್ದು ಮುಗ್ದತೆಯ ಮನಸ್ಸು, ನಿಷ್ಕಲ್ಮಶ ಹೃದಯ. ಅವರಿಗೆ ಶಿಕ್ಷಕರಾದ ನಾವು ಏನನ್ನು ಕಲಿಸುತ್ತೇವೆಯೋ ಅದನ್ನೇ ಅವರು ಜೀವನದಲ್ಲಿ ಅನುಸರಿಸುತ್ತಾರೆ. ಹಾಗಾಗಿ ಈ ಸಮಾಜದಲ್ಲಿ ಉತ್ತಮವಾದ ಪ್ರಜೆಗಳಾಗಿ ಮಾಡುವಲ್ಲಿ ಗುರುಗಳ ಪಾತ್ರ ಬಹಳ ದೊಡ್ಡದು. ಮುಂದೆ ಒಂದು ಗುರಿ ಹಿಂದೆ ಒಬ್ಬ ಗುರು ಇದ್ದರೆ ವಿದ್ಯಾರ್ಥಿ ಜೀವನದಲ್ಲಿ ಸಾಧನೆಯನ್ನು ಮಾಡುತ್ತಾನೆ. ಸಂಸ್ಕಾರಗಳನ್ನು ರೂಢಿಸಿಕೊಂಡು ಶಿಕ್ಷಕರಿಗೂ ಗುರು ಹಿರಿಯರಿಗೂ ತಂದೆ ತಾಯಿಗೆ ಉತ್ತಮವಾದ ಗೌರವವನ್ನು ತರುವಂತೆ ಬಾಳಿ ಎಂದು ಮಕ್ಕಳಿಗೆ ಕಿವಿಮಾತನ್ನು ಹೇಳಿದರು.

ಹಾಗೆಯೇ ಮತ್ತೋರ್ವ ಸನ್ಮಾನಿತರು ಉಳ್ಳಾಲ ಬಿ ಎಂ ಶಾಲೆಯ ನಿವೃತ್ತ ಶಿಕ್ಷಕರಾದ ಶ್ರೀಮತಿ ಉಷಾ ಎಂ. ಮಕ್ಕಳನ್ನುದ್ದೇಶಿಸಿ ಮಾತನಾಡಿ, “ಶಕ್ತಿ ಎಂಬ ಹೆಸರೇ ಶಕ್ತಿ ನೀಡುವಂತದ್ದು, ಒಬ್ಬ ವ್ಯಕ್ತಿಯ ಬೆಳವಣಿಗೆಯಲ್ಲಿ ಭೌತಿಕ ಶಕ್ತಿ, ಮಾನಸಿಕ ಶಕ್ತಿ, ಆದ್ಯಾತ್ಮಿಕ ಶಕ್ತಿ, ದೈಹಿಕ ಶಕ್ತಿ ಈ 4 ಮುಖ್ಯ ಶಕ್ತಿಗಳಿದ್ದರೆ ಮನುಷ್ಯ ಅಸಾಧಾರಣವಾದ ಸಾಧನೆಯನ್ನು ಮಾಡಬಹುದು.  ಶಕ್ತಿವಂತ ಮಕ್ಕಳು ಯಾರು ಕೂಡಾ ತಮ್ಮಷ್ಟಕ್ಕೆ ಹುಟ್ಟುವುದಿಲ್ಲ. ಅಂತಹ ಶಕ್ತಿಯನ್ನು ಹೊರತೆಗೆಯಲು ಒಬ್ಬ ಗುರು ಬೇಕು. ನಾನು ಶಿಕ್ಷಕ ಆಗಿಯೇ ಆಗುತ್ತೇನೆ, ಯಾವುದೇ ಜಾತಿ ಭೇದ ಇಲ್ಲದೆ, ಎಲ್ಲಾ ಮಕ್ಕಳನ್ನು ತಾಯಿ ಹೃದಯದಂತೆ ಪ್ರೀತಿಸುವ ಶಿಕ್ಷಕನೇ ನಿಜವಾದ ಶಿಕ್ಷಕ. ತ್ಯಾಗ ಮಾಡಲು ಸಿದ್ಧನಿದ್ದವನೇ ಮಾದರಿ ಶಿಕ್ಷಕ. ಮಕ್ಕಳಿಗೆ ದಾರಿ ತೋರಿಸುವ ಒಬ್ಬ ಶಿಕ್ಷಕನಾದವನು ದಾರಿ ತಪ್ಪಿದರೆ ಇಡೀ ಸಮಾಜವೇ ದಾರಿ ತಪ್ಪುತ್ತದೆ. ಶಿಕ್ಷಕರಿಗೆ ಬಹಳಷ್ಟು ಜವಾಬ್ದಾರಿಗಳಿರುತ್ತವೆ. ಮಕ್ಕಳು ದೇವರ ಸಮಾನ. ಒಂದು ಹನಿ ಪ್ರೀತಿ ಕೊಟ್ಟರೆ ಮಕ್ಕಳು ಪ್ರೀತಿಯ ಸಾಗರವನ್ನೇ ಹರಿಸುತ್ತಾರೆ. ಶಿಕ್ಷಕನಾದವನಿಗೆ ಶಾಲೆಯೇ ದೇಗುಲ, ಶಿಕ್ಷಕ ವೃತ್ತಿಯೇ ಪೂಜೆ, ಶಿಕ್ಷಕನಿಗೆ ಸಮಾಜದಲ್ಲಿ ಗೌರವ ಕಡಿಮೆ ಆಗಲು ಸಾಧ್ಯವಿಲ್ಲ. ಯಾಕೆಂದರೆ ಯೋಗ್ಯ ಶಿಕ್ಷಕನಿಗೆ ಗೌರವ ಸನ್ಮಾನಗಳು ಅರಸಿಕೊಂಡು ಬರುತ್ತದೆ. ನಿಮ್ಮ ಶಾಲಾ ಶಿಕ್ಷಕರು ಕಲಿಸಿಕೊಟ್ಟ ಗುಣಗಳಿಂದ ಎಲ್ಲ ಮಕ್ಕಳು ಈ ದೇಶದ ಸುಂದರ ಪ್ರಜೆಗಳಾಗಿ ಬಾಳಿ” ಎಂದು ಮಕ್ಕಳಿಗೆ ಶುಭ ಹಾರೈಸಿದರು.

Also Read  ಕಡಬ: ಬಿಜೆಪಿ ವಿಸ್ತಾರಕರಿಂದ ಮನೆ ಮನೆ ಭೇಟಿ

 

ಹಾಗೇನೇ ಮತ್ತೊರ್ವ ಸನ್ಮಾನಿತರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಕ್ತಿ ವಿದ್ಯಾ ಸಂಸ್ಥೆಯ ಆಡಳಿತಧಿಕಾರಿಗಳಾದ ಡಾ ಕೆ ಸಿ ನಾಯಕ್ ಅವರು ಮಾತನಾಡಿ, ಶಿಕ್ಷಕರು ಬದುಕಿಗೆ ದಾರಿ, ಜ್ಞಾನದ ದೀಪ, ಸ್ಫೂರ್ತಿಯ ಚಿಲುಮೆ, ಹಾಗಾಗಿ ಭಾರತ ಕಂಡ ಸರ್ವ ಶ್ರೇಷ್ಠ ಶಿಕ್ಷಕ ಡಾ| ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ನೆನಪಿನಲ್ಲಿ ಆಚರಿಸಲಾಗುತ್ತಿರುವ ಈ ಸುದಿನದಂದು ಎಲ್ಲ ಗುರುಗಳಿಗೂ ಶುಭಾಶಯಗಳು, ವಿದ್ಯಾರ್ಥಿ ಕಂಡ ಕನಸನ್ನು ನನಸು ಮಾಡಬೇಕಾದರೆ ಉತ್ತಮ ಅಂಕಗಳನ್ನು ಗಳಿಬೇಕಾಗುತ್ತದೆ. ಅದಕ್ಕಾಗಿ ಜೀವನ ಸಿದ್ಧಾಂತಗಳ ಜೊತೆಜೊತೆಗೆ ಶಿಕ್ಷಕರು ತರಗತಿಯಲ್ಲಿ ಕಲಿಸಿಕೊಟ್ಟ ಪಾಠಗಳ ಅಭ್ಯಾಸವನ್ನು ದಿನನಿತ್ಯ ಮಾಡಿದರೆ ಕನಸು ನನಸಾಗುತ್ತದೆ, ಎಂದು ಕಿವಿ ಮಾತು ಹೇಳಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶಕ್ತಿ ವಿದ್ಯಾಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ ಪ್ರಾಸ್ಥಾವಿಕ ನುಡಿಗಳನ್ನಾಡಿ, ಶ್ರೀಮತಿ ಬಬಿತಾ ಸೂರಜ್ ಅವರು ಸ್ವಾಗತಿಸಿದರು. ಶ್ರೀಯುತ ವೆಂಕಟೇಶ್ ಮೂರ್ತಿ ಪ್ರಾಂಶುಪಾಲರು ಶಕ್ತಿ ಪದವಿ ಪೂರ್ವ ಕಾಲೇಜು ಉಪಸ್ಥಿತರಿದ್ದರು. ಪ್ರಿಯಾಂಕ ರೈ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Also Read  ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಇಂದು 5 ಮಂದಿಯಲ್ಲಿ ಕೋವಿಡ್ ದೃಢ

error: Content is protected !!
Scroll to Top