ವಿದ್ಯಾರ್ಥಿಗಳ ಉನ್ನತ ಸಾಧನೆಯೇ ಶಿಕ್ಷಕ ವೃತ್ತಿಯ ಧನ್ಯತೆ – ಮೋಹಿನಿ ಶೆಟ್ಟಿ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 05. ನಮ್ಮ ಹಳೆಯ ವಿದ್ಯಾರ್ಥಿಗಳು ಜೀವನದಲ್ಲಿ ಮಹತ್ತರ ಸಾಧನೆಗೈಯುವುದನ್ನು ನೋಡುವಲ್ಲಿ ನಮ್ಮ ಶಿಕ್ಷಕ ವೃತ್ತಿಯ ಧನ್ಯತೆ ಅಡಗಿದೆ ಎಂದು ಬೆಳ್ಳಾರೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಹಿಂದಿ ಶಿಕ್ಷಕಿ ಮೋಹಿನಿ ಶೆಟ್ಟಿ ನುಡಿದರು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ ಇದರ ವತಿಯಿಂದ ಶಿಕ್ಷಕ ದಿನಾಚರಣೆಯ ಅಂಗವಾಗಿ ಮಂಗಳೂರಿನ ಶಿವಬಾಗ್ ನಲ್ಲಿರುವ ತಮ್ಮ ಮಗಳ ನಿವಾಸದಲ್ಲಿ ಸಲ್ಲಿಸಿದ ಗೌರವವನ್ನು ಸ್ವೀಕರಿಸಿ ಅವರು ಮಾತನಾಡಿದರು.

ಶಿಕ್ಷಕ ವೃತ್ತಿ ಬಹಳ ಪವಿತ್ರ ಮತ್ತು ಅದರಿಂದ ಸಿಗುವ ಶಿಷ್ಯ ಸಂಪತ್ತೇ ನಿಜವಾದ ಸಂಪತ್ತು ಅಲ್ಲದೇ ನಮ್ಮ ಅನೇಕ ಶಿಷ್ಯರು ಉನ್ನತ ಸಾಧನೆ ಮಾಡಿ, ಎಳವೆಯಲ್ಲಿ ಕಲಿಸಿದ ಗುರುಗಳನ್ನು ನೆನಪಿಟ್ಟುಕೊಳ್ಳುವುದು , ಪದಗಳಲ್ಲಿ ಹಿಡಿದಿಡಲಾಗದ ಅನುಭವ ಎಂದು ವಿವರಿಸಿದರು. ಕ.ಸಾ.ಪ. ಕೇಂದ್ರ ಮಾರ್ಗದರ್ಶಕ ಸಮಿತಿ ಸದಸ್ಯ ಡಾ. ಮುರಲೀಮೋಹನ ಚೂಂತಾರು ತಮ್ಮ ಶಾಲಾದಿನಗಳನ್ನು ನೆನೆಯುತ್ತಾ ಮೋಹಿನಿ ಟೀಚರ್ ಅವರ ಬಗ್ಗೆ ತುಂಬು ಅಭಿಮಾನದ ನುಡಿಗಳನ್ನಾಡಿದರು. ಮಗಳು ಶ್ರೀಮತಿ ಸುಜಯ ಸತೀಶ್, ಅಳಿಯ ಸತೀಶ್ ಚಂದ್ರ ಶೆಟ್ಟಿ ಜೊತೆಗಿದ್ದರು. ಕ.ಸಾ.ಪ. ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಎಸ್. ರೇವಣ್ಕರ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಹವ್ಯಕ ಸಭಾ ಅಧ್ಯಕ್ಷೆ ಗೀತಾದೇವಿ ಚೂಂತಾರು ಉಪಸ್ಥಿತರಿದ್ದರು. ಘಟಕದ ಕಾರ್ಯದರ್ಶಿ ಎನ್. ಗಣೇಶ್ ಪ್ರಸಾದ್ ಜೀ ಸ್ವಾಗತಿಸಿ ಕೋಶಾಧಿಕಾರಿ ಎನ್. ಸುಬ್ರಾಯ ಭಟ್ ವಂದಿಸಿದರು.

error: Content is protected !!
Scroll to Top