ಗೋಕುಲನಗರ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ

(ನ್ಯೂಸ್ ಕಡಬ) newskadaba.com ಕಡಬ, ಸೆ. 05. ಶಿಷ್ಟರ ರಕ್ಷಣೆ ಮಾಡಲು,  ದುಷ್ಟರಿಗೆ  ಶಿಕ್ಷೆ ನೀಡಲು ನಾನಾ ಆವಾತರಗಳನ್ನು ಎತ್ತಿದ ಶ್ರೀ ಕೃಷ್ಣ ಪರಮಾತ್ಮನ ಸಾತ್ಬಿಕ ಗುಣಗಳು ಅಧುನಿಕ ಕಾಲಘಟದಲ್ಲಿನ ನಮಗೆಲ್ಲ ಆದರ್ಶವಾಗಬೇಕು ಎಂದು ನಿವೃತ್ತ ಶಿಕ್ಷಕ ಬಾಲಚಂದ್ರ ಮುಂಚಿತ್ತಾಯ ಹೇಳಿದರು.

ಅವರು  ಕಡಬ ತಾಲೂಕಿನ ಕೊಯಿಲ-ರಾಮಕುಂಜ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ ಗೋಕುಲನಗರದಲ್ಲಿ ಭಾನುವಾರ ಸಾಯಂಕಾಲ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಸಮರೋಪದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು. ಹಿಂದೂ ಸಮಾಜದ ಸುಭಿಕ್ಷೆಗಾಗಿ ನಾನಾ ಅವತಾರ ಪುರುಷರ ಉತ್ಕೃಷ್ಟ  ಸಂದೇಶವಿದೆ. ಮುಕ್ಕೋಟಿ ದೇವರುಗಳ ಆರಾಧಿಸುವ  ಸನಾತನ ಹಿಂದೂ ಧರ್ಮ ವಿಶ್ವಕ್ಕೆ ಮಾದರಿಯಾಗಿ ಬೆಳೆದಿದೆ. ಯುವ ಪೀಳಿಗೆ ಧರ್ಮದ ಆಚರಣೆಯಲ್ಲಿ ಪಾಲ್ಗೊಂಡು ಧರ್ಮದ ಮೂಲವನ್ನು ಸ್ವರೂಪವನ್ನು ಗಟ್ಟಿಗೊಳಿಸಬೇಕು ಎಂದರು. ರಾಮಕುಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಬಿ. ಸುಚೇತಾ  ಸಂದರ್ಭೋಚಿತವಾಗಿ ಮಾತನಾಡಿದರು. ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ಮೋಹನ್‌ದಾಸ್ ಶೆಟ್ಟಿ ಬಡಿಲ ಅಧ್ಯಕ್ಷತೆ ವಹಿಸಿದ್ದರು. ಕೊಯಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾ ಆರುವಾರ ಉಪಸ್ಥಿತರಿದ್ದರು.

Also Read  ಕರಾವಳಿಯಲ್ಲಿ ಮಾದಕ ದ್ರವ್ಯದ ನಶೆ ➤ ಟ್ರಾಫೀಕ್ ರೂಲ್ಸ್ ಬ್ರೇಕರ್ ವಿರುದ್ಧ ಪೊಲೀಸ್ ಕಾರ್ಯಾಚರಣೆ

ನಿವೃತ್ತ ಹಿರಿಯ ಪಶುಪರೀವೀಕ್ಷಕ ಆಶೋಕ್ ಕೊಯಿಲ, ಮೆಸ್ಕಾಂ ಪವರ್ ಮ್ಯಾನ್ ವಿಶ್ವನಾಥ ರಾಮಕುಂಜ, ನಿವೃತ್ತ ಸಹಾಯಕ ಪೊಲೀಸ್ ಉಪನಿರೀಕ್ಷಕ ಕುಶಾಲಪ್ಪ ಗೌಡ ಆನೆಗುಂಡಿ, ನಿವೃತ್ತ ಸೈನಿಕ ಸುಬೇದಾರ್ ಗುಣಕರ ಕೆ ಕೆರ್ನಡ್ಕ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ವ್ಯವಸ್ಥಾಪಕ ಪದ್ಮಪ್ಪ ಗೌಡ ಸಂಪ್ಯಾಡಿ, ನಿವೃತ್ತ ಸಹಾಯಕ ಪೊಲೀಸ್ ಉಪನಿರೀಕ್ಷಕ ಕುಶಾಲಪ್ಪ ಗೌಡ  ಪಲ್ಲಡ್ಕ, ಕಡಬ ಭೂಮಾಪನ ಇಲಾಖಾ ನಿವೃತ್ತ ಸಿಬ್ಬಂದಿ ಮೋನಪ್ಪ ಶೆಟ್ಟಿ ಅವರುಗಳನ್ನು ಸನ್ಮಾನಿಸಲಾಯಿತು.

 

ಪುಟಾಣಿಗಳಿಗೆ ನಡೆದ ಕೃಷ್ಣ ವೇಷ ಸ್ಪರ್ದೆ, ಜನ್ಮಾಷ್ಟಮಿ ಪ್ರಯುಕ್ತ ಸಾರ್ವಜನಿಕರಿಗೆ, ಶಾಲಾ ವಿದ್ಯಾರ್ಥಿಗಳಿಗೆ ನಡೆದ ವಿವಿಧ ಆಟೋಟ ಸ್ಪರ್ದೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕ್ರೀಡಾ ಕಾರ್ಯದರ್ಶಿ ಸುದೀಶ್ ಪಟ್ಟೆ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.  ಜತೆ ಕಾರ್ಯದರ್ಶಿಗಳಾದ  ದೀಕ್ಷಿತ್ ಪೂರಿಂಗ, ವಾಮನ ಬರಮೇಲು  ಸನ್ಮಾನಿತರನ್ನು ಪರಿಚಯಿಸಿದರು. ಕಾರ್ಯದರ್ಶಿ ವಿನೋದ್ ಪಲ್ಲಡ್ಕ ವರದಿ ವಾಚಿಸಿದರು.  ಕೃಷ್ಣಮೂರ್ತಿ ಕೆಮ್ಮಾರ ನಿರೂಪಿಸಿ, ಸ್ವಾಗತಿಸಿದರು. ಸಮಿತಿ ಸಂಚಾಲಕ ಪ್ರಕಾಶ್ ಕೆಮ್ಮಾರ ವಂದಿಸಿದರು.  ಬೆಳಿಗ್ಗೆ ಅಷ್ಟಮಿ ಕಟ್ಟೆಯಲ್ಲಿ ಆತೂರು ಶ್ರೀ ಸದಾಶಿವ ದೇವಸ್ಥಾನದ ಅರ್ಚಕ ವಿಷ್ಣುಮೂರ್ತಿ ಬಡೆಕ್ಕಿಲ್ಲಾಯ  ಪೂಜಾ ವಿಧಿ ವಿಧಾನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ ಸೇವೆ ನಡೆಯಿತು. ಚಾರ್ವಾಕ ಕಪಿಲೇಶ್ವರ ಕಲಾ ಸಮಿತಿ ವತಿಯಿಂದ ಎಸ್ ಆರ್ ಕೆ ಲ್ಯಾಡರ್ಸ್ ಪ್ರಾಯೋಜಕತ್ವದಲ್ಲಿ ಆಕರ್ಷಕ ಚೆಂಡೆ ಪ್ರದರ್ಶನ ನಡೆಯಿತು.

error: Content is protected !!
Scroll to Top