ಕಡಬಕ್ಕೆ ಇಂದಿರಾ ಕ್ಯಾಂಟೀನ್ ಮರೀಚಿಕೆ – ಕೆ.ಎಸ್.ಬಾಲಕೃಷ್ಣ ಕೊಯಿಲ

(ನ್ಯೂಸ್ ಕಡಬ) newsksdaba.com ಕಡಬ, ಸೆ. 04. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಹತ್ವಾಕಾಂಕ್ಷೆಯ ಯೋಜನೆ ಹಸಿದವರಿಗೆ ಅನ್ನ ನೀಡುವ ಇಂದಿರಾ ಕ್ಯಾಂಟೀನ್ ಕಡಬದಲ್ಲಿ ಪ್ರಾರಂಭವಾಗುವುದು ಮರೀಚಿಕೆಯಾಗಿದೆ.

ಸಿದ್ದರಾಮಯ್ಯನವರು ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಪ್ರಾರಂಭವಾದ ಇಂದಿರಾ ಕ್ಯಾಂಟೀನ್ ರಾಜ್ಯದ ನಗರ ಪ್ರದೇಶದಲ್ಲಿ ಕಾರ್ಯಾಚರಿಸಿತ್ತು. ಇದೀಗ ತಾಲೂಕು ಮಟ್ಟದಲ್ಲಿ ಮುಖ್ಯ ಪೇಟೆಗಳ ಭಾಗಗಳಿಗೂ ವಿಸ್ತರಣೆ  ಮಾಡಲಾಗುತ್ತಿದೆ. ರಾಜ್ಯದಲ್ಲಿ ಮತ್ತೆ 188 ಹೊಸ ಇಂದಿರಾ ಕ್ಯಾಂಟೀನ್‌ ಗಳನ್ನು ತೆರೆಯಲು  ಮುಖ್ಯಮಂತ್ರಿಗಳು ಹಸಿರು ನಿಶಾನೆ ಕೊಟ್ಟ ಬೆನ್ನಲ್ಲೇ  ಕಡಬದಲ್ಲೂ ಇಂದಿರಾ ಕ್ಯಾಂಟೀನ್ ಪ್ರಾರಂಭಿಸುವ ಹಿನ್ನೆಲೆಯಲ್ಲಿ ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಗುರುತಿಸಿದ ಸ್ಥಳವನ್ನು ತಿರಸ್ಕರಿಸಲಾಗಿದೆ.

ಮಹಾನಗರಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲವೆಡೆ  ಕ್ಯಾಂಟೀನ್ ಕಾರ್ಯಾರಂಭ ಮಾಡುವ ಪ್ರಕ್ರಿಯೆಗಳು ಪ್ರಾರಂಭವಾಗಿದ್ದು, ಹೊಸ ತಾಲೂಕು ಆಗಿರುವ  ಕಡಬದಲ್ಲಿಯೂ ಇಂದಿರಾ ಕ್ಯಾಂಟೀನ್ ಪ್ರಾರಂಭಿಸುದಕ್ಕಾಗಿ ಕಡಬದ ಎ.ಪಿ.ಎಂ.ಸಿ ಪ್ರಾಂಗಣದ ಬಳಿ ಸ್ಥಳ ನಿಗದಿಪಡಿಸಿ ಪಹಣಿ ಕೂಡಾ ಮಾಡಲಾಗಿತ್ತು. ಆದರೆ ಇದೀಗ ಆ ಸ್ಥಳ ಸೂಕ್ತವಲ್ಲ, ಅಲ್ಲಿ ಮೆಷಿನ್ ಗಳನ್ನು ಸರಿಯಾಗಿ ಇಡಲು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾ ನಗರಾಭಿವೃದ್ಧಿಕೋಶದ ಇಂಜಿನಿಯರ್ ವರದಿ ನೀಡಿರುವುದರಿಂದ ಇಂದಿರಾ ಕ್ಯಾಂಟೀನ್‌ಗೆ ಹಿನ್ನೆಡೆಯಾಗಿದೆ.

ಕಡಬದ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿರುವ ಎಪಿಎಂಸಿ ಪ್ರಾಂಗಣದ ಬಳಿ ಇಂದಿರಾ ಕ್ಯಾಂಟೀನ್‌ಗಾಗಿ ಈಗಾಗಲೇ ಕಂದಾಯ ಇಲಾಖೆ 5.5  ಸೆಂಟ್ಸ್ ಜಾಗವನ್ನು ಕಾದಿರಿಸಿದೆ. ಕ್ಯಾಂಟೀನ್ ಆರಂಭಿಸಲು ಉದ್ದೇಶಿಸಿರುವ ಜಾಗದ ಆಸುಪಾಸಿನಲ್ಲಿಯೇ ತಾಲೂಕು ಕಚೇರಿ ಹಾಗೂ ಎಪಿಎಂಸಿ ಪ್ರಾಂಗಣ ಇದೆ. ಮುಂದೆ ನ್ಯಾಯಾಲಯ, ಉಪ ನೋಂದಣಾಧಿಕಾರಿಗಳ ಕಚೇರಿಗಳೂ ಕೂಡ ಅದೇ ಪರಿಸರದಲ್ಲಿ ಆರಂಭಗೊಳ್ಳಲಿರುವುದರಿಂದ ಈ ಪ್ರದೇಶ ಜನನಿಬಿಡವಾಗಲಿದೆ. ಇದೇ ಕಾರಣಕ್ಕೆ ಇಂದಿರಾ ಕ್ಯಾಂಟೀನ್ ಇಲ್ಲೇ ತೆರೆಯುವುದು ಸೂಕ್ತ ಎಂದು ನಿರ್ಧರಿಸಲಾಗಿದ್ದರೂ ಅದಕ್ಕೆ ಈಗ ಬ್ರೇಕ್ ಬಿದ್ದಿದೆ. ಇದೀಗ ಕಡಬ ಸಮುದಾಯ ಆರೋಗ್ಯ ಕೇಂದ್ರ ಬಳಿಯಿದ್ದ ಪ್ರವಾಸಿ ಮಂದಿರದ ಸ್ಥಳವನ್ನು ಗುರುತಿಸಿ  ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೆಶಕರಿಗೆ ವರದಿ ನೀಡಲಾಗಿದ್ದರೂ ಅದಕ್ಕೂ ಆಕ್ಷೇಪವಿದ್ದು ಅದೂ ಕೈಗೂಡುವಂತೆ ಕಾಣುತ್ತಿಲ್ಲ. ಆದರೆ ಬದಲಿ ಜಾಗ ಈವರೆಗೆ ಗುರುತಿಸಲು ಸಾಧ್ಯವಾಗಿಲ್ಲ. ಹಾಗಾಗಿ ಇಂದಿರಾ ಕ್ಯಾಂಟೀನ್ ಪ್ರಾರಂಭವಾಗುತ್ತದೆ ಎಂದು ಬಹು ನಿರೀಕ್ಷೆಯಲ್ಲಿದ್ದ ಕಡಬದ ಜನತೆಗೆ ನಿರಾಸೆಯಾಗಿದೆ.

Also Read  ಅಪರಿಚಿತ ವ್ಯಕ್ತಿಯ ವಾರಸುದಾರರ ಪತ್ತೆಗೆ ಮನವಿ

ಇತ್ತೀಚೆಗೆ ಕಡಬದಲ್ಲಿ ನಡೆದ ಜನತಾ ದರ್ಶನದಲ್ಲಿ ಇಂದಿರಾ ಕ್ಯಾಂಟಿನ್ ಪ್ರಾರಂಭಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಲಾಗಿದೆ,  ಇದಕ್ಕೂ ಈವರೆಗೆ ಯಾವುದೇ ಸ್ಪಂದನೆ ದೊರೆತಿಲ್ಲ. ಈಗಾಗಲೇ ರಾಜ್ಯದಲ್ಲಿ ಹೆಚ್ಚುವರಿಯಾಗಿ ಘೋಷಣೆ ಮಾಡಿದ ಇಂದಿರಾ ಕ್ಯಾಂಟೀನ್ ಪಟ್ಟಿಯಲ್ಲಿ ಕೂಡಾ ಕಡಬದ ಹೆಸರಿಲ್ಲ.

ಇಂದಿರಾ ಕ್ಯಾಂಟೀನ್ ತೆರೆಯಲು ಈಗಾಗಲೇ ನಿಗದಿಪಡಿಸಿದ ಜಾಗವನ್ನು ಸೂಕ್ತವಲ್ಲ ಎಂದು ಜಿಲ್ಲಾ ನಗರಾಭಿವೃದ್ಧಿಕೋಶ ತಿರಸ್ಕರಿಸಿದೆ, ಸಮುದಾಯ ಆರೋಗ್ಯ ಕೇಂದ್ರ ಬಳಿ ಇರುವ ಜಾಗವನ್ನು ತೋರಿಸಲಾಗಿದೆ. ಅದಕ್ಕೂ ಆಕ್ಷೆಪವಿದೆ, ಕಡಬ ತಹಸೀಲ್ದಾರ್ ಅವರಿಗೆ ಸೂಕ್ತ ಜಾಗ ನೀಡುವಂತೆ ಮನವಿ ಮಾಡಲಾಗಿದೆ. ತಾಲೂಕು ಕೇಂದ್ರವಾಗಿರುವುದರಿಂದ ಇಲ್ಲಿ ಅಗತ್ಯವಾಗಿ ಇಂದಿರಾ ಕ್ಯಾಂಟೀನ್ ತೆರೆಯಬೇಕೆಂದು ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಲಾಗಿದೆ.

Also Read  ರಾಷ್ಟ್ರೀಯ ದಂತ ವೈದ್ಯರ ದಿನ ► ಭಾರತ ದೇಶ ಕಂಡ ಮಹಾನ್ ದಂತ ವೈದ್ಯ ಡಾ|| ರಫಿಯುದ್ದೀನ್ ಅಹ್ಮದ್

ಲೀಲಾವತಿ ಇ.

ಮುಖ್ಯಾಧಿಕಾರಿಗಳು, ಪಟ್ಟಣ ಪಂಚಾಯತ್, ಕಡಬ

 

ಕಡಬದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ಈಗಾಲೇ ಎ.ಪಿ.ಎಂ.ಸಿ ಕಟ್ಟಡ ಬಳಿ ನಿಗದಿಪಡಿಸಿದ ಜಾಗವೇ ಸೂಕ್ತವಾಗಿದೆ, ಬೇರೆ ತಾಲೂಕುಗಳಲ್ಲಿ ಐದು ಸೆಂಟ್ಸ್ ಒಳಗಿನ ಜಾಗಗಲ್ಲಿ ಇಂದಿರಾ ಕ್ಯಾಂಟೀನ್ ತೆರೆದು ಕಾರ್ಯಾಚರಿಸುತ್ತಿದೆ. ಹಾಗಾಗಿ ಅಧಿಕಾರಿಗಳು ತಮ್ಮ ನಿರ್ಧಾರವನ್ನು ಮರುಪರಿಶೀಲಿಸಿ ಕ್ರಮಕೈಗೊಳ್ಳಬೇಕು.  ಈಗ ನಿಗದಿಪಡಿಸಿದ ಜಾಗದಲ್ಲೇ ಇಂದಿರಾ ಕ್ಯಾಂಟೀನ್ ತೆರೆಯಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಲಾಗುವುದು. 

ಪಿ.ಪಿ,ವರ್ಗೀಸ್.

ಸದಸ್ಯರು, ಅಕ್ರಮ ಸಕ್ರಮ ಸಮಿತಿ , ಸುಳ್ಯ ವಿಧಾನಸಭಾ ಕ್ಷೇತ್ರ

error: Content is protected !!
Scroll to Top