(ನ್ಯೂಸ್ ಕಡಬ) newsksdaba.com ಬೆಳ್ತಂಗಡಿ, ಸೆ. 04. ಗ್ರಾಮಸಭೆಯೊಂದರಲ್ಲಿ ನಡೆದ ಹೊಡೆದಾಟಕ್ಕೆ ಸಂಬಂಧಿಸಿದಂತೆ ಎರಡು ತಂಡಗಳ ವಿರುದ್ದ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಬಗ್ಗೆ ತಾಲೂಕಿನ ಶಿರ್ಲಾಲು ಎಂಬಲ್ಲಿಂದ ವರದಿಯಾಗಿದೆ.
ಆನಂದ ಪೂಜಾರಿ ಎಂಬವರು ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಗ್ರಾಮಸಭೆಯಲ್ಲಿ ಕುಶಾಲಪ್ಪ ಗೌಡ ಮತ್ತು ನವೀನ್ ಎಂಬವರ ನಡುವೆ ದೇವಸ್ಥಾನದ ಹಣದ ವಿಚಾರವಾಗಿ ಮಾತಿಗೆ ಮಾತು ಬೆಳೆದಿದೆ. ಈ ಸಂದರ್ಭ ಆನಂದ ಪೂಜಾರಿ ಎಂಬವರು ಇದನ್ನು ಆಕ್ಷೇಪಿಸಿದ್ದು, ಅವರ ಮೇಲೆ ನವೀನ್ ಸಾಲ್ಯಾನ್, ರಾಮ್ ಕುಮಾರ್, ರವೀಂದ್ರ, ದಿನೇಶ್ ಹಾಗೂ ಪುರುಷೋತ್ತಮ ಅವರು ಅವಾಚ್ಯವಾಗಿ ಬೈದು ಹಲ್ಲೆ ನಡೆಸಿದ್ದಾರೆ. ಇದಲ್ಲದೆ ಗಲಾಟೆ ತಡೆಯಲು ಬಂದ ಮಹಿಳೆಯೊಬ್ಬರಿಗೆ ಪುರುಷೋತ್ತಮ ಕೈಯಿಂದ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದೇ ಘಟನೆಗೆ ಸಂಬಂಧಿಸಿದಂತೆ ರವೀಂದ್ರ ಎಂಬವರು ದೂರು ನೀಡಿದ್ದು, ತನಗೆ ಹಾಗೂ ರಾಮ್ ಕುಮಾರ್ ಅವರಿಗೆ ಕುಶಾಲಪ್ಪ ಗೌಡ ಹಾಗೂ ಆನಂದ ಪೂಜಾರಿ ಅವರು ಅವಾಚ್ಯವಾಗಿ ಬೈದು ಹಲ್ಲೆ ನಡೆಸಿರುವುದಾಗಿ ಪ್ರತಿದೂರು ನೀಡಿದ್ದಾರೆ. ಎರಡೂ ದೂರುಗಳನ್ನು ಸ್ವೀಕರಿಸಿರುವ ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.