ಗಣೇಶ ಚತುರ್ಥಿ ಆಚರಣೆ- ಮಾರ್ಗಸೂಚಿ ಹೊರಡಿಸಿದ ಜಿಲ್ಲಾಡಳಿತ

(ನ್ಯೂಸ್ ಕಡಬ) newsksdaba.com ಮಂಗಳೂರು, ಸೆ. 04. ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 6 ರಿಂದ 13ರ ವರೆಗೆ  ಒಟ್ಟು 221 ಕಡೆಗಳಲ್ಲಿ ಸಾರ್ವಜನಿಕ ಗಣೇಶ ಮಹೋತ್ಸವವನ್ನು ಆಚರಣೆ ಹಮ್ಮಿಕೊಳ್ಳಲಾಗಿದೆ.

ಸೆಪ್ಟೆಂಬರ್ 15 ಮತ್ತು 16ರಂದು ಮುಸ್ಲಿಂ ಸಮುದಾಯದವರ ಈದ್ ಮಿಲಾದ್ ಹಬ್ಬವನ್ನು ಆಚರಿಸಲಿದ್ದು, ಹಬ್ಬಗಳನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸುವ  ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಗೆ ಸಂಬಂಧಿಸಿದಂತೆ ಎಲ್ಲ ಧರ್ಮದ ಹಿರಿಯ ಮುಖಂಡರೊಂದಿಗೆ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಶಾಂತಿ ಸಭೆ ನಡೆಯಿತು. ಸಭೆಯಲ್ಲಿ ಧಾರ್ಮಿಕ ಮುಖಂಡರು, ಆಯೋಜಕರು, ಗೌರಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಆಚರಣೆಯ ಪ್ರಯುಕ್ತ ಆಚರಿಸಬೇಕಾದ ನಿಯಮಗಳ ಬಗ್ಗೆ ಸೂಚನೆಗಳನ್ನು ನೀಡಲಾಯಿತು.

ಗಣಪತಿ ಉತ್ಸವದ ಕಾರ್ಯಕ್ರಮಗಳ ಆಯೋಜಕರಿಗೆ ಸೂಚನೆಗಳು :
ಪ್ರತಿಷ್ಠಾಪನೆಯ ಮೊದಲು ಮೆಸ್ಕಾಂ, ಅಗ್ನಿಶಾಮಕ ನಿಗಮ, ಸ್ಥಳೀಯ ಸಂಸ್ಥೆಗಳಿಂದ ಅನುಮತಿಯನ್ನು ಪಡೆದುಕೊಳ್ಳಬೇಕು. ಗಣಪತಿ ವಿಗ್ರಹ ಪ್ರತಿಷ್ಠಾಪನೆಯ ಸ್ಥಳದ ಮಾಲೀಕರ ಅನುಮತಿಯನ್ನು ಪಡೆದುಕೊಳ್ಳಬೇಕು. ಗಣೇಶ ಪೆಂಡಾಲುಗಳನ್ನು ಹಾಕುವಾಗ ಭದ್ರವಾಗಿ ಸುರಕ್ಷಿತವಾಗಿ ಹಾಕಲು ವ್ಯವಸ್ಥೆ ಮಾಡಬೇಕು ಮತ್ತು ಪೆಂಡಾಲ್‍ಗಳು ಮಳೆ, ಗಾಳಿ ಬೆಂಕಿಗಳಿಂದ ಸುರಕ್ಷಿತವಾಗಿರುವಂತೆ ನಿಗಾ ವಹಿಸಲು ಸೂಚಿಸಲಾಗಿದೆ. ಗಣೇಶ ಮಂಟಪದೊಳಗೆ ದೀಪ ಇಡುವ ಸ್ಥಳದ ಬಳಿ ಬೆಂಕಿಯನ್ನು ಸ್ಪರ್ಶಿಸುವಂತಹ ವಸ್ತುಗಳನ್ನು ಇಡಬಾರದು. ಬೆಂಕಿ ಆಕಸ್ಮಿಕದಿಂದ ಅವಘಡ ತಡೆಗಟ್ಟುವ ಸಲುವಾಗಿ ಅಗ್ನಿನಂದನ ಸಲಕರಣೆಗಳಾದ ಮರಳು ಮತ್ತು ನೀರು ತುಂಬಿದ ಬಕೆಟ್ ಗಳು, ಫೈರ್ ಎಕ್ಸಿಂಗ್ಯೂಷನ್ ಅನ್ನು ಇಟ್ಟುಕೊಳ್ಳಬೇಕು. ವೇದಿಕೆಯ ಮೇಲೆ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವವರ ಪ್ರಮುಖರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ವಿವರವಾದ ಪಟ್ಟಿಯನ್ನು ಮುಂಚಿತವಾಗಿ ಪೊಲೀಸ್ ಠಾಣೆಗೆ ನೀಡಬೇಕು. ಕಾರ್ಯಕ್ರಮಕ್ಕೆ ಸಂಬಂಧಿಸಿದ ಸಾರ್ವಜನಿಕ ಸ್ಥಳದಲ್ಲಿ ಪ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ಅಳವಡಿಸುವ ಪೂರ್ವದಲ್ಲಿ ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರದಿಂದ ಕಡ್ಡಾಯವಾಗಿ ಅನುಮತಿಯನ್ನು ಪಡೆದುಕೊಳ್ಳಬೇಕು. ಕಾರ್ಯಕ್ರಮಕ್ಕೆ ಸಂಬಂಧಿಸಿದ ಅಳವಡಿಸುವ ಪ್ಲೆಕ್ಸ್ ಬ್ಯಾನರ್‍ ಗಳಲ್ಲಿ ಯಾವುದೇ ಪ್ರಚೋದನಾತ್ಮಕ ಬರಹಗಳು, ಚಿತ್ರಗಳನ್ನು ಬಳಸಬಾರದು. ಯಾವುದೇ ಧರ್ಮ ಸಮುದಾಯದ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವಂತಹ ಟ್ಯಾಬ್ಲೋ ನೃತ್ಯರೂಪಕ ಇರಬಾರದು. ಗುಂಡುಮದ್ದು ಬಳಸುವಾಗ ಆಸ್ಪತ್ರೆಗಳ ಬಳಿ, ಜನಸಂದಣಿಯ ಮಧ್ಯೆ ಬಳಸಬಾರದು ಹಾಗೂ ರಾತ್ರಿ 10 ಗಂಟೆಯ ನಂತರ ಸುಡುಮದ್ದು ಪಟಾಕಿಗಳನ್ನು ಬಳಸುವಂತಿಲ್ಲ.

Also Read  ಕೊರೊನಾ ಅಟ್ಟಹಾಸ ➤ ನಾಳೆಯಿಂದ (ಜುಲೈ 5 ರಿಂದ) ಜುವ್ಯೆಲ್ಲರಿ ಶಾಪ್ ಕ್ಲೋಸ್

ಬ್ಯಾನರ್‍ ಗಳು ಹಾಗೂ ಕಟೌಟ್‍ ಗಳನ್ನು ಅಳವಡಿಸುವ ಸ್ಥಳಗಳು ಯಾವುದೇ ಸಂಚಾರ ದಟ್ಟಣೆ ಅಥವಾ ಸಾರ್ವಜನಿಕ ತೊಂದರೆಗೆ ಕಾರಣವಾಗದಂತೆ ನೋಡಿಕೊಳ್ಳಬೇಕು. ಗಣೇಶ ವಿಸರ್ಜನೆಯ ದಿನಾಂಕ, ವೇಳೆ, ಮಾರ್ಗ ಮುಂತಾದ ವಿವರಗಳನ್ನು ಮುಂಚಿತವಾಗಿ ಸಂಬಂಧಿಸಿದ ಠಾಣಾಧಿಕಾರಿ ಮತ್ತು ಡಿವೈಎಸ್‍ಪಿ ಅವರಿಗೆ ನೀಡಿ ಮಂಜೂರಾತಿ ಪಡೆದುಕೊಳ್ಳಬೇಕು. ಪೊಲಿಸ್ ಇಲಾಖೆಯಿಂದ ಅಂತಿಮಗೊಳಿಸಲಾದ ಮಾರ್ಗದಲ್ಲಿ ಮಾತ್ರ ಮೆರವಣಿಗೆ ಸಾಗಬೇಕು. ವಿಸರ್ಜನ ಮೆರವಣಿಗೆ ಸಮಯದಲ್ಲಿ ಇತರ ಧರ್ಮಗಳ ವಿರುದ್ಧ ಪ್ರಚೋದನಕಾರಿ ಘೋಷಣೆಯನ್ನು ಕೂಗಬಾರದು. ಕಾರ್ಯಕ್ರಮ ಸ್ಥಳಗಳಲ್ಲಿ ಆಯೋಜಕರು ಸಾರ್ವಜನಿಕರಿಗೆ ಪ್ರತ್ಯೇಕವಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳಬೇಕು. ಸೂಕ್ತ ಪಾರ್ಕಿಂಗ್ ವ್ಯವಸ್ಥೆಗೆ ತಮ್ಮ ಸಂಘದ ವತಿಯಿಂದ ಸ್ವಯಂಸೇವಕರನ್ನು ನೇಮಿಸಿ ಕಾರ್ಯಕ್ರಮ ಸ್ಥಳಗಳಲ್ಲಿ ಸುಗಮ ಸಂಚಾರಿ ವ್ಯವಸ್ಥೆಗೆ ಅಡೆತಡೆ ಉಂಟಾಗದಂತೆ ನೋಡಿಕೊಳ್ಳಬೇಕು. ಸ್ಥಳದ ಮಾಲೀಕರ ಅನುಮತಿಯನ್ನು ಪಡೆದುಕೊಳ್ಳಬೇಕು. ಆಯೋಜಕರು ತುರ್ತು ಸಂದರ್ಭದಲ್ಲಿ ಬಳಸಲು ಅನುಕೂಲಕರವಾಗುವಂತೆ ಮೆರವಣಿಗೆಯಲ್ಲಿ ಒಂದು ಸುಸಜ್ಜಿತ ಆಂಬುಲೆನ್ಸ್ ವ್ಯವಸ್ಥೆಗೊಳಿಸಬೇಕು.

Also Read  'ಅಮ್ಮ ಉತ್ತಮ, ಇಂದಿರಾ ಅತ್ಯುತ್ತಮ' ► ಇಂದಿರಾ ಕ್ಯಾಂಟೀನ್ ಗೆ ಬ್ರಿಟಿಷ್ ಸುದ್ದಿವಾಹಿನಿ BBC ಯಿಂದ ಶಹಬ್ಬಾಸ್ ಗಿರಿ

ಫಿಟ್ನೆಸ್ ಸರ್ಟಿಫಿಕೇಟ್, ಇನ್ಶುರೆನ್ಸ್ ಸರ್ಟಿಫಿಕೇಟ್ ಹಾಗೂ ಡಿಎಲ್ ಹೊಂದಿರುವ ಚಾಲಕ ಇರುವ ವಾಹನಗಳಲ್ಲಿ ಮಾತ್ರ ಸ್ತಬ್ಧ ಚಿತ್ರವನ್ನು ಅಳವಡಿಸಲು ಉಪಯೋಗಿಸಬೇಕು. ಕಾರ್ಯಕ್ರಮ, ಮೆರವಣಿಗೆ ಸಮಯದಲ್ಲಿ ಸ್ವಯಂಸೇವಕರಿಗೆ ಒಂದೇ ರೀತಿಯ ಬಣ್ಣದ ಉಡುಪು ನೀಡಬೇಕು. ಸ್ವಯಂಸೇವಕರನ್ನು ಗುಂಪುಗಳನ್ನಾಗಿ ವಿಂಗಡಿಸಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ನಿಯೋಜಿಸಿ ಮೆರವಣಿಗೆ ಸುಲಲಿತವಾಗಿ ಸಾಗುವಂತೆ ಮಾಡಬೇಕು. ಕಾರ್ಯಕ್ರಮಕ್ಕೆ ಬರುವ ಜನರ ವಾಹನ ಪಾರ್ಕಿಂಗ್ ಗೆ ಸ್ಥಳ ಗುರುತಿಸುವುದು, ಮೆರವಣಿಗೆ ಹಾದುಹೋಗುವ ರಸ್ತೆಯಲ್ಲಿ ವಾಹನ ನಿಲುಗಡೆಯಾಗದಂತೆ ಸ್ವಯಂಸೇವಕರನ್ನು ನಿಯೋಜಿಸಬೇಕು. ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಬಂದೋಬಸ್ತ್ ಕರ್ತವ್ಯದಲ್ಲಿ ಇರುವ ಪೊಲೀಸ್ ಅಧಿಕಾರಿಗಳ ಸೂಚನೆಗಳನ್ನು ಪಾಲಿಸಬೇಕು ಮತ್ತು ಪೊಲೀಸರೊಂದಿಗೆ ಸಂಘಟಕರು ಸಹಕರಿಸಬೇಕು. ಸ್ತಬ್ಧ ಚಿತ್ರಗಳಲ್ಲಿ, ಕಾರ್ಯಕ್ರಮ ಸ್ಥಳಗಳಲ್ಲಿ ಧ್ವನಿವರ್ಧಕವನ್ನು ಅಳವಡಿಸುವ ಮೊದಲು ಪೊಲೀಸ್ ಇಲಾಖೆಯಿಂದ ಪಡೆಯಲಾದ ಪರವಾನಿಗೆಯನ್ನು ಪರಿಶೀಲಿಸಿ ಅನುಮತಿ ಇದ್ದಲ್ಲಿ ಮಾತ್ರ ಧ್ವನಿವರ್ಧಕವನ್ನು ಅಳವಡಿಸಬೇಕು. ಪೊಲೀಸ್ ಇಲಾಖೆಯಿಂದ ನೀಡಲಾದ ಪರವಾನಿಗೆಯಲ್ಲಿ ನಿಗದಿಪಡಿಸಿದ ಸಮಯದವರೆಗೆ ಮಾತ್ರ ಧ್ವನಿವರ್ಧಕವನ್ನು ಬಳಸುವುದು. ಡಿಜೆ ಬಳಸಲು ಅವಕಾಶ ಇರುವುದಿಲ್ಲ. ಆಸ್ಪತ್ರೆ ಶಿಕ್ಷಣ ಸಂಸ್ಥೆಗಳ ಬಳಿ ಧ್ವನಿವರ್ಧಕ ಅಳವಡಿಸಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top