(ನ್ಯೂಸ್ ಕಡಬ) newskadaba.com ಕಡಬ, ಸೆ. 03. ಕಡಬ ವಲಯ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಕಬಡ್ಡಿ ಪಂದ್ಯಾಟವು ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯ ಕ್ರೀಡಾಂಗಣದಲ್ಲಿ ಮಂಗಳವಾರದಂದು ನಡೆಯಿತು.
ಕಡಬದ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯ ಆತಿಥ್ಯದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಆಶ್ರಯದಲ್ಲಿ ಕಡಬದ ಸೈಂಟ್ ಜೋಕಿಮ್ ಸಭಾಂಗಣದಲ್ಲಿ ಜರಗಿದ ಕಡಬ ಪ್ರಾಥಮಿಕ ವಲಯ ಮಟ್ಟದ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದ ಸಂತ ಫಿಲೋಮಿನಾ ಶಾಲೆ ಉಪ್ಪಿನಂಗಡಿ ಇಲ್ಲಿನ ನಿವೃತ್ತ ಮುಖ್ಯ ಗುರುಗಳಾದ ಶ್ರೀಯುತ ವಿನ್ಸೆಂಟ್ ಫೆರ್ನಾಂಡಿಸ್, ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡೆ ಮಾತ್ರವಲ್ಲದೇ ಸೌಹಾರ್ದ ಸಹಬಾಳ್ವೆಯನ್ನು ಬೆಳೆಸುವಂತಹ ಶಿಕ್ಷಣವನ್ನು ನೀಡಬೇಕು. ಮಕ್ಕಳಿಗೆ ಆ ಕುಲ ಈ ಕುಲ ಎಂದು ತಿಳಿಸದೆ ನಾವೆಲ್ಲಾ ಒಂದೇ ಮಾನವ ಕುಲ ಎಂಬುದನ್ನು ಬೋಧಿಸಬೇಕು. ಮಕ್ಕಳು ಇಂದಿನ ಆರೋಗ್ಯದ ಪರಿಸ್ಥಿತಿಯಲ್ಲಿ ಆದಷ್ಟು ತಮ್ಮನ್ನು ತಾವು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಕಡಬ ತಾಲೂಕು ಪ್ರಾಥಮಿಕ ವಿಭಾಗದ ದೈಹಿಕ ಶಿಕ್ಷಣ ನೋಡಲ್ ಅಧಿಕಾರಿ ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ, ಪಂದ್ಯಾಟ ಆಯೋಜಕರಿಗೆ ಅಭಿನಂದಿಸಿ ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು. ಕಡಬ ತಾಲೂಕು ಪ್ರೌಢಾಶಾಲಾ ವಿಭಾಗದ ದೈಹಿಕ ಶಿಕ್ಷಣ ನೋಡಲ್ ಅಧಿಕಾರಿ ಲೋಕೇಶ್ ಮಾತನಾಡಿ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ವಿದ್ಯಾ ಸಂಸ್ಥೆಯ ಸಂಚಾಲಕರು ವಂದನೀಯ ಪ್ರಕಾಶ್ ಪೌಲ್ ಡಿಸೋಜಾ ಕ್ರೀಡಾ ಸ್ಪರ್ಧೆಗಳು ಸೋಲು ಗೆಲುವನ್ನು ಸಮಚಿತ್ತದಿಂದ ಸ್ವೀಕರಿಸುವಂತೆ ಸಿದ್ಧಗೊಳಿಸುತ್ತದೆ ಎಂದು ಹೇಳಿದರು. ವೇದಿಕೆಯಲ್ಲಿ ಶ್ರೀ ಗಣೇಶ್ ನಡವಳ್ ಪ್ರಭಾರ ಸಿ. ಆರ್. ಪಿ. ಕಡಬ ವಲಯ, ಶ್ರೀ ಗಿರಿಧರ್ ರೈ ಉಪಾಧ್ಯಕ್ಷರು ಶಿಕ್ಷಕ – ರಕ್ಷಕ ಸಂಘ ಸೈಂಟ್ ಆನ್ಸ್ ಶಾಲೆ, ಶ್ರೀ ಕಿರಣ್ ಕುಮಾರ್ ಪ್ರಾಂಶುಪಾಲರು ಸೈಂಟ್ ಜೋಕಿಮ್ ಪದವಿ ಪೂರ್ವ ಕಾಲೇಜು, ಶ್ರೀಮತಿ ಶ್ರೀಲತಾ ಸೈಂಟ್ ಜೋಕಿಮ್ ಪ್ರೌಢಶಾಲೆ, ಶ್ರೀಮತಿ ದಕ್ಷ ಸೈಂಟ್ ಆನ್ಸ್ ಪ್ರಾಥಮಿಕ ಶಾಲೆ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ಸಂಚಾಲಕರು ಎಲ್ಲಾ ದೈಹಿಕ ಶಿಕ್ಷಕರಿಗೆ ಹೂ ನೀಡಿ ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಸೈಂಟ್ ಆನ್ಸ್ ಶಾಲೆಯ ಪ್ರಾಂಶುಪಾಲರಾದ ವಂದನೀಯ ಅಮಿತ್ ಪ್ರಕಾಶ್ ರೋಡ್ರಿಗಸ್ ಸ್ವಾಗತಿಸಿ, ದೈಹಿಕ ಶಿಕ್ಷಕಿ ಶ್ರೀಮತಿ ಸುಪ್ರಿಯಾ ವಂದಿಸಿದರು. ಕಾರ್ಯಕ್ರಮವನ್ನು ಶಿಕ್ಷಕಿ ಲೋಲಾಕ್ಷಿ ನಿರೂಪಿಸಿದರು.