(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 02. ಮುಂಬರುವ ಗಣೇಶ್ ಚತುರ್ಥಿ ಪ್ರಯುಕ್ತ ಪ್ಲಾಸ್ಟರ್ ಆಫ್ ಪ್ಯಾರೀಸ್ ನಿಷೇಧ ಮಾಡಲಾಗಿರುವುದರಿಂದ ಯಾರಾದರೂ ಪಿಓಪಿ ಗಣೇಶ ಮಾರಾಟ ಮಾಡಿದ್ರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮತ್ತೊಮೆ ಎಚ್ಚರಿಸಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಸಾಯನಿಕ ಹಾಗೂ ಥರ್ಮಾಕೋಲ್ ನಿಂದ ಪ್ರಕೃತಿಗೆ ಹಾನಿಯುಂಟಾಗುವ ಹಿನ್ನೆಲೆ ನಗರದಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್ ಬಳಕೆ ನಿಷೇಧಿಸಲಾಗಿದೆ. ಹೀಗಾಗಿ ಯಾರು ಕೂಡಾ ಪಿಒಪಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡಬಾರದು. ಸಾರ್ವಜನಿಕರು ಕೂಡ ಪಿಓಪಿ ಗಣೇಶ ಮೂರ್ತಿಗಳನ್ನು ಖರೀದಿಸುವ ಬದಲು ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಸಹಕರಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
2015ರಲ್ಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಪಿಓಪಿ ಗಣೇಶನನ್ನು ಬ್ಯಾನ್ ಮಾಡಲಾಗಿದ್ದರೂ ಕೆಲವು ಪ್ರದೇಶಗಳಲ್ಲಿ ಪಿಓಪಿ ಮೂರ್ತಿಗಳನ್ನು ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆ ಎಚ್ಚರಿಕೆ ನೀಡಿರುವ ಅವರು, ನಗರದಲ್ಲಿ ಯಾವ ಮೂಲೆಯಲ್ಲಾದರೂ ಪಿಓಪಿ ಗಣೇಶಮೂರ್ತಿಗಳನ್ನು ಮಾರಾಟ ಮಾಡುವುದು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಹೀಗಾಗಿ ನಗರದ ಪ್ರತಿ ವಲಯಕ್ಕೆ ಒಬ್ಬೊಬ್ಬರು ನೂಡಲ್ ಅಧಿಕಾರಿ ನೇಮಕ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಎಲ್ಲಾದರೂ ಪಿಓಪಿ ಗಣೇಶ ಮಾರಾಟ ಕಂಡು ಬಂದಲ್ಲಿ ಅಗ್ನಿ ಶಾಮಕ ಹಾಗೂ ಬೆಸ್ಕಾಂನ ನೋಡಲ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವಶಕ್ಕೆ ಪಡೆದು ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಹಾಗೂ ವಶಕ್ಕೆ ಪಡೆದ ವಸ್ತುಗಳನ್ನು ನಿಯಮಾನುಸಾರ ವಿಲೇವಾರಿ ಮಾಡುವಂತೆ ಸೂಚಿಸಲಾಗಿದೆ.