(ನ್ಯೂಸ್ ಕಡಬ) newskadaba.com ಉಡುಪಿ, ಆ. 31. ಆನ್‌ಲೈನ್ ವಂಚಕರು ಹಿಂದಿ, ಆಂಗ್ಲ ಭಾಷೆಯಲ್ಲಿ ವ್ಯವಹರಿಸುತ್ತಾರೆ. ಆದ್ದರಿಂದ ಅಂತಹ ಕರೆ ಬಂದರೆ ಕನ್ನಡದಲ್ಲಿ ಉತ್ತರಿಸಿದರೆ ವಂಚನೆಯಿಂದ ಪಾರಾಗಬಹುದು ಎಂದು ಹೇಳಲಾಗುತ್ತಿತ್ತು. ಆದರೆ ಆ ನಂಬಿಕೆ ಈಗ ಸುಳ್ಳಾಗಿದ್ದು, ಕಟಪಾಡಿಯ ವ್ಯಕ್ತಿಯೊಬ್ಬರಿಗೆ ಕನ್ನಡದಲ್ಲೇ ಕರೆ ಮಾಡಿದ ವ್ಯಕ್ತಿಯೊಬ್ಬ ವಂಚಿಸಲು ಯತ್ನಿಸಿದ್ದಾನೆ.
ಕಟಪಾಡಿಯ ಕಟ್ಟಡ ಸಾಮಗ್ರಿ ಸಾಗಾಟ ಲಾರಿ ಟೆಂಪೋ ಮಾಲಕರ ಸಂಘದ ಅಧ್ಯಕ್ಷ ಚಂದ್ರ ಪೂಜಾರಿ ಅವರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ವಕೀಲನೆಂದು ಪರಿಚಯಿಸಿಕೊಂಡಿದ್ದಾನೆ. ಕರೆ ಮಾಡಿದ ಆತ ‘ನಿಮ್ಮ ಸಾಲದ ಕಂತು ಬಾಕಿ ಇದ್ದು, ಕೇಸ್ ಆಗಿದೆ. ಕೋರ್ಟ್ ಗೆ ಹಾಜರಾಗಬೇಕು’ ಎಂದಿದ್ದಾನೆ. ಜೊತೆಗೆ ಸಾಲದ ಕಂತನ್ನು ಗೂಗಲ್ ಪೇ ಮಾಡುವಂತೆ ಒತ್ತಡ ಹಾಕಿದ್ದಾನೆ. ಇದು ವಂಚಕರ ಕರೆಯೆಂದು ಅರಿತ ಚಂದ್ರ ಪೂಜಾರಿ ಅವರು, ನನ್ನ ಸಾಲದ ಕಂತು ಬಾಕಿ ಇಲ್ಲ ಹಾಗೂ ಬಾಕಿ ಇದ್ದಲ್ಲಿ ಕಚೇರಿಗೇ ಬಂದು ಪಾವತಿಸುತ್ತೇನೆ. ನಂತರ ಚಂದ್ರು ತನ್ನ ವಾಹನಕ್ಕೆ ಸಾಲ ನೀಡಿದ ಕಂಪನಿಗೆ ಕರೆ ಮಾಡಿ ವಿಚಾರಿಸಿದಾಗ, ತಮ್ಮ ಕಚೇರಿಯಿಂದ ಯಾರೂ ಕರೆ ಮಾಡಿಲ್ಲ ಮತ್ತು ಅವರ ಸಾಲದ ಯಾವುದೇ ಕಂತು ಬಾಕಿ ಉಳಿದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.