(ನ್ಯೂಸ್ ಕಡಬ) newskadaba.com ಸವಣೂರು, ಫೆ.26. ಪದೇ ಪದೇ ಕಾಡುತ್ತಿರುವ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿ ಸವಣೂರು ಬಿಜೆಪಿ ಗ್ರಾಮ ಸಮಿತಿಯ ನೇತೃತ್ವದಲ್ಲಿ ಸವಣೂರು ಮೆಸ್ಕಾಂ ಸಬ್ ಸ್ಟೇಶನ್ ಎದುರುಗಡೆ ಪ್ರತಿಭಟನೆ ಮಾಡಿದ ಘಟನೆ ಸೋಮವಾರದಂದು ನಡೆದಿದೆ.
ರಾಜ್ಯ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಧಿಕ್ಕಾರ ಕೂಗಿ ಸಿಎಂ ಸಿದ್ದರಾಮಯ್ಯನವರ ಪ್ರತಿಕೃತಿ ರಚಿಸಿ ಬಳಿಕ ಸಬ್ ಸ್ಟೇಷನ್ ಸಮೀಪ ಪ್ರತಿಕೃತಿಗೆ ಬೆಂಕಿ ಕೊಟ್ಟು ದಹಿಸಿದರು. ಅನೇಕ ಭಾಗ್ಯಗಳೊಂದಿಗೆ ಚಿಮಿಣಿ ಭಾಗ್ಯವೂ ದೊರೆತಿದೆ ಎಂದು ಇದೇ ವೇಳೆ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿರುವುದರಿಂದ ಪಂಪ್ ಸೆಟ್ ಗಳು ಕೆಟ್ಟು ಹೋಗುತ್ತಿದ್ದು, ವಿದ್ಯಾರ್ಥಿಗಳಿಗೆ ಓದಲು ತೊಂದರೆಯಾಗುತ್ತಿದೆ. ಹೀಗಾಗಿ ಮೆಸ್ಕಾಂ ಅಧಿಕಾರಿಗಳು ತಕ್ಷಣವೇ ವಿದ್ಯುತ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ತಪ್ಪಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ರೂಪದ ಪ್ರತಿಭಟನೆಗೆ ಮುಂದಾಗಲಿದ್ದೇವೆ ಎಂದು ಎಚ್ಚರಿಸಿದರು. ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ, ಸವಣೂರು ಗ್ರಾಪಂ ಅಧ್ಯಕ್ಷೆ ಇಂದಿರಾ ಬಿ.ಕೆ., ಪ್ರಗತಿಪರ ಕೃಷಿಕ ಪ್ರವೀಣ್ ಕುಂಟ್ಯಾನ, ಪುತ್ತೂರು ಎಪಿಎಂಸಿ ನಿರ್ದೇಶಕ ದಿನೇಶ್ ಮೆದು, ಬೆಳಂದೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಧರ್ಮೆಂದ್ರ ಕಟ್ಟತ್ತಾರು, ಸವಣೂರು ಗ್ರಾಪಂ ಸದಸ್ಯ ಗಿರಿಶಂಕರ್ ಸುಲಾಯ, ಸಾಮಾಜಿಕ ಮುಂದಾಳು ಪ್ರಕಾಶ್ಚಂದ್ರ ರೈ ಮುಗೇರುಗುತ್ತು ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದರು.
ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ರಾಜೇಶ್ವರಿ ಕೆ., ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಪುಷ್ಪಾವತಿ ಕಳುವಾಜೆ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಕರುಣಾಕರ್ ಪುಜಾರಿ ಪಟ್ಟೆ, ನಿರ್ದೇಶಕ ತಾರಾನಾಥ ಕಾಯರ್ಗ, ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಧನಂಜಯ ಕೇನಾಜೆ, ಸವಣೂರು, ಬೆಳಂದೂರು, ಕಾಣಿಯೂರು ಗ್ರಾಪಂ ಸದಸ್ಯರು, ಪಕ್ಷದ ಕಾರ್ಯಕರ್ತರು ಹಾಗೂ ಹಲವು ಕೃಷಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.