(ನ್ಯೂಸ್ ಕಡಬ) newskadaba.com ಮಂಗಳೂರು, ಆ. 29. ಕಡಲನ್ನು ಸೇರುತ್ತಿರುವ ಮತ್ತು ಕಡಲ ತೀರವನ್ನು ಆವರಿಸಿರುವ ಪ್ಲಾಸ್ಟಿಕ್ ತ್ಯಾಜ್ಯ ಸಮುದ್ರವನ್ನು ಸೇರದಂತೆ ತಡೆಯುವ ಮತ್ತು ಪಶ್ಚಿಮಘಟ್ಟದ ಜೀವವೈವಿಧ್ಯ ಸಂರಕ್ಷಿಸುವ ನಿಟ್ಟಿನಲ್ಲಿ ರಾಜ್ಯದ 320-ಕಿಮೀ ಕರಾವಳಿ ಪ್ರದೇಶವನ್ನ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತಗೊಳಿಸಲು ವಿಶ್ವಬ್ಯಾಂಕ್ 840 ಕೋಟಿ ರೂಪಾಯಿಗಳ ಯೋಜನೆಗೆ ಅನುಮೋದನೆ ನೀಡಿದೆ.
ಕರ್ನಾಟಕ ಸ್ಟ್ರೆಥನಿಂಗ್ ಆಫ್ ಕೋಸ್ಟಲ್ ರೆಸಿಲಿಯನ್ಸ್ ಎಕಾನಮಿ (ಕೆ-ಶೋರ್) ಯೋಜನೆಯಡಿ ಅನುಮೋದನೆ ನೀಡಿದ್ದು ಅರಣ್ಯ, ಮೀನುಗಾರಿಕೆ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) ಇಲಾಖೆಗಳು ಮಾಲಿನ್ಯ ತಡೆದುಕೊಳ್ಳುವಂತೆ ಕರಾವಳಿಯ ಸಾಮರ್ಥ್ಯವನ್ನು ಸುಧಾರಿಸಲು ಮತ್ತು ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ವಿವಿಧ ಯೋಜನೆಗಳನ್ನು ಜಾರಿಗೆ ತರಲಿವೆ. ಈ ಯೋಜನೆಯು ಸಮುದ್ರ ಸವೆತ ಮತ್ತು ಸಮುದ್ರ ಸಂರಕ್ಷಣೆ ಮಾಡುವ ಉದ್ದೇಶ ಹೊಂದಿದೆ, ಇದು ಕರಾವಳಿಯುದ್ದಕ್ಕೂ ಆಲಿವ್ ರಿಡ್ಲಿ ಆಮೆಗಳು ಮತ್ತು ಡಾಲ್ಫಿನ್‌ಗಳ ಸಂರಕ್ಷಣೆಗೆ ಒತ್ತು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.