ಮಂಗಳೂರು: ಇಲೆಕ್ಟ್ರಿಕ್ ರಿಕ್ಷಾಗಳ ಸಂಚಾರಕ್ಕೆ ಅನುಮತಿ – ಆಟೋ ಚಾಲಕರಿಂದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 29. ಇಲೆಕ್ಟಿಕ ರಿಕ್ಷಾಗಳಿಗೆ ಜಿಲ್ಲೆಯಾದ್ಯಂತ ಸಂಚರಿಸಲು ಅನುಮತಿ ನೀಡಿರುವ ಆದೇಶವನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾ ಆಟೋರಿಕ್ಷಾ ಚಾಲಕರ ಮಾಲಕರ ಸಂಘಗಳ ಒಕ್ಕೂಟ ಮತ್ತು ಸಮಾನ ಮನಸ್ಕ ಆಟೋರಿಕ್ಷಾ ಚಾಲಕ ಮಾಲಕರ ಸಂಘಟನೆಗಳ ನೇತೃತ್ವದಲ್ಲಿ ನಗರದ ಅಂಬೇಡ್ಕರ್ ವೃತ್ತದಿಂದ ಕ್ಲಾಕ್ ಟವರ್ ವರೆಗೆ ಮೆರವಣಿಗೆ ನಡೆಸಿ, ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಿ ಮನವಿ ಸ್ವೀಕರಿಸುವಂತೆ ಒತ್ತಾಯಿಸಿ ಪ್ರತಿಭಟಿಸುತ್ತಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಚಲೋಗೆ ನಿರ್ಧರಿಸಿ ಮೆರವಣಿಗೆ ಆರಂಭಿಸಿದ ರಿಕ್ಷಾ ಚಾಲಕರನ್ನು ಕ್ಲಾಕ್ ಟವರ್ ಬಳಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ತಡೆದರು. ಈ ಸಂಧರ್ಭ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಮುಖಂಡ ಸುನಿಲ್ ಕುಮಾರ್ ಬಜಾಲ್, ಜಿಲ್ಲಾಧಿಕಾರಿಯವರು ಏಕಪಕ್ಷೀಯವಾಗಿ ಇಲೆಕ್ಟ್ರಿಕ್ ಆಟೋ ರಿಕ್ಷಾ ಬಗ್ಗೆ ಆದೇಶ ಮಾಡಿರುವುದನ್ನು ಹಿಂಪಡೆಯುವ ನಿಟ್ಟಿನಲ್ಲಿ ಈ ಹೋರಾಟ ಎಚ್ಚರಿಕೆಯ ಕರೆಗಂಟೆ. ಆದೇಶ ವಾಪಸ್ ಪಡೆಯದಿದ್ದರೆ ಜಿಲ್ಲೆಯ ಸಾವಿರಾರು ಸಂಖ್ಯೆಯ ಬದುಕಿಗೆ ಕೊಳ್ಳಿ ಇಟ್ಟಂತೆ ಎಂದರು. ಮಾತೆತ್ತಿದರೆ ಕೇಂದ್ರ ಸರಕಾರದ ತೀರ್ಮಾನ ಎನ್ನುತ್ತಾರೆ. ಆದರೆ ಪಕ್ಕದ ಉಡುಪಿ ಅಥವಾ ಬೇರೆ ಜಿಲ್ಲೆಗಳಲ್ಲಿ ಇಲ್ಲದ ಆದೇಶ ದ.ಕ ಜಿಲ್ಲೆಯಲ್ಲಿ ಯಾಕೆ ಎಂದು ಪ್ರಶ್ನಿಸಿದ ಅವರು, ಎಲೆಕ್ಟ್ರಿಕ್ ಕಂಪನಿಗಳ ಜೊತೆ ಶಾಮೀಲಾಗಿ ಈ ತೀರ್ಮಾನವನ್ನು ಜಿಲ್ಲಾಡಳಿತ ಮಾಡಿದೆ ಎಂದು ಆರೋಪಿಸಿದರು. ನಗರದಲ್ಲಿ ಏಳರಿಂದ ಒಂಬತ್ತು ಸಾವಿರ ರಿಕ್ಷಾ ಚಾಲಕರು ಬಾಡಿಗೆಗಾಗಿ ಪರಿತಪಿಸುತ್ತಿದ್ದಾರೆ. ರಿಕ್ಷಾ ಪಾರ್ಕ್ ನಲ್ಲಿ ಲೆಕ್ಕಕ್ಕಿಂತ ಹೆಚ್ಚು ರಿಕ್ಷಾ ನಿಂತರೆ ಪೋಲೀಸರು ಪ್ರಕರಣ ದಾಖಲಿಸುತ್ತಾರೆ. ಸುಮಾರು ಒಂಬತ್ತು ಸಾವಿರ ರಿಕ್ಷಾಗಳಿಗೆ 115 ಅಧಿಕೃತ ಪಾರ್ಕ್ ಇರುವುದು. ಹೀಗಿರುವಾಗ ಇಷ್ಟು ರಿಕ್ಷಾ ಗಳು ಪಾರ್ಕ್ ಮಾಡುವುದು ಎಲ್ಲಿ ಎಂದು ಪ್ರಶ್ನಿಸಿದರು.

Also Read  'ಕಾಂಗ್ರೆಸ್‌ನಲ್ಲಿ ಡಿಕೆ ಶಿವಕುಮಾರ್ ಸ್ಥಿತಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ'- ಅಶೋಕ್

error: Content is protected !!
Scroll to Top