►► ಸಂಪಾದಕೀಯ ► ಭಗವಂತನು ಮನುಷ್ಯನಿಗೆ ಹಸಿವು ನೀಡಿರುವುದು ತಪ್ಪೇ…? ► ಅಲ್ಲ ಆತ ಬಡವನಾಗಿ ಹುಟ್ಟಿದ್ದು ತಪ್ಪೇ…?

(ನ್ಯೂಸ್ ಕಡಬ) newskadaba.com ಸಂಪಾದಕೀಯ, ಫೆ.26. ಭಗವಂತನು ಮನುಷ್ಯನಿಗೆ ಹಸಿವು ನೀಡಿರುವುದು ತಪ್ಪೇ…? ಅಲ್ಲ ಆತ ಬಡವನಾಗಿ ಹುಟ್ಟಿದ್ದು ತಪ್ಪೇ…? ಅಲ್ಲ ಆತ ಆದಿವಾಸಿಯಾಗಿ ಹುಟ್ಟಿದ್ದು ತಪ್ಪೇ…? ಅಲ್ಲ ಆತ ಕರಿಯವನಾಗಿ ಹುಟ್ಟಿದ್ದು ತಪ್ಪೇ.‌‌..? ಹೀಗೆಂದು ನಾವು ಅವಲೋಕಿಸುವ ಕಾಲ ಸನ್ನಿಹಿತವಾಗಿದೆ.

ವಿದ್ಯಾವಂತರ ರಾಜ್ಯವಾದ ಕೇರಳದ ಪಾಲಕ್ಕಾಡ್ ಜಿಲ್ಲೆಯ ಅಟ್ಟಪಾಡಿ ಎಂಬಲ್ಲಿ ಫೆಬ್ರವರಿ 22 ರಂದು 30 ರ ಹರೆಯದ ಅದಿವಾಸಿ ಯುವಕನೋರ್ವನನ್ನು ಹಸಿವು ಸಹಿಸಲು ಸಾಧ್ಯವಾಗದೇ ‘ತುತ್ತು ಅನ್ನ ಕದ್ದ’ ಕಾರಣಕ್ಕಾಗಿ ಅಲ್ಲಿನ ವಿಘ್ನ ಸಂತೋಷಿಗಳು ಹಿಂಸಿಸಿ ಹೊಡೆದು ಕೊಂದಿದ್ದಲ್ಲದೆ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚುವ ಮೂಲಕ ಸಂಭ್ರಮಿಸಿದ್ದಾರೆ. ತುತ್ತು ಅನ್ನಕ್ಕಾಗಿ ಕೈಚಾಚಿದ ವ್ಯಕ್ತಿಗೆ ಅನ್ನ ನೀಡದಿರುವುದರಿಂದ ಆ ಬಡವ ಅನ್ನ ಕದಿಯಲು ನಾವೇ ಕಾರಣವಲ್ಲವೇ..? ಅಷ್ಟಕ್ಕೂ ಆ ಯುವಕನ ಕೈಚೀಲದಲ್ಲಿ ದೊರೆತ ವಸ್ತುಗಳು ಯಾವುವೆಂದು ತಿಳಿದಿದೆಯಾ..? 100 ಗ್ರಾಂ ಕೊತ್ತಂಬರಿ ಹುಡಿ, 100 ಗ್ರಾಂ ಮೆಣಸಿನ ಹುಡಿ, 2 ಈರುಳ್ಳಿ, 2 ಕೋಳಿ ಮೊಟ್ಟೆ, 2 ಕಟ್ಟು ಬೀಡಿ ಹಾಗೂ 1 ಟಾರ್ಚ್ ಲೈಟ್. ಕದಿಯುವುದೇ ಆತನ ದಿನನಿತ್ಯದ ಕಾಯಕವಾಗಿರುತ್ತಿದ್ದರೆ ಆತ ಧರಿಸಿದ್ದ ಬಟ್ಟೆಯಲ್ಲಿ, ಆತನ ಹಾವಭಾವದಲ್ಲಿ ಗುರುತಿಸಬಹುದಿತ್ತು. ಅದು ಬಿಟ್ಟು ಕಾಡಿನಲ್ಲಿ ವಾಸಿಸುತ್ತಿದ್ದ ಅಪರೂಪಕ್ಕೊಮ್ಮೆ ನಾಡಿಗೆ ಆಗಮಿಸುತ್ತಿದ್ದ ಮಾನಸಿಕ ಅಸ್ವಸ್ಥತೆಯಿಂದ ಕೂಡಿದಂತಹ ಅಮಾಯಕ ಮಧು ಎಂಬ ಆದಿವಾಸಿ ಯುವಕನಿಗೆ ಬೇಕಾಬಿಟ್ಟಿಯಾಗಿ ಹೊಡೆದ ದುಷ್ಟರಿಗೆ ಆತನ ಹಸಿವಿನ ಆಳವನ್ನು ಯೋಚಿಸುವಷ್ಟೂ ಬುಧ್ಧಿ ಇಲ್ಲದೇ ಹೋಯಿತಲ್ವಾ ಎಂದು ಚಿಂತಿಸುವಾಗ ಮೈಜುಂ ಎನ್ನುತ್ತದೆ.

Also Read  ತೊಕ್ಕೊಟ್ಟು ಬಳಿ ಕಾರು, ಬೈಕ್ ಅಪಘಾತ : ಬೈಕ್ ಸವಾರರು ಗಂಭೀರ

ಬಹಳ ವರ್ಷಗಳಿಂದ ತನ್ನ ಕುಟುಂಬದಿಂದ ದೂರವಾಗಿ ಕಾಡಿನಲ್ಲಿ ವಾಸವಿದ್ದ ಮಧುವನ್ನು ನಾಲ್ಕು ಕಿಲೋಮೀಟರ್ ನಡೆಸಿಕೊಂಡು ಬಂದು ಕೈಕಾಲುಗಳನ್ನು ಕಟ್ಟಿ ಹಾಕಿ ಬರ್ಬರವಾಗಿ ಥಳಿಸಿ ಕೊಲೆಗೈಯಲಾಗಿತ್ತು. ಮರಣೋತ್ತರ ಪರೀಕ್ಷೆಯ ವರದಿಯಂತೆ ಆತನ ಎರಡು ಪಕ್ಕೆಲುಬುಗಳು ಮುರಿದಿದ್ದವೆನ್ನುವ ವಾಸ್ತವಾಂಶ ಹಲ್ಲೆಯ ತೀವ್ರತೆಯನ್ನು ಎತ್ತಿತೋರಿಸುತ್ತದೆ. ಅಲ್ಲದೆ ಆತ ಕುಡಿಯಲು ನೀರು ಕೇಳಿದಾಗಲೂ ನಿರಾಕರಿಸಲಾಗಿತ್ತು ಎನ್ನುವ ಅಮಾನವೀಯ ಪ್ರವೃತ್ತಿ ಖಂಡಿಸುವಂತದ್ದು. ಮದುವೆಯ ಸಭಾಂಗಣದಲ್ಲಿ, ಮದುವೆ ಮನೆಯಲ್ಲಿ, ಮಂದಿರ, ಮಸೀದಿ, ಚರ್ಚುಗಳಲ್ಲಿ ನಡೆಯುವ ಸಭೆ – ಸಮಾರಂಭಗಳಲ್ಲಿ ನಾವು ಅದೆಷ್ಟೋ ಅನ್ನವನ್ನು ಅರ್ಧ ತಿಂದು ಬಿಸಾಡುವ ಮೂಲಕ ಪೋಲು ಮಾಡುತ್ತೇವೆ. ಆದರೆ ಹಸಿದು ಬಂದು ಅನ್ನಕ್ಕಾಗಿ ಕೈಚಾಚಿ ಯಾರೂ ನೀಡದೇ ಇದ್ದಾಗ ಒಂದು ತುತ್ತು ಅನ್ನವನ್ನು ಕದ್ದು ತಿಂದನೆನ್ನುವುದು ತಪ್ಪೇ…? ಸರಕಾರಕ್ಕೆ ಸೇರಬೇಕಾದ ಸಾವಿರಾರು ಲಕ್ಷ ಕೋಟಿಗಳನ್ನು ನುಂಗಿ, ನೇಣುಗಂಬಕ್ಕೆ ಏರಲು ಅರ್ಹವಾದ ಅಪರಾಧಗಳನ್ನು ಮಾಡಿ ಕಾನೂನಿನ ಕಣ್ಣಿಗೆ ಮಣ್ಣೆರಚಿ ರಾಜಾರೋಷವಾಗಿ ಓಡಾಡುವ ಮೂಲಕ ವಿಜೃಂಭಿಸುತ್ತಿರುವ ಹಲವರ ನಡುವೆ ಹಸಿವನ್ನು ನೀಗಿಸಲು ಒಂದು ತುತ್ತು ಅನ್ನ ಕದ್ದವನು ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ ಎಂದರೆ ವಿಪರ್ಯಾಸವೇ ಸರಿ.

ಮಧು ಎಂಬ ಅಮಾಯಕನಿಗೆ ಹಿಂಸೆ ಕೊಟ್ಟು ಕೊಲ್ಲುವುದನ್ನು ವಿಡಿಯೋ ಮಾಡಿದ್ದಲ್ಲದೆ ಮರಣಶೈಯೆಯಲ್ಲೂ ಆತನ ಹತ್ತಿರ ನಿಂತು ಸೆಲ್ಫಿ ತೆಗೆಯುವ ವಿಕೃತರಿಗೂ ಒಂದು‌ ದಿನ ಸಾವು ಬರಲಿದೆ ಎನ್ನುವ ಚಿಂತೆ ಬಂದಿಲ್ಲವಲ್ಲಾ‌‌. ನಮ್ಮ ಸಮಾಜ ಯಾಕೆ ಇಷ್ಟೊಂದು ಕ್ರೂರತೆಯನ್ನು ಬೆಂಬಲಿಸುತ್ತದೆ ಎಂದು ಕೇಳಿದರೆ ಯಾರಲ್ಲೂ ಉತ್ತರ ಸಿಗಲಿಕ್ಕಿಲ್ಲ. ಮನುಷ್ಯನಲ್ಲಿ ಮಾನವೀಯತೆ ಹಾಗೂ ಕರುಣೆ ಸಂಪೂರ್ಣವಾಗಿ ಸತ್ತು ಹೋಗಿದೆ ಎನ್ನುವುದಕ್ಕೆ ಇದೂ ಒಂದು ನಿದರ್ಶನವಾಗಿದೆ. ಕೊಲೆಗಾರನ ಜಾತಿಯನ್ನು ನೋಡಿ ಆತನಿಗೆ ಬೆಂಬಲ ವ್ಯಕ್ತಪಡಿಸುವ ಮತಾಂಧ ಸಮಾಜಕ್ಕಿಂತ ಕೊಲೆಗಾರ ಯಾವ ಜಾತಿಯವನಾದರೂ, ಯಾವ ಧರ್ಮದವನಾದರೂ ಆತನಿಗೆ ಕೊಲೆಗಾರನೆಂಬ ಆರೋಪಿ ಪಟ್ಟ ಕಟ್ಟುವ ಸಮಾಜವನ್ನು ನಾವು ನಿರ್ಮಿಸಬೇಕಾಗಿದೆ. ಧರ್ಮ ಎನ್ನುವುದು ಧನಿಕನ ಆರ್ಭಟದಿಂದಲೋ, ಅಕ್ರಮಿಗಳ ಶ್ರೀರಕ್ಷೆಯಿಂದಲೋ, ರಾಜಕಾರಣಿಗಳ ವೋಟ್ ಬ್ಯಾಂಕಿನಿಂದಲೋ ಮನುಷ್ಯನನ್ನು ವಿಭಜಿಸಲು ಇರುವುದಲ್ಲ. ಬದಲಾಗಿ ಧರ್ಮವೆನ್ನುವುದು ಹಸಿದವನ ಅನ್ನ ಆಗಬೇಕಾಗಿದೆ. ಅನಾರೋಗ್ಯ ಪೀಡಿತನ ಆರೈಕೆ ಆಗಬೇಕಾಗಿದೆ. ಅನ್ಯಾಯಕ್ಕೊಳಗಾದವನ ಧ್ವನಿಯಾಗಬೇಕಾಗಿದೆ. ಬಡವನಾದವನ ಸಂರಕ್ಷಣೆಯಾಗಬೇಕಿದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಮನುಷ್ಯ ಧರ್ಮವೇನೆಂದು ತಿಳಿಯಬೇಕಿದೆ. ಮನುಷ್ಯನ ಕ್ರೂರ ಮನಸ್ಥಿತಿಯನ್ನು ಬದಲಾಯಿಸುವ ಮೂಲಕ ನಮ್ಮ ಸಮಾಜವನ್ನು ಬದಲಾಯಿಸಬೇಕಿದೆ. ಕೊಲೆಗಾರರನ್ನು ಬಂಧಿಸುವ ಕಾರ್ಯವನ್ನು ಪೊಲೀಸರೇನೋ ಮಾಡಿದ್ದಾರಾದರೂ, ಅಂತಹ ಕ್ರೂರಿಗಳಿಗೆ ಮರಣದಂಡನೆಯಂತಹ ಶಿಕ್ಷೆಯೇ ಸೂಕ್ತವಾಗಿದೆ. ಇಲ್ಲದಿದ್ದಲ್ಲಿ ಮುಂದೆಯೂ ಇಂತಹ ಕೃತ್ಯಗಳು ಪುನರಾವರ್ತನೆಯಾಗುವ ಸಂಭವವಿದೆ.

Also Read  ಕುಕ್ಕೇ ಸುಬ್ರಹ್ಮಣ್ಯದ ನೂತನ ಬ್ರಹ್ಮರಥಕ್ಕೆ ದೊರೆಯಿತು ಅದ್ದೂರಿ ಸ್ವಾಗತ ➤ ಮೆರವಣಿಗೆಯಲ್ಲಿ ಮೇಳೈಸಿತು ಮತ ಸಾಮರಸ್ಯದ ಭಾವೈಕ್ಯತೆ

ಕೊನೆಗೂ ನಾವು ಯೋಚಿಸುವ ಕಾಲ ಬಂದಿದೆ… ಭಗವಂತನು ಮನುಷ್ಯನಿಗೆ ಹಸಿವು ನೀಡಿರುವುದು ತಪ್ಪೇ…? ಅಲ್ಲ ಆತ ಬಡವನಾಗಿ ಹುಟ್ಟಿದ್ದು ಆತನ ತಪ್ಪೇ…? ಅಲ್ಲ ಆತ ಆದಿವಾಸಿಯಾಗಿ ಹುಟ್ಟಿದ್ದು ಆತನ ತಪ್ಪೇ…? ಅಲ್ಲ ಆತ ಕರಿಯವನಾಗಿ ಹುಟ್ಟಿದ್ದು ಆತನ ತಪ್ಪೇ.‌‌..? ಇಂತಹ ಕೋಟ್ಯಂತರ ಅಮಾಯಕರನ್ನು ನಿರ್ಗತಿಕರನ್ನಾಗಿ ಮಾಡಿದ ಅಧಿಕಾರಶಾಹಿಗಳಿಗೆ ಧಿಕ್ಕಾರವಿರಲಿ. ನಮಗೆ ಯಾವ ನೈತಿಕತೆ ಹಾಗೂ ಯಾವ ಹಕ್ಕಿದೆ ಬಡವನಿಗೆ ಹೊಡೆಯಲು…?
ಆಲೋಚಿಸೋಣ… ಅವಲೋಕಿಸೋಣ

error: Content is protected !!
Scroll to Top