ಕಳೆದ 30 ವರ್ಷಗಳಿಂದ ‘ಡಾಮರೀಕರಣ ಭಾಗ್ಯ’ ಕಾಣದ ಮರ್ಧಾಳ – ಕೆರ್ಮಾಯಿ ಸಂಪರ್ಕ ರಸ್ತೆ ► ಚುನಾವಣೆ ಬಹಿಷ್ಕಾರದತ್ತ ಊರವರ ಚಿತ್ತ

(ನ್ಯೂಸ್ ಕಡಬ) newskadaba.com ಕಡಬ, ಫೆ.25. ಇಲ್ಲಿನ ಮರ್ಧಾಳದಿಂದ ಬಜಕೆರೆಯ ಮೂಲಕ ಕೋಡಿಂಬಾಳವನ್ನು ಸಂಪರ್ಕಿಸುವ ಜಿಲ್ಲಾ ಪಂಚಾಯತ್ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ಬಂಟ್ರ, 102 ನೆಕ್ಕಿಲಾಡಿ ಮತ್ತು ಐತ್ತೂರು ಸೇರಿದಂತೆ 3 ಗ್ರಾಮಗಳ ಸಂಪರ್ಕ ಕೊಂಡಿಯಾಗಿರುವ ಈ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ಜನರು ಸಂಚರಿಸುತ್ತಿದ್ದಾರೆ. ಸುಮಾರು 1000 ಕ್ಕೂ ಹೆಚ್ಚು ಮನೆಗಳಿಗೆ ಸಂಪರ್ಕವಿರುವ ಈ ರಸ್ತೆಯ ಮೂಲಕವೇ ಬಜಕೆರೆ ರೈಲ್ವೇ ಸ್ಟೇಷನ್, ಕೆರ್ಮಾಯಿ ಸರಕಾರಿ ಪ್ರಾಥಮಿಕ ಶಾಲೆ, ಗುಡ್ ಶೆಫರ್ಡ್ ಆಂಗ್ಲ ಮಾಧ್ಯಮ ಶಾಲೆ, 4 ಚರ್ಚುಗಳು, 1 ಭಜನಾ ಮಂದಿರ, ದೇವಸ್ಥಾನ-ದೈವಸ್ಥಾನಗಳು ಮತ್ತು ಎನ್.ಕೂಪ್, ಮಾಯಿಪಾಜೆ, ಗುರಿಯಡ್ಕ ಹರಿಜನ ಕಾಲನಿ ಮತ್ತು ಪಾದೆಮಜಲು ಹರಿಜನ ಕಾಲನಿಗೆ ತಲುಪಬೇಕಿದೆ. ಸುಮಾರು 5 ಕಿ.ಮೀ. ವ್ಯಾಪ್ತಿಯಲ್ಲಿರುವ ಈ ರಸ್ತೆಯ ಕೋರಿಯಾರ್ ಎಂಬಲ್ಲಿ ಕುಮಾರಧಾರಾ ನದಿಯು ಹರಿಯುತ್ತಿದ್ದು, ಈ ನದಿಗೆ ಸೇತುವೆ ನಿರ್ಮಾಣದ ಪ್ರಸ್ತಾಪ ಹಲವು ವರ್ಷಗಳದ್ದು. ನದಿಯ ಇನ್ನೊಂದು ಪಾರ್ಶ್ವದಲ್ಲಿ ಸಂಸದರ ಆದರ್ಶ ಗ್ರಾಮ ಯೋಜನೆಯ ‘ಬಳ್ಪ’ ಗ್ರಾಮವಿದ್ದು, ಸೇತುವೆ ನಿರ್ಮಾಣವಾದಲ್ಲಿ ಸುಲಭವಾಗಿ ಸುಳ್ಯ ತಾಲೂಕನ್ನು ಸಂಪರ್ಕಿಸಬಹುದಾಗಿದೆ.

ರಸ್ತೆ ಅಭಿವೃದ್ಧಿಯ ಬಗ್ಗೆ ಬಹಳ ಹಿಂದಿನಿಂದಲೂ ಸಹಿ ಸಂಗ್ರಹ ಮಾಡಿ ಶಾಸಕರಿಗೆ, ಸಂಸದರಿಗೆ, ಜಿಲ್ಲಾಧಿಕಾರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. ಚುನಾವಣಾ ಸಮಯದಲ್ಲಿ ಜಲ್ಲಿ ತಂದು ರಾಶಿ ಹಾಕಿ ಚುನಾವಣೆ ಮುಗಿದ ನಂತರ ಅದನ್ನು ಎತ್ತಿಕೊಂಡು ಹೋಗುವುದು ಕಳೆದ ಹಲವು ವರ್ಷಗಳಿಂದ ನಡೆಯುತ್ತಿದೆ. ಜನಪ್ರತಿನಿಧಿಗಳು ಆಗಮಿಸಿ ಟೊಳ್ಳು ಭರವಸೆಯೊಂದಿಗೆ ಜನರನ್ನು ಮೂರ್ಖರನ್ನಾಗಿಸಿ ಹೋಗುವುದಲ್ಲದೆ ಮತ್ತೇನೂ ಪ್ರಯೋಜನವಿಲ್ಲವೆನ್ನುತ್ತಾರೆ ಊರವರು. ಈ ರಸ್ತೆಯು ಜನಾರ್ದನ ಪೂಜಾರಿಯವರು ಸಂಸದರಾಗಿದ್ದ ಸಂದರ್ಭದಲ್ಲಿ ಡಾಮರೀಕರಣವಾಗಿದ್ದು, ತದ ನಂತರ ಒಂದು ಸಲ ಅಂದಾಜು 1 ಕಿ.ಮೀ. ತೇಪೆ ಕಾರ್ಯ ಮತ್ತು ಕಳೆದೆರಡು ಸಾಲಿನಲ್ಲಿ ಅಲ್ಲಲ್ಲಿ ಸುಮಾರು 200 ಮೀಟರ್ ಕಾಂಕ್ರೀಟ್ ಹಾಕಿದ್ದು ಬಿಟ್ಟರೆ ಇನ್ಯಾವುದೇ ರೀತಿಯ ಅಭಿವೃದ್ಧಿ ಕಂಡಿಲ್ಲ.

Also Read  ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ

ಈ ರಸ್ತೆಯಲ್ಲಿ ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ಸು ಸಂಚರಿಸುತ್ತಿದ್ದು, ಮಳೆಗಾಲದಲ್ಲಿ ಹೊಂಡಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಸಂಚರಿಸಲಾಗದೆ ಬಸ್ಸುಗಳನ್ನು ಅರ್ಧದಲ್ಲೇ ತಿರುಗಿಸಿ ಹೋದ ಉದಾಹರಣೆಯಿದೆ. ಕೆಲವೊಂದು ವಾಹನಗಳು ಸಂಚರಿಸುವಾಗ ಶಾಲಾ ಮಕ್ಕಳ ಸಮವಸ್ತ್ರದಲ್ಲಿ ಕೆಸರು ರಾಚಿ ಅದೆಷ್ಟೋ ಮಕ್ಕಳು ಶಾಲೆಗೆಂದು ಮನೆಯಿಂದ ಬಂದು ಅರ್ಧದಿಂದಲೇ ಹಿಂತಿರುಗಿ ಮನೆಗೆ ಹೋದದ್ದಿದೆ. ನಾಲ್ಕು ವರ್ಷಗಳ ಹಿಂದೆ ಕೆರ್ಮಾಯಿ ಚರ್ಚ್ ನವರು ಊರವರ ಜತೆ ಸೇರಿಕೊಂಡು ಸುಮಾರು 2 ಲಕ್ಷ ವೆಚ್ಚದಲ್ಲಿ ಶ್ರಮದಾನ ನಡೆಸಿದ್ದರು. ವಿವಿಧ ರಾಜಕೀಯ ಪಕ್ಷದ ಮುಖಂಡರು ದಿನನಿತ್ಯ ಇದೇ ರಸ್ತೆಯ ಮೂಲಕ ಸಂಚರಿಸುತ್ತಿದ್ದರೂ ಇದರ ಬಗ್ಗೆ ಗಮನಹರಿಸದಿರುವುದು ನಾಗರೀಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕಾರಣವನ್ನು ಮುಂದಿಟ್ಟುಕೊಂಡು ಪಕ್ಷ ಭೇದ ಮರೆತು ನಾಗರೀಕರು ಒಂದಾಗಿ ಕಳೆದ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದರು. ಬಳಿಕ ಸ್ಥಳಕ್ಕಾಗಮಿಸಿದ ಜನಪ್ರತಿನಿಧಿಗಳು ಊರವರ ಮನವೊಲಿಸಿ 2018 ರ ವಿಧಾನಸಭಾ ಚುನಾವಣೆಗೆ ಮೊದಲು ರಸ್ತೆಯನ್ನು ಅಭಿವೃದ್ಧಿಗೊಳಿಸುವ ಭರವಸೆ ನೀಡಿದ್ದರಿಂದ ಕೊನೆಕ್ಷಣದಲ್ಲಿ ಊರವರು ಮನಬದಲಾಯಿಸಿ ಚುನಾವಣೆಯಲ್ಲಿ ಪಾಲ್ಗೊಂಡಿದ್ದರು‌.

Also Read  ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ದರ ಹೆಚ್ಚಳಕ್ಕೆ ಸರ್ಕಾರ ಅಸ್ತು

ತದ ನಂತರ ಜಿಲ್ಲಾ ಪಂಚಾಯತ್ ಸದಸ್ಯ ಪಿ.ಪಿ.ವರ್ಗೀಸ್ ರವರ ಮುತುವರ್ಜಿಯಿಂದ ಮುಖ್ಯಮಂತ್ರಿ ಅಭಿವೃದ್ಧಿ ನಿಧಿಯಿಂದ ಐದು ಲಕ್ಷ ಹಾಗೂ ಜಿಲ್ಲಾ ಪಂಚಾಯತ್ ನಿಂದ ಎರಡು ಲಕ್ಷ ರೂ.ಗಳನ್ನು ಅನುದಾನದ ರೂಪದಲ್ಲಿ ಬಳಸಲಾಗಿರುವುದು ಬಿಟ್ಟರೆ ಇನ್ಯಾವುದೇ ಅಭಿವೃದ್ಧಿ ಕಂಡಿಲ್ಲ. ಕಳೆದ 25 ವರ್ಷಗಳಿಂದ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿರುವ ಎಸ್. ಅಂಗಾರರು ಹೆಚ್ಚಿನ ಎಲ್ಲಾ ರಸ್ತೆ ಅಭಿವೃದ್ಧಿಗೆ ಅನುದಾನ ನೀಡುತ್ತಿರುವಾಗ ಕೆರ್ಮಾಯಿ ರಸ್ತೆಯ ಅಭಿವೃದ್ಧಿ ವಿಚಾರದಲ್ಲಿ ಮೌನ ವಹಿಸಿರುವುದು ನಾಗರೀಕರಲ್ಲಿ ಆಕ್ರೋಶವನ್ನು ಉಂಟುಮಾಡಿದೆ. ಇದೀಗ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಕಳೆದ ಸಲದಂತೆ ಈ ಸಲವೂ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವ ಬಗ್ಗೆ ಅಲ್ಲಲ್ಲಿ ಗುಸುಗುಸು ಮಾತುಗಳು ಕೇಳಿಬರುತ್ತಿದ್ದು, ಜನಪ್ರತಿನಿಧಿಗಳನ್ನು ನಂಬಿಕೊಂಡಿರುವ ಗ್ರಾಮಸ್ಥರು ಇದೀಗ ಚುನಾವಣೆಯನ್ನು ಬಹಿಷ್ಕರಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಕೆರ್ಮಾಯಿ ರಸ್ತೆಯನ್ನು ಅಭಿವೃದ್ಧಿ ನಡೆಸುವಂತೆ ಸುಳ್ಯ ಶಾಸಕ ಎಸ್.ಅಂಗಾರರವರಲ್ಲಿ ಈಗಾಗಲೇ ಹಲವು ಬಾರಿ ಮನವಿ ಮಾಡಲಾಗಿದ್ದು, ಶೀಘ್ರದಲ್ಲೇ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ.
ಮೇದಪ್ಪ ಗೌಡ ಡೆಪ್ಪುಣಿ, ಎಪಿಎಂಸಿ ಸದಸ್ಯರು

ತೀರಾ ಹದಗೆಟ್ಟಿದ್ದ ಕೆರ್ಮಾಯಿ ರಸ್ತೆಯನ್ನು ಪಿಡಬ್ಲ್ಯೂಡಿ ರಸ್ತೆಯನ್ನಾಗಿ ಪರಿವರ್ತಿಸಲು ಪ್ರಸ್ತಾವನೆ ಕಳುಹಿಸಲಾಗಿದೆ. ಸಣ್ಣಪುಟ್ಟ ಕಾಮಗಾರಿಗಾಗಿ ಏಳು ಲಕ್ಷ ರೂ. ಅನುದಾನವನ್ನು ನೀಡಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಜಿ.ಪಂ. ನಿಧಿಯಲ್ಲಿ 1.20 ಲಕ್ಷ ಅನುದಾನವನ್ನು ತೆಗೆದಿರಿಸಲಾಗಿದೆ.

ಪಿ.ಪಿ.ವರ್ಗೀಸ್, ಜಿ.ಪಂ. ಸದಸ್ಯರು, ಕಡಬ ಕ್ಷೇತ್ರ

error: Content is protected !!
Scroll to Top