ಚೆಕ್ ಬೌನ್ಸ್: ನಟಿ ಪದ್ಮಜಾ ರಾವ್’ಗೆ 3 ತಿಂಗಳ ಜೈಲು ಶಿಕ್ಷೆ ಪ್ರಕಟ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 27. ಕನ್ನಡ ಚಿತ್ರರಂಗದ ನಟ-ನಟಿಯರ ಒಂದೊಂದೇ ವಿವಾದಗಳು ಬೆಳಕಿಗೆ ಬರುತ್ತಿದ್ದು, ಇದೀಗ ಜನಪ್ರಿಯ ನಟಿಯೊಬ್ಬರು ಜೈಲು ಸೇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಚೆಕ್ ಬೌನ್ಸ್ ಪ್ರಕರಣ ಸಾಬೀತಾಗಿರುವ ಹಿನ್ನೆಲೆ ನಟಿ ಪದ್ಮಜಾ ರಾವ್ ಅವರಿಗೆ ಮೂರು ತಿಂಗಳ ಜೈಲು ಶಿಕ್ಷೆ ಹಾಗೂ ನಲವತ್ತು ಲಕ್ಷ ರೂಪಾಯಿ ದಂಡ ವಿಧಿಸಿ ಮಂಗಳೂರಿನ ಎಂಟನೇ ಜೆಎಂಎಫ್‌ಸಿ ನ್ಯಾಯಾಲಯವು ಆದೇಶ ಹೊರಡಿಸಿದೆ.


ಸಿನಿಮಾ ಜೊತೆಗೆ ಸದ್ಯ ಕಿರುತೆರೆಯಲ್ಲೂ ಬಹುಬೇಡಿಕೆಯ ನಟಿಯಾಗಿರುವ ಪದ್ಮಜಾ ರಾವ್ ಅವರ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕು ವರ್ಷಗಳ ಹಿಂದೆಯೇ ಭಾರೀ ಸುದ್ದಿಯಾಗಿತ್ತು. ಇದೀಗ ಪ್ರಕರಣದ ತೀರ್ಪು ಹೊರಬಿದ್ದಿದ್ದು, ಪದ್ಮಜಾ ರಾವ್ ಅವರನ್ನು ದೋಷಿ ಎಂದು ತೀರ್ಪು ಕೊಟ್ಟಿರುವ ನ್ಯಾಯಾಲಯ ಅವರಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ ಎನ್ನಲಾಗಿದೆ. ತುಳು ಸಿನಿಮಾ ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು ಎಂಬವರಿಂದ ಪದ್ಮಜಾ ರಾವ್, 41ಲಕ್ಷ ರೂಪಾಯಿ ಹಣ ಪಡೆದು, ಬಳಿಕ ಹಿಂದಿರುಗಿಸದೆ ವಂಚಿಸಿದ್ದಾರೆ ಎಂದು 2021ರಲ್ಲಿ ಕೇಸ್‌ ದಾಖಲಾಗಿತ್ತು. ಪದ್ಮಜಾ ರಾವ್‌ ನಟ ವೀರೇಂದ್ರ ಶೆಟ್ಟಿ ಒಡೆತನದ ವೀರೂ ಟಾಕೀಸ್‌ ನಿರ್ಮಾಣ ಸಂಸ್ಥೆಯಿಂದ ಹಂತ ಹಂತವಾಗಿ 40 ಲಕ್ಷ ರೂಪಾಯಿಗಳನ್ನು ಸಾಲವಾಗಿ ಪಡೆದಿದ್ದರು ಎನ್ನಲಾಗಿತ್ತು.

Also Read  ಉಡುಪಿಯಲ್ಲಿ ಮುಂದುವರಿದ ಧಾರಕಾರ ಮಳೆ ➤ ಎಲ್ಲೆಡೆ ಹಲವಾರು ಮನೆಗಳು ಜಲಾವೃತ

ಈ ಲಕ್ಷಾಂತರ ಮೌಲ್ಯದ ಹಣವನ್ನು ವಾಪಸ್‌ ನೀಡದೇ ಪದ್ಮಜಾ ರಾವ್‌ ತಪ್ಪಿಸಿಕೊಂಡಿದ್ದು, ಕೊನೆಗೆ ಒತ್ತಡಕ್ಕೆ ಮಣಿದು ತಮ್ಮ ಐಸಿಐಸಿಐ ಬ್ಯಾಂಕ್ ಖಾತೆ ಚೆಕ್‌ಅನ್ನು ವೀರೂ ಟಾಕೀಸ್‌ಗೆ ನೀಡಿದ್ದರು. ಆದರೆ ಆ ಖಾತೆಯಲ್ಲಿ ಹಣವಿಲ್ಲದೆ ಚೆಕ್ ಬೌನ್ಸ್ ಆಗಿತ್ತು. ಈ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ಮುಂದುವರಿದಿತ್ತು. ನಾಲ್ಕು ವರ್ಷಗಳಷ್ಟು ಕಾಲ ನಡೆದಿದ್ದ ಪ್ರಕರಣದ ತೀರ್ಪು ಇದೀಗ ಹೊರಬಿದ್ದಿದೆ. ಈ ಪ್ರಕರಣದಲ್ಲಿ ಪದ್ಮಜಾ ರಾವ್ ಅಪರಾಧಿ ಎಂದು ಘೋಷಿಸಿದ ನ್ಯಾಯಾಲಯ 40,17,000 ರೂಪಾಯಿಗಳನ್ನು ದೂರುದಾರ ವೀರೇಂದ್ರ ಶೆಟ್ಟಿಯವರಿಗೆ ಹಾಗೂ 3,000 ರೂಪಾಯಿಗಳನ್ನು ಸರ್ಕಾರಕ್ಕೆ ಪಾವತಿಸುವಂತೆ ಆದೇಶ ನೀಡಿದೆ. ಒಟ್ಟು 40,20,000 ರೂಪಾಯಿಯನ್ನು ಪಾವತಿಸಬೇಕು. ಹಾಗೂ ಮೂರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

Also Read  ಪ್ರಾಥಮಿಕ ಆರೋಗ್ಯ ಕೇಂದ್ರಗಳಿಲ್ಲದೆ ಪರದಾಡುತ್ತಿರುವ ಗಡಿ ಗ್ರಾಮಗಳು

error: Content is protected !!
Scroll to Top