ಶ್ರೀ ಕೃಷ್ಣನ ಆದರ್ಶಗಳು ಎಲ್ಲರಿಗೂ ಪ್ರೇರಣೆ – ಶಾಸಕ ಕಾಮತ್

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 27. ಯಾವುದೇ ಜಾತಿ, ಮತದ ಭೇದವಿಲ್ಲದೆ  ಅನ್ಯ ಜಾತಿಯವರು  ತಮ್ಮ ಮಕ್ಕಳಿಗೆ ಕೃಷ್ಣವೇಶವನ್ನು  ಹಾಕುವ ಸನ್ನಿವೇಶವನ್ನು  ಕಾಣುತ್ತೇವೆ. ಶ್ರೀಕೃಷ್ಣ ಪರಮಾತ್ಮನ ಆದರ್ಶಗಳು  ಜಾತಿ ಮತವನ್ನು ಮೀರಿರುವಂಥದ್ದು. ಎಲ್ಲಾ ಜಾತಿ ಧರ್ಮದವರಿಗೂ ಪ್ರೇರಣೆಯಾಗುವಂತದ್ದು ಎಂದು ಮಂಗಳೂರು ದಕ್ಷಿಣ ಶಾಸಕ ವೇದ ವ್ಯಾಸ್ ಕಾಮತ್  ಹೇಳಿದರು. ಅವರು ಸೋಮವಾರದಂದು ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇವರ ಸಂಯುಕ್ತ ಆಶ್ರಯದಲ್ಲಿ ಸರಕಾರಿ ನೌಕರರ ಸಂಘ ನಂದಿನಿ ಸಭಾಭವನದಲ್ಲಿ ನಡೆದ ಕೃಷ್ಣ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ತಾಯಂದಿರು  ತಮ್ಮ ಮಕ್ಕಳಿಗೆ  ಕೃಷ್ಣನ ವೇಷ ಹಾಕುವ ಮೂಲಕ  ಕೃಷ್ಣ ಪರಮಾತ್ಮನನ್ನು  ಮಕ್ಕಳಲ್ಲಿ ಕಾಣುತ್ತಾರೆ. ತಮ್ಮ ಮಗು ಕೂಡಾ ಕೃಷ್ಣನಂತೆ ಆದರ್ಶ ವ್ಯಕ್ತಿಯಾಗಿ ರೂಪುಗೊಳ್ಳಬೇಕು ಎಂದು ಭಾವಿಸುತ್ತಾರೆ. ಭಗವಂತನನ್ನು  ಪರಿಶುದ್ಧ ಮನಸ್ಸಿನಿಂದ ಪ್ರಾರ್ಥಿಸಿದ್ದಲ್ಲಿ ಯಾವುದೇ ಕಠಿಣ ಸಂದರ್ಭದಲ್ಲಿ ಭಗವಂತನು ಕೈ ಹಿಡಿದು ಮುನ್ನಡೆಸುತ್ತಾನೆ ಎಂದು  ಹೇಳಿದರು. ಸರ್ವೇ ಜನಃ ಸುಖಿನೋ ಭವಂತು ಎನ್ನುವ ಸನಾತನ ಹಿಂದೂ ಧರ್ಮವು  ಸಮಾಜದ ಪ್ರತಿಯೊಬ್ಬರ ಒಳಿತನ್ನು ಬಯಸುತ್ತದೆ.  ಶ್ರೀ ಕೃಷ್ಣನಿಗೆ ಬಹಳ ಹತ್ತಿರವಾಗಿರುವ  ಗೊಲ್ಲ ಸಮುದಾಯದಲ್ಲಿ ನಾನು ಒಬ್ಬನಾಗಿ ಇರಲು ಬಯಸುತ್ತೇನೆ ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ಮಹಾನಗರ ಪಾಲಿಕೆ ಮಹಾಪೌರ  ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ,  ಪುರಾಣದಲ್ಲಿ  ನಾವು ಕೇಳಿರುವ ಕಥೆಗಳು, ಅಂಶಗಳು ಯಾವುದು ಕಾಲ್ಪನಿಕ ಅಲ್ಲ. ಇದಕ್ಕೆ ಸರಿಯಾದ ಉದಾಹರಣೆ ಎಂದರೆ  ಶ್ರೀಕೃಷ್ಣನ  ದ್ವಾರಕ ನಗರವು ಸಮುದ್ರದ ಆಳದಲ್ಲಿ ಪತ್ತೆಯಾಗಿರುವುದು. ಹರೇ ರಾಮ ಹರೇ ಕೃಷ್ಣ ಎನ್ನುವ ಸಂಸ್ಥೆಯು  ಪ್ರಪಂಚದಲ್ಲಿ ಬೇರೆ ಬೇರೆ ದೇಶದಲ್ಲಿ ಶ್ರೀ ಕೃಷ್ಣನ ಸಂದೇಶವನ್ನು  ಸಾರುತ್ತಿದೆ ಎಂದರು.

Also Read  ಬೈಕ್ - ಕಾರು ನಡುವೆ ಢಿಕ್ಕಿ ➤ ಬೈಕ್ ಸವಾರ ಗಂಭೀರ

ಉಪನ್ಯಾಸವನ್ನು ನೀಡಿದ ಕಾಲೇಜು ಶಿಕ್ಷಣ ಇಲಾಖೆ, ನಿವೃತ್ತ ಪ್ರಾಂಶುಪಾಲರು  ಡಾ. ಶ್ರೀಧರ ಮಣಿಯಾಣಿ  ಮಾತನಾಡಿ, ಭಾರತದ ಕಲಾಪ್ರಕಾರಗಳಾದ ಸಂಗೀತ, ಸಾಹಿತ್ಯ, ನೃತ್ಯ, ದಾಸ ಪರಂಪರೆ  ಶ್ರೀ ಕೃಷ್ಣನ ಪ್ರೇರಣೆಯಿಂದ  ಬೆಳೆದಿರುವಂತದ್ದು. ಹುಟ್ಟಿನಿಂದ ಯಾರೂ ಶ್ರೇಷ್ಠರಲ್ಲ ಅವರ ಭಕ್ತಿ ಅವರ ಅವರ ಕರ್ಮ ಅವರನ್ನು ಉತ್ತಮ ವ್ಯಕ್ತಿಯಾಗಿ  ರೂಪುಗೊಳ್ಳುವಂತೆ ಮಾಡುತ್ತದೆ. ಶ್ರೀ ಕೃಷ್ಣನ  ಜನನದ ಉದ್ದೇಶವೇ ದುಷ್ಟ ಸಂಹಾರ ಶಿಷ್ಟ ಸಂರಕ್ಷಣೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಸೌರಭ ಕಲಾ ಪರಿಷತ್, ಡಾ. ಶ್ರೀ ವಿದ್ಯಾ ಮುರುಳೀಧರ್ ಶಿಷ್ಯ ವೃಂದ ಇವರ ವತಿಯಿಂದ  ಶ್ರೀ ಕೃಷ್ಣ ಲಹರಿ ನೃತ್ಯಾವಳಿ  ಹಾಗೂ ನೃತ್ಯ ಸೌರಭ ನಾಟ್ಯಾಲಯ, ವಿದ್ವಾನ್ ಪ್ರಮೋದ್ ಉಳ್ಳಾಲ ಶಿಷ್ಯ ವೃಂದದ ವತಿಯಿಂದ ಶ್ರೀ ಕೃಷ್ಣ ಲೀಲೆ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ  ಅಧ್ಯಕ್ಷ ಸದಾಶಿವ ಉಳ್ಳಾಲ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ತಾರಾನಾಥ್ ಗಟ್ಟಿ ಕಾಪಿಕಾಡ್, ದಕ್ಷಿಣಕನ್ನಡ ಜಿಲ್ಲಾ ಗೊಲ್ಲ ಸಮಾಜ ಸೇವಾ ಸಂಘ ಅಧ್ಯಕ್ಷ, ಟಿ ಆರ್ ಕುಮಾರಸ್ವಾಮಿ, ಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿ ಅಧ್ಯಕ್ಷ  ಎ. ಕೆ ಮಣಿಯಾಣಿ  ಬೆಳ್ಳಾರೆ  ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ ಸ್ವಾಗತಿಸಿದರು. ಬಬಿತಾ ಲತೀಶ್ ನಿರೂಪಿಸಿ ವಂದಿಸಿದರು.

error: Content is protected !!
Scroll to Top